ಮನೆ ನಿರ್ಮಿಸಲು ಬಂದಿರುವ ಕಾರ್ಮಿಕರಿಗೆ ಬೀರೂರಿನ ಅಂಬೇಡ್ಕರ್ ನಗರದ ಉದ್ಯಾನದಲ್ಲಿ ಶೆಡ್ ನಿರ್ಮಿಸಿಕೊಟ್ಟಿರುವುದು.  
ನ್ಯೂಸ್

ಕಾರ್ಮಿಕರ ವಾಸ್ತವ್ಯಕ್ಕಾಗಿ ಉದ್ಯಾನವನ್ನೇ ಬಿಟ್ಟುಕೊಟ್ಟ ಪುರಸಭೆ

ಬೀರೂರು: ಉದ್ಯಾನವೆಂದರೆ ಚಿಕ್ಕ ಚಿಕ್ಕ ಅಲಂಕಾರಿಕಾ ಗಿಡಗಳು, ಹೂವಿನ ಸಸಿಗಳು, ವಾಕಿಂಗ್ ಪಾಥ್, ಮಕ್ಕಳ ಆಟಿಕೆ ಪರಿಕರಗಳು ಇರುತ್ತವೆ. ಆದರೆ ಬೀರೂರಿನ 5ನೇ ವಾರ್ಡ್‌ನ ಅಂಬೇಡ್ಕರ್ ನಗರ ಬಡಾವಣೆಯಲ್ಲಿರುವ ಉದ್ಯಾನದಲ್ಲಿ ಎಂ ಸ್ಯಾಂಡ್, ಜಲ್ಲಿಕಲ್ಲು, ಮರಳಿನ ರಾಶಿ ಬಿದ್ದಿದೆ. ತಾತ್ಕಾಲಿಕ ವಾಸವಿರಲು ಶೆಡ್‌ಗಳನ್ನು ನಿರ್ಮಿಸಲಾಗಿದೆ. ಮರಳು ಸಾಗಿಸುವ ಲಾರಿಗಳ ಪಾರ್ಕಿಂಗ್ ಮಾಡಲಾಗಿದೆ.

ಮುಖ್ಯ ಉದ್ದೇಶವಾದ ಉದ್ಯಾನಕ್ಕೆ ಜಾಗ ಬಳಕೆಯಾಗುತ್ತಿಲ್ಲ. ಬದಲಿಗೆ ಬೀರೂರಿಗೆ ಮಂಜೂರಾದ 300 ಮನೆಗಳನ್ನು ನಿರ್ಮಿಸಲು ಬಂದಿರುವ ಕಾರ್ಮಿಕರು ವಾಸ್ತವ್ಯ ಹೂಡಿದ್ದಾರೆ. ಆ ಭಾಗದ ಮಹಿಳೆಯರು, ವೃದ್ಧರು, ಮಕ್ಕಳು ಉದ್ಯಾನಕ್ಕೆ ಕಾಲಿಡದ ಪರಿಸ್ಥಿತಿ ಇದೆ. ಮನೆ ನಿರ್ಮಿಸಲು ಬಂದ ಗುತ್ತಿಗೆದಾರ ತನ್ನ ಕಾರ್ಮಿಕರಿಗೆ ಉಳಿಯಲು ಶೆಡ್ ನಿರ್ಮಿಸಿಕೊಟ್ಟಿದ್ದಾನೆ. ಸರಕು ಸಾಗಣೆ ವಾಹನಗಳು, ಮನೆ ನಿರ್ಮಾಣ ಸಾಮಗ್ರಿ ಸಂಗ್ರಹಿಸಿಟ್ಟು ಉದ್ಯಾನದ ಜಾಗವನ್ನು ಹದಗೆಡಿಸಿದ್ದಾರೆ. ಆದರೆ ಪುರಸಭೆ ಆಡಳಿತ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿದೆ.
ಕೊಳಚೆ ನಿರ್ಮೂಲನಾ ಮಂಡಳಿಯು ಪ್ರತಿ ಮನೆಯನ್ನು (ಡಿಡಿ ಮನೆ) 330 ಚದರ ಅಡಿಯಲ್ಲಿ 4.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಡುತ್ತಿದೆ. ಲಾನುಭವಿಗಳು ನಿಯಮಾವಳಿ ಪ್ರಕಾರ ಎಸ್ಸಿ, ಎಸ್ಟಿ ಸಮುದಾಯದವರು 63 ಸಾವಿರ ರೂ. ಮತ್ತು ಇತರೆ ವರ್ಗದವರು 96 ಸಾವಿರ ರೂ. ವಂತಿಕೆ ಪಾವತಿಸಬೇಕು. ಉಳಿದ ಮೊತ್ತವನ್ನು ಮಂಡಳಿ ಮೂಲಕ ಸರ್ಕಾರ ಸಾಲ ಸೌಲಭ್ಯದ ಜತೆ ವಂತಿಕೆ ಪಾವತಿಸುತ್ತದೆ. ಈ ಯೋಜನೆಯಲ್ಲಿ ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಕಡೂರು ಪಟ್ಟಣಕ್ಕೆ 500 ಮತ್ತು ಬೀರೂರು ಪುರಸಭೆ ವ್ಯಾಪ್ತಿಗೆ 300 ಮನೆಗಳನ್ನು ಮಂಜೂರು ಮಾಡಿತ್ತು. ಅದರಂತೆ ಗುತ್ತಿಗೆದಾರ ತನ್ನ ಕಾರ್ಮಿಕರ ವಾಸ್ತವ್ಯಕ್ಕೆ ಜಾಗ ಹುಡುಕಿದಾಗ ಪುರಸಭೆ ಅಂಬೇಡ್ಕರ್ ನಗರದ ಉದ್ಯಾನದಲ್ಲಿ ಸ್ಥಳಾವಕಾಶ ಕಲ್ಪಿಸಿಕೊಟ್ಟಿದೆ.
ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡಿರುವ ಕಾರ್ಮಿಕರು ಮನಸೋ ಇಚ್ಛೆ ಬಳಸಿಕೊಳ್ಳುತ್ತಿದ್ದಾರೆ. ಕಟ್ಟಡ ಸಾಮಗ್ರಿ ಮತ್ತು ವಾಹನಗಳಿಂದಾಗಿ ಉದ್ಯಾನದ ಮೆಷ್, ಕಾಂಕ್ರೀಟ್ ನೆಲಹಾಸಿಗೆ ಹಾನಿಯಾಗಿದೆ. ಉದ್ಯಾನದ ಆವರಣದಲ್ಲಿ ದೊಡ್ಡ ಲಾರಿಗಳು ಸಂಚರಿಸಿ ಗದ್ದೆಯಂತೆ ಮಾರ್ಪಾಟಾಗಿದೆ. ಸಂಪೂರ್ಣ ಹದಗೆಟ್ಟು ನಾಗರಿಕರ ಬಳಕೆಗೆ ಬಾರದಂತಾಗಿದೆ. ಸ್ಥಳೀಯರ ವಾಯು ವಿಹಾರಕ್ಕೆ ತೊಂದರೆಯಾಗಿದೆ. ಮುಖ್ಯವಾಗಿ ಉದ್ಯಾನದ ಚಿತ್ರಣವೇ ಬದಲಾಗಿದ್ದು, ಪುರಸಭೆಯ ಹಣ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ಮೂಲ ಸೌಲಭ್ಯಗಳಲ್ಲಿ ಒಂದಾದ ಉದ್ಯಾನವನ್ನು ಸಾರ್ವಜನಿಕರ ಬಳಕೆಗೆ ಹೊರತುಪಡಿಸಿ ಬೇರ‌್ಯಾವುದೋ ಉದ್ದೇಶಕ್ಕೆ ಬಳಸುವುದಾದರೆ ಪಾರ್ಕ್ ಅಭಿವೃದ್ಧಿಗೆ ವ್ಯಯಿಸಿರುವ ಹಣವೂ ವ್ಯರ್ಥವಾದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಉದ್ಯಾನವನ್ನು ಸಾರ್ವಜನಿಕರಿಗೆ ಉಳಿಸಿಕೊಡಬೇಕಿದೆ.
ಬೇರೆ ಜಾಗ ನೀಡಬಹುದಿತ್ತು: ಪುರಸಭೆಯಿಂದ ಉದ್ಯಾನಕ್ಕೆ ಕಬ್ಬಿಣದ ಮೆಷ್ ಅಳವಡಿಸಿ, ಪ್ರವೇಶದ್ವಾರ ನಿರ್ಮಿಸಲಾಗಿತ್ತು. ನಿರ್ವಹಣೆಯಲ್ಲಿ ಪುರಸಭೆ ತೋರಿದ ನಿರ್ಲಕ್ಷೃದಿಂದ ಹಾಳುಬಿದ್ದಂತಾಗಿದೆ. ನಂತರದ ದಿನಗಳಲ್ಲಿ ಅಭಿವೃದ್ಧ್ದಿಗೆ 2 ಹಂತದಲ್ಲಿ ಹಣ ಬಿಡುಗಡೆಯಾಗಿದೆ. 2020ರಲ್ಲಿ 7.56 ಲಕ್ಷ ರೂ. ಮತ್ತು 2021ರಲ್ಲಿ ಇಂಟರ್‌ಲಾಕ್ (ಪಾರ್ಕ್‌ನ ನೆಲಹಾಸು) ಅಳವಡಿಸಲು 1.75 ಲಕ್ಷ ರೂ. ಮಂಜೂರು ಮಾಡಿದ್ದು, ಕಾಮಗಾರಿಯೂ ಪೂರ್ಣವಾಗಿತ್ತು. ಉದ್ಯಾನದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳೂ ಪ್ರಯೋಜನಕ್ಕೆ ಬಾರದಂತಾಗಿದೆ. ಕಾರ್ಮಿಕರ ವಾಸ್ತವ್ಯಕ್ಕೆ ಗೆ ಪುರಸಭೆ ವ್ಯಾಪ್ತಿಯಲ್ಲೇ ಬೇರೆ ಜಾಗ ನೀಡಬಹುದಿತ್ತು ಎಂದು ಪುರಸಭೆ ಮಾಜಿ ಸದಸ್ಯ ಬಿ.ಕೆ.ರುದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಜೂರಾಗಿರುವ ಮನೆಗಳ ನಿರ್ಮಾಣಕ್ಕೆ ಬಂದಿರುವ ಕಾರ್ಮಿಕರ ವಾಸ್ತವ್ಯಕ್ಕೆ ಅಂಬೇಡ್ಕರ್ ನಗರದ ಉದ್ಯಾನದಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಹದಗೆಟ್ಟಿರುವ ಪಾರ್ಕ್‌ನ್ನು ಗುತ್ತಿಗೆದಾರರೇ ಸರಿಪಡಿಸಿಕೊಡುವಂತೆ ತಿಳಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಯಾನ ದುರಸ್ತಿಯನ್ನು ಅವರಿಂದಲೇ ಮಾಡಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲಾ ವಿಜಯವಾಣಿಗೆ ಮಾಹಿತಿ ನೀಡಿದರು.