ನ್ಯೂಸ್

ಎರಡು ಚಿರತೆಗಳ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಸಮೀಪದ ಕಂಚುಗಹಳ್ಳಿಯ ಮನೆಯೊಂದರ ಮುಂಭಾಗ ಮಂಗಳವಾರ ರಾತ್ರಿ ಎರಡು ಚಿರತೆಗಳು ಅಡ್ಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಯಾಗಿದೆ.

ಗ್ರಾಮದಿಂದ ದಾಸನದೊಡ್ಡಿಗೆ ಹೋಗುವ ರಸ್ತೆ ಬದಿಯಲ್ಲಿರುವ ಬೆಂಗಳೂರು ಮೂಲದ ಕುಟುಂಬಕ್ಕೆ ಸೇರಿದ ತೋಟದ ಮನೆಯ ಮುಂದೆ ಚಿರತೆಗಳು ಕಾಣಿಸಿಕೊಂಡಿವೆ. ರಾತ್ರಿ ಬೀದಿ ನಾಯಿಗಳು ಬಹಳ ಸಮಯ ಬೊಗಳುತ್ತಿದ್ದ ಶಬ್ದ ಕೇಳಿ ಮನೆ ಮಾಲೀಕ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಈ ವೇಳೆ ಎರಡು ಚಿರತೆಗಳು ಮನೆ ಅಂಗಳದಲ್ಲಿ ಓಡಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ಫುಟೇಜ್‌ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದಾರೆ. ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಗ್ರಾಮಕ್ಕೆ ಕೂಗಳತೆ ದೂರದಲ್ಲಿ ಈ ತೋಟ ಇದ್ದು, ಸುತ್ತಲಿನ ಜಮೀನುಗಳಲ್ಲಿ ಗ್ರಾಮದ ರೈತರು ಕೃಷಿ ಚಟುವಟಿಕೆ ನಡೆಸುವುದರಿಂದ ಜಮೀನಿಗೆ ತೆರಳಲು ಭಯಭೀತರಾಗಿದ್ದಾರೆ.