ಮುಂಬೈ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಓಟಿಟಿಗಳಿಗೆ ಸಖತ್ ಡಿಮ್ಯಾಂಡ್ ಬಂದು ಬಿಟ್ಟಿದೆ. ಅದರಲ್ಲೂ ಲಾಕ್ಡೌನ್ ನಂತರ ಚಿತ್ರಮಂದಿರಗಳು ಮತ್ತು ಟಿವಿಗಿಂತ ಹೆಚ್ಚಾಗಿ ಓಟಿಟಿಯಲ್ಲಿ ಚಿತ್ರಗಳನ್ನು ಮತ್ತು ವೆಬ್ಸೀರೀಸ್ಗಳನ್ನು ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ನೋಡುಗರನ್ನು ಸೆಳೆಯುವುದಕ್ಕೆ ಓಟಿಟಿಗಳು ಸಹ ಹೊಸಹೊಸ ಚಿತ್ರ ಮತ್ತು ವೆಬ್ಸೀರೀಸ್ಗಳು ನಿರ್ಮಿಸಲು ಹಣ ಎತ್ತಿಡುತ್ತಿವೆ. ಹಾಗೆ, ಕಳೆದ ವರ್ಷ ಆರು ಓಟಿಟಿಗಳು ಹೊಸ ಕಂಟೆಂಟ್ ಸೃಷ್ಟಿಸುವುದಕ್ಕೆ ಮಾಡಿರುವ ಖರ್ಚು ಎಷ್ಟು ಗೊತ್ತ?
ಕೇಳಿದರೆ ಆಶ್ಚರ್ಯವಾಗಬಹುದು. ಒಂದ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಅಮೇಜಾನ್ ಪ್ರೈಮ್, ನೆಟ್ಫ್ಲಿಕ್ಸ್, ಡಿಸ್ನಿ ಹಾಟ್ಸ್ಟಾರ್, ಸೋನಿ ಲಿವ್, ಜೀ5 ಮತ್ತು ವೂಟ್ ಎಂಬ ಆರು ಪ್ರಮುಖ ಓಟಿಟಿ ವೇದಿಕೆಗಳು ಖರ್ಚು ಮಾಡಿರುವ ಮೊತ್ತ ಎಷ್ಟು ಗೊತ್ತಾ? 600ರಿಂದ 700 ಮಿಲಿಯನ್ ಡಾಲರ್ಗಳು. ಅದನ್ನು ರೂಪಾಯಿಗಳ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 5000 ಕೋಟಿ ರೂ.ಗಳಷ್ಟಾಗುತ್ತದೆ.
ಹಾಗೆ ನೋಡಿದರೆ, ಕಳೆದ ವರ್ಷ ಓಟಿಟಿಗಳಿಗೆ ಅಷ್ಟೇನೂ ಒಳ್ಳೆಯ ವರ್ಷವಾಗಿರಲಿಲ್ಲ. ಹಲವು ವೆಬ್ಸೀರೀಸ್ಗಳ ಸೀಕ್ವೆಲ್ಗಳು ಬಂದವಾದರೂ, ಅವೆಲ್ಲ ದೊಡ್ಡ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಲಿಲ್ಲ. ಇನ್ನು, ಓಟಿಟಿಗಳಲ್ಲಿ ಯಾವೊಂದು ಚಿತ್ರ ಸಹ ನೇರವಾಗಿ ಬಿಡುಗಡೆಯಾಗಿ ಹಿಟ್ ಆಗಲಿಲ್ಲ. ಹಾಗಾಗಿ, 2020 ಅಥವಾ 2021ಕ್ಕೆ ಹೋಲಿಸಿದರೆ, ಕಳೆದ ವರ್ಷ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳು ಕಡಿಮೆ ಎಂದೇ ಹೇಳಬಹುದು. ಆದರೂ ಒಂದು ವರ್ಷದಲ್ಲಿ ಆರು ಓಟಿಟಿಗಳು ಇಷ್ಟೊಂದು ಮೊತ್ತ ಖರ್ಚು ಮಾಡಿರುವುದು ದೊಡ್ಡ ಆಶ್ಚರ್ಯವೇ ಹೌದು.
ಈ ಪೈಕಿ ಅಮೇಜಾನ್ ಒಂದೇ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ 40 ಹೊಸ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಾಗಿ ಘೋಷಿಸಿದೆ. ನೆಟ್ಫ್ಲಿಕ್ಸ್ ಸಹ ಒಂದಿಷ್ಟು ಘೋಷಣೆಗಳನ್ನು ಮಾಡಿದ್ದು, ಅವುಗಳಲ್ಲಿ ಕೆಲವು ಕಳೆದ ವರ್ಷ ಬಿಡುಗಡೆಯಾದರೆ, ಈ ವರ್ಷ ಇನ್ನಷ್ಟು ಬಿಡುಗಡೆಯಾಗಲಿವೆ.
ಸದ್ಯ ಭಾರತದಲ್ಲಿ ಓಟಿಟಿ ನೋಡುವವರ ಸಂಖ್ಯೆ ಕಡಿಮೆ ಇದ್ದರೂ, ಮುಂದಿನ ವರ್ಷಗಳಲ್ಲಿ ಗಣನೀಯವಾಗಿ ಏರಲಿವೆ ಎಂಬ ಮಾತೊಂದು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಪ್ರಮುಖ ಓಟಿಟಿ ವೇದಿಕೆಗಳು ಈಗಲೇ ಒಂದಿಷ್ಟು ಹೊಸ ಮತ್ತು ಸ್ವಂತ ಕಾರ್ಯಕ್ರಮಗಳನ್ನು ಮಾಡಿಟ್ಟುಕೊಳ್ಳುವುದಕ್ಕೆ ಮುಂದಾಗುತ್ತಿವೆ.