ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಪ್ರತಿಭಟನೆಗೆ ಹೆದರುವುದಿಲ್ಲ ಎಂದ ಶಾಸಕ

ಕೋಲಾರ: ಅಭಿವೃದ್ಧಿಯೇ ನನ್ನ ಗುರಿ, ಅದು ಬಿಟ್ಟು ಹಣ ಮಾಡಬೇಕು ಎಂಬ ಉದ್ದೇಶ ನನಗಿಲ್ಲ. ರೋಲ್‌ಕಾಲ್ ನನಗೆ ಗೊತ್ತಿಲ್ಲ, ಯಾರಾದರು ತಪ್ಪು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಯಾರಾದರೂ ಪ್ರತಿಭಟನೆ ಮಾಡಿದರೇನೆ ನನ್ನ ಐಡೆಂಟಿಟಿ. ಅಂತಹುದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.
ನಗರದಲ್ಲಿನ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 30 ಕೋಟಿ ರೂ. ತಂದಿದ್ದು, ಇದಕ್ಕೆ ಸಂಬಧಿಸಿದಂತೆ ಎಂಜಿನಿಯರ್ ತಂಡ ಭೇಟಿ ನೀಡಿದೆ. ನಾವು ಒಳ್ಳೆಯದು ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ಮೂರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿರುವ ಕಾಲೇಜಿನಲ್ಲಿ ನೀರಿನ ಸಮಸ್ಯೆಯಿರುವುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೈಯಿಂದ ಮೂರು ಲಕ್ಷ ರೂ. ಖರ್ಚು ಮಾಡಿ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಅದಾಗಿಯೂ, ಸಚಿವರು ಬಂದಾಗ ಶೌಚಗೃಹಕ್ಕೆ ನೀರಿನ ಸಮಸ್ಯೆಯಿದೆ ಎಂದು ಹೇಳಿದರೆ ನಮಗೆ ಅವಮಾನ ಆಗುವುದಿಲ್ಲವೇ ಎಂದರು.

ತಿಂಗಳಿಗೊಂದು ಪ್ರತಿಭಟನೆ ಮಾಡಿ!
ಕಾಲೇಜು ವೀಕ್ಷಣೆ ಸಂದರ್ಭದಲ್ಲಿ ನಾನು ಬಳಸಿದ ಪದಕ್ಕೆ ಸಂಬಧಿಸಿದಂತೆ ಪ್ರತಿಭಟನೆ ನಡೆಯುತ್ತಿದೆ. 25 ವರ್ಷಗಳಿಂದ ನನ್ನ ವಿರುದ್ಧ ಹೋರಾಟ ಮಾಡಿದವರಿಂದಲೇ ನನಗೆ ಅನುಕೂಲವಾಗಿದೆ. ಚುನಾವಣೆ ಸಂದರ್ಭದಲ್ಲಿ ದಿನಕ್ಕೊಬ್ಬರು ನನ್ನ ವಿರುದ್ಧ ಹೇಳಿಕೆ ನೀಡಿದರು. ಆದರೆ, ನಾನು 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆದ್ದರಿಂದ ನನ್ನ ವಿರುದ್ಧ ತಿಂಗಳಿಗೊಂದು ಪ್ರತಿಭಟನೆ ಮಾಡಲಿ ಎಂದು ಶಾಸಕರು ಹೇಳಿದರು.

ಯಾವುದೇ ನೋಟಿಸ್ ಬಂದಿಲ್ಲ
ನಗರಸಭೆ ಸದಸ್ಯ ಮುಬಾರಕ್ ಜಾತಿ-ಧರ್ಮಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾವೆಂದು ಅಂತಹ ಕೆಲಸ ಮಾಡಿಲ್ಲ. ನನ್ನ ವಿರುದ್ಧ ಯಾವುದೇ ತನಿಖೆ ನಡೆಸಿದರೂ ಎಲ್ಲದಕ್ಕೂ ಸಿದ್ಧನಿದ್ದು, ಸಂದರ್ಭ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಮಾನನಷ್ಟ ಮೊಕದ್ದಮೆ ನೋಟಿಸ್ ನನಗೆ ಬಂದಿಲ್ಲ ಎಂದು ಕೊತ್ತೂರು ಮಂಜುನಾಥ್ ಸ್ಪಷ್ಟಪಸಿದರು.

ಬಾಕ್ಸ್..

  • ಡ್ರಮ್ ಕಿತ್ತೋಗತ್ತೆ ಅಂತ ಹೇಳಿದ್ದು
    ಅಧಿಕಾರಿಗಳು ತಪ್ಪು ಮಾಡಿದರೆ ಬಿಟ್ಟು ಬಿಡಬೇಕಾ?, ರೋಲ್‌ಕಾಲ್ ಮಾಡಿಕೊಂಡು ಸುಮ್ಮನಿದ್ದರೆ ಒಳ್ಳೆಯವರೇ?. ನಾನು ಶೌಚಗೃಹದಲ್ಲಿರುವ ಡ್ರಮ್ ಕಿತ್ತೋಗುತ್ತದೆ ಎಂದು ಹೇಳಿದ್ದೇನೆ ಹೋರತು ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಶಾಸಕರು ತಿಳಿಸಿದರು. ನೀವು ತಪ್ಪಾಗಿ ಅರ್ಥ ಮಾಡಿಕೊಂಡರೇ ನಾನೇನು ಮಾಡಲಿ. ನಾನು ಯಾರಿಗೂ ಬೇಸರವಾಗುವಂತಹ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
    3 ಸಾವಿರ ಹೆಣ್ಣು ಮಕ್ಕಳಿರುವ ಕಾಲೇಜಿನಲ್ಲಿ ನೀರಿನ ಸಮಸ್ಯೆಯಿದ್ದರೆ ಅವರಿಗೆ ಬೇಸರವಾಗುವುದಿಲ್ಲವೇ, ಶಿಕ್ಷಕರಿಗೆ ಶೌಚಗೃಹ ಇಲ್ಲ ಎಂದರೆ ಅವರು ಬಯಲಿಗೆ ಹೋಗಬೇಕಾ?, ಇರುವುದನ್ನು ಏಕೆ ನಿರ್ವಹಣೆ ಮಾಡುತ್ತಿಲ್ಲ, ಶಾಸಕರು ಹೋಗಿ ಶೌಚಗೃಹಗಳನ್ನು ತೋಳೆಯಬೇಕಾ ಎಂದು ಕಿಡಿಕಾರಿದರು.
  • ನೀರು ಹರಿಸದೆ ಇರುವುದಕ್ಕೆ ಅಸಮಾಧಾನ
    ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು, ಆದರೆ ಈಗ ನೀರನ್ನು ಬೇರೆ ಜಿಲ್ಲೆಗಳಿಗೆ ಹರಿಸುತ್ತಿರುವ ಬಗ್ಗೆ ಎರಡೂ ಜಿಲ್ಲೆಗಳ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನವಿದೆ ಎಂದು ಪರಿಷತ್ ಸದಸ್ಯ ಅನಿಲ್‌ಕುಮಾರ್ ತಿಳಿಸಿದರು.
    ಎತ್ತಿನಹೊಳೆ ಚಾಲನೆ ಕಾರ್ಯಕ್ರಮದಲ್ಲಿ ನಾವೆಲ್ಲರೂ ಅಸಮಾಧಾನದಿಂದಲೇ ಭಾಗಿಯಾಗುತ್ತಿದ್ದು, ಸಿಎಂ ಹಾಗೂ ಡಿಸಿಎಂಗೆ ಮನವಿ ಮಾಡಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಹರಿಸುವಂತೆ ಒತ್ತಾಯ ಮಾಡುತ್ತೇವೆ ಎಂದರು.