ಬೆಂಗಳೂರು: ಯುವತಿಯ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸದಿಂದ ಇರಿದು ಕೊಂದಿದ್ದಾರೆ. ಅಂಜನಪ್ಪ ಗಾರ್ಡನ್‌ನಲ್ಲಿ ಈ ಘಟನೆ ನಡೆದಿದೆ.
ಕೆ.ಪಿ ಅಗ್ರಹಾರದ ಮಾರ್ಕಂಡೇಶ್ವರ ನಗರದ ನಿವಾಸಿಯಾದ ಶರತ್ ಕುಮಾರ್ (೩೦) ಕೊಲೆಯಾದವನು. ಪರಿಚಿತರೊಬ್ಬರ ಸಾವು ಆದ ಹಿನ್ನೆಲೆಯಲ್ಲಿ ಶರತ್ ಕುಮಾರ್ ಅಂಜನಪ್ಪ ಗಾರ್ಡನ್‌ನಲ್ಲಿರುವ ತನ್ನ ಅಣ್ಣ ಪ್ರಭುವಿನ ಮನೆಗೆ ಬಂದಿದ್ದ. ಗುರುವಾರ ಬೆಳಿಗ್ಗೆ ೬:೩೦ ರ ಸಮಯದಲ್ಲಿ ಯುವತಿಯ ವಿಚಾರಕ್ಕೆ ತನಗೆ ಗೊತ್ತಿರುವ ೩-೪ ಜನರೊಂದಿಗೆ ಜಗಳ ಮಾಡಿಕೊಂಡಿದ್ದು, ಈ ಸಮಯದಲ್ಲಿ ಆರೋಪಿಗಳು ಮಾರಕಾಸದಿಂದ ಶರತ್ ಕುಮಾರ್ ಹೊಟ್ಟೆಯ ಎಡ ಭಾಗಕ್ಕೆ ಚುಚ್ಚಿದ್ದಾರೆ. ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶರತ್ ಕುಮಾರ್ ಮೃತಪಟಿದ್ದಾನೆ. ಮೃತನ ಪತ್ನಿ ಆನಂದಿ ಅವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‌ಪೇಟೆ ಪೊಲೀಸರು ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.