ಬೈಲಕುಪ್ಪೆ: ಕೆ.ಹರಳಹಳ್ಳಿ ಗ್ರಾಮಕ್ಕೆ ಸೇರಿದ ಜಮೀನಿನಲ್ಲಿ ರೈತ ಬೆಳೆದಿದ್ದ ಮುಸುಕಿನ ಜೋಳದ ಬೆಳೆಯನ್ನು ದುಷ್ಕರ್ಮಿಗಳು ಸೋಮವಾರ ರಾತ್ರಿ ಟ್ರಾೃಕ್ಟರ್‌ನಿಂದ ಉಳುಮೆ ಮಾಡಿ ನಾಶ ಮಾಡಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಕೊಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಹರಳಹಳ್ಳಿ ಗ್ರಾಮದ ಕೆ.ಎಂ.ಸ್ವಾಮಿ ಎಂಬುವರಿಗೆ ಸೇರಿದ ಸರ್ವೇ ನಂ. 8ರಲ್ಲಿ 2 ಎಕರೆ 38 ಗುಂಟೆ ಜಮೀನಿದ್ದು, ಈ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದರು. ಆದರೆ ಕೆಲ ಕಿಡಿಗೇಡಿಗಳು ವೈಷಮ್ಯದ ಕಾರಣದಿಂದ ಉಲುಸಾಗಿ ಬೆಳೆದಿದ್ದ ಮುಸುಕಿನ ಜೋಳವನ್ನು ರಾತ್ರೋರಾತ್ರಿ ಟ್ರಾೃಕ್ಟರ್ ಬಳಸಿ ಉತ್ತು ಹಾಕಿದ್ದಾರೆ. ಈ ಸಂಬಂಧ ಜಮೀನಿನ ಮಾಲೀಕ ಕೆ.ಎಂ.ಸ್ವಾಮಿ ಬೈಲಕುಪ್ಪೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೆಲವು ದುಷ್ಕರ್ಮಿಗಳು ರಾತ್ರೋರಾತ್ರಿ ಜಮೀನಿಗೆ ಬಂದು ಮುಸುಕಿನ ಜೋಳದ ಬೆಳೆಯನ್ನು ಉತ್ತು ಹಾಕಿದ್ದಾರೆ. ಇದರಿಂದ ನನಗೆ 2 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಇದಕ್ಕೆ ಕಾರಣ ಆದವರನ್ನು ಬಂಧಿಸಿ ನನಗೆ ಪರಿಹಾರ ಒದಗಿಸಬೇಕು ಎಂದು ಕೆ.ಎಂ.ಸ್ವಾಮಿ ಒತ್ತಾಯಿಸಿದ್ದಾರೆ.