ಬೆಂಗಳೂರು: ರಸ್ತೆ ಬದಿಯಲ್ಲಿ ನಿಂತಿದ್ದ ಕಾರುಗಳು ಸೇರಿ ಸುಮಾರು ೨೧ ವಾಹನಗಳ ಗಾಜು ಒಡೆದು ಪುಂಡಾಟ ಮೆರೆದಿರುವ ಘಟನೆ ಲಗ್ಗೆರೆ ಬಳಿಯ ರಾಜೀವ್‌ಗಾಂಧಿ ನಗರದಲ್ಲಿ ಪುಡಿ ರೌಡಿಗಳು ಗುರುವಾರ ರಾತ್ರಿ ನಡೆದಿದ್ದು, ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ರಾಜೀವ್‌ಗಾಂಧಿನಗರದ ನಿವಾಸಿಗಳು ಎಂದಿನಂತೆ ಮನೆ ಮುಂದೆ ರಸ್ತೆ ಬದಿಯಲ್ಲಿ ತಮ್ಮ ಕಾರು, ಆಟೋ, ಸರಕು ಸಾಗಣೆ ವಾಹನ, ಬೈಕ್‌ಗಳನ್ನು ನಿಲ್ಲಿಸಿದ್ದರು. ರಾತ್ರಿ ೨ ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ರಾಜೀವ್‌ಗಾಂಧಿ ನಗರಕ್ಕೆ ಬಂದಿದ್ದ ಮೂವರು ಪುಡಿ ರೌಡಿಗಳು ರಸ್ತೆಯುದ್ದಕ್ಕೂ ನಿಂತಿದ್ದ ವಾಹನಗಳ ಮೇಲೆ ಮಚ್ಚು ಲಾಂಗ್‌ಗಳಿಂದ ದಾಳಿ ನಡೆಸಿದ್ದಾರೆ.
ಗೊಂಬೆಯ ಮಾಸ್ಕ್ ಧರಿಸಿದ್ದರು:
ತಮ್ಮ ಗುರುತು ಸಿಗಬಾರದೆಂದು ಮುಖಕ್ಕೆ ಗೊಂಬೆಯ ಮಾಸ್ಕ್ ಧರಿಸಿ ಬಂದಿದ್ದ ದುಷ್ಕರ್ಮಿಗಳು ಸಿಕ್ಕಸಿಕ್ಕ ವಾಹನಗಳ ಮೇಲೆ ಮಚ್ಚು ಲಾಂಗ್ ಬೀಸಿ, ಗಾಜುಗಳನ್ನು ಪುಡಿ ಪುಡಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳೀಯ ನಿವಾಸಿಗಳು ಶುಕ್ರವಾರ ಬೆಳಗ್ಗೆ ಮನೆಯಿಂದ ಹೊರ ಬಂದು ನೋಡಿದಾಗ ವಾಹನಗಳು ಜಖಂಗೊಂಡಿರುವುದು ಗೊತ್ತಾಗಿದೆ. ಕಿಡಿಗೇಡಿಗಳು ೧೫ ಕಾರು, ಆಟೋಗಳು, ಸರಕು ಸಾಗಣೆ ವಾಹನಗಳ ಗಾಜು ಒಡೆದು ಹಾಕಿದ್ದಾರೆ.
ಘಟನೆ ಸಂಬಂಧ ರಾಜಗೋಪಾಲನಗರ ಠಾಣೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಡಿಜಿಟಲ್ ಸಾಕ್ಷಿಗಳನ್ನು ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ಡಿಕೆ ಸಹೋದರರ ವಿರುದ್ಧ ಮುನಿರತ್ನ ವಾಗ್ದಾಳಿ:
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ನನ್ನ ಕ್ಷೇತ್ರ ಗಾಂಜಾ ಅಡ್ಡೆಯಾಗಿದೆ. ಕಾಂಗ್ರೆಸ್‌ನ ಕೆಲ ಪ್ರಭಾವಿ ನಾಯಕರ ಬೆಂಬಲಿಗರು ಕಾರುಗಳ ಗಾಜು ಒಡೆದು ಪುಂಡಾಟ ಮೆರೆದಿದ್ದಾರೆ. ರಾಜರಾಜೇಶ್ವರಿನಗರ ಕ್ಷೇತ್ರವನ್ನು ಕನಕಪುರದಂತೆ ಪುಂಡ ಪೋಕರಿಗಳ ಅಡ್ಡೆ ಮಾಡಿದ್ದು, ಕ್ಷೇತ್ರವು ನನ್ನ ನಿಯಂತ್ರಣದಲ್ಲಿ ಇಲ್ಲ ಎಂದು ಹೆಸರು ಹೇಳದೆ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಮುನಿರತ್ನ ವಿರುದ್ಧ ಮುಗಿಬಿದ್ದರು. ಶಾಸಕರಿಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರು, ರಾಜಕೀಯಕ್ಕೆ ದುರುದ್ದೇಶಕ್ಕೆ ಮನಬಂದಂತೆ ಮಾತನಾಡಬೇಡಿ. ಶಾಸಕರಾಗಿ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಶೂನ್ಯವಾಗಿದೆ ಆದರೆ ಸಂಸದ ಡಿ.ಕೆ.ಸುರೇಶ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಆದರೆ, ನೀವು ಕ್ಷೇತ್ರಕ್ಕೆ ಏನು ಮಾಡಿದ್ದೀರಿ? ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದರಿಂದ ಗಲಿಬಿಲಿಯಾದ ಮುನಿರತ್ನ, ಕಾರು ಹತ್ತಿ ಸ್ಥಳದಿಂದ ನಿರ್ಗಮಿಸಲು ಮುಂದಾದರು. ಆಗ ಶಾಸಕರ ಕಾರು ಅಡ್ಡಗಟ್ಟಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರನ್ನು ಪೊಲೀಸರು ತಡೆದರು. ಈ ವೇಳೆ ನೂಕು ನುಗ್ಗಲು ಉಂಟಾಗಿ ಹಲವರು ಗಾಯಗೊಂಡರು.