ಶಿಕಾರಿಪುರ: ಶ್ರೀಹರಿಯ ನಾಮಸ್ಮರಣೆಯಿಂದ ಕ್ಲೇಶ ದೂರವಾಗಿ ಮನಸ್ಸು ಪರಿಶುದ್ಧವಾಗುತ್ತದೆ. ಭಕ್ತಿಯ ಆರಾಧನೆಯಿಂದ ಮಾತ್ರ ಭಗವಂತ ಪ್ರಸನ್ನನಾಗುತ್ತಾನೆ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಉಡುಗಣಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಲ, ಮಂತ್ರಾಕ್ಷತೆ ನೀಡಿ ಆಶೀರ್ವಚನ ನೀಡಿದ ಅವರು, ಸೇವಾ ಸಮಿತಿಯ ಪರಿಶ್ರಮದಿಂದ ಗುರು ರಾಘವೇಂದ್ರ ಸ್ವಾಮಿಗಳ ಶ್ರೀಮಠ ನಿರ್ಮಾಣವಾಗಿದೆ. ಶ್ರೀ ಗುರುರಾಯರ ಸಾನ್ನಿಧ್ಯದಿಂದ ಈ ಸ್ಥಳ ಪಾವನವಾಗಿದೆ ಎಂದರು.
ಸಮಷ್ಟಿ ಹಿತವೇ ನಮ್ಮ ಹಿತವಾಗಬೇಕು. ನಮ್ಮ ಮಾತುಗಳಲ್ಲಿ ಭಾವರೂಪವಾಗಿ ಶ್ರೀಹರಿ ಸದಾ ನೆಲೆಸಿದರೆ ನಮ್ಮ ಮಾತು, ನಡೆ- ನುಡಿ, ಬದುಕು ಪರಿಶುದ್ಧವಾಗುತ್ತದೆ. ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಇಂದಿಗೂ ಲಕ್ಷಾಂತರ ಜನರ ಕಷ್ಟಗಳನ್ನು ಪರಿಹರಿಸಿ ಕಲಿಯುಗದ ಕಾಮಧೇನು ಎನಿಸಿದ್ದಾರೆ ಎಂದು ಹೇಳಿದರು.
ಗುರುವಿನ ಎದುರು ನಾವು ನಿಂತಾಗ ನಮ್ಮ ತಪ್ಪುಗಳನ್ನು ತಿದ್ದಿ ಹೊಸ ಬೆಳಕನ್ನು ನಮ್ಮ ಬದುಕಿನಲ್ಲಿ ನೀಡುತ್ತಾರೆ. ಅನಾದಿ ಕಾಲದಿಂದಲೂ ಪ್ರತಿ ಸಾಮ್ರಾಜ್ಯದ ಹಿಂದೆ ಗುರುಗಳಿದ್ದು ಮಾರ್ಗದರ್ಶನ ಮಾಡುತ್ತಿದ್ದರು. ಈಗಲೂ ಮಠಗಳು ಶಿಕ್ಷಣ, ಆರೋಗ್ಯ, ಸಮಾಜಮುಖಿ ಕಾರ್ಯಗಳ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿವೆ ಎಂದರು.
ಸಮಿತಿಯ ಅಧ್ಯಕ್ಷ ರಾಜೀವ್, ಪ್ರಮುಖರಾದ ರಾಮಚಂದ್ರ ನಾಯಕ್, ಶ್ರೀನಿವಾಸ್ ವರಖೇಡಿ, ಶಂಕರ, ನಾಗೇಂದ್ರ ಹೆಬ್ಬಾರ್, ವಿಕ್ರಂ ಭಟ್, ಶಂಕರ್, ಉಡುಗಣಿ ಗ್ರಾಮಸ್ಥರು ಇದ್ದರು.