ಕೆಂಜಗಾಪುರದ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ವೃಷಭೇಂದ್ರ ಸ್ವಾಮೀಜಿ, ಕೆ.ಆರ್.ರಾಜು, ಪ್ರಮೀಳಮ್ಮ ಇದ್ದರು.  
ನ್ಯೂಸ್

ಧರ್ಮಾಚರಣೆಯಿಂದ ಮನಸ್ಸು ಶುದ್ಧ

ಶಿವಕುಮಾರ ಎಸ್.ಪಿ.

ಆನಂದಪುರ: ದೇವರ ಧ್ಯಾನ, ಪೂಜೆ, ಅಭಿಷೇಕ, ಭಕ್ತಿ ಇತ್ಯಾದಿ ಧರ್ಮಾಚರಣೆಗಳು ಮನಸ್ಸನ್ನು ಶುದ್ಧಗೊಳಿಸುತ್ತವೆ ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಕೆಂಜಗಾಪುರದ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಶ್ರಾವಣ ಪೂಜೆ ಮತ್ತು ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಎಲ್ಲವನ್ನೂ ದೇವರಿಗೆ ಅರ್ಪಿಸಿ ಕೃತಾರ್ಥರಾಗುವುದೇ ಭಕ್ತಿ. ಪ್ರತಿ ಕಾರ್ಯದಲ್ಲೂ ದೇವರ ಪೂಜೆಯ ಭಾವನೆ ತಾಳುವಂತೆ ಬಸವಾದಿ ಶಿವಶರಣರು ಹೇಳಿದ್ದರು. ಮನಪೂರ್ವಕವಾಗಿ ನಡೆಸುವ ಕಾಯಕ ಶಿವನಿಗೆ ಮೆಚ್ಚುಗೆ. ಅದಕ್ಕಾಗಿ ಕಾಯಕವೇ ಕೈಲಾಸ ಎಂದು ಹಿರಿಯರು ತಿಳಿಸಿದ್ದಾರೆ ಎಂದರು.

ತ್ಯಾಗ, ಕಷ್ಟದಲ್ಲಿರುವವರಿಗೆ ನೆರವು ನೀಡುವುದು, ನಿಸ್ವಾರ್ಥ ಸೇವೆಗಳು ಧರ್ಮಾಚರಣೆಯ ತತ್ವಗಳು. ಶಿವ ಸದಾ ಕ್ರಿಯಾಶೀಲ ಮತ್ತು ಕರುಣಾಮಯಿ. ನಾವು ಸೋಮಾರಿಗಳಾಗದೆ ದುಡಿಮೆ ನಡೆಸಿದರೆ ಶಿವ ಮೆಚ್ಚುವನು ಎಂದರು.

ತರೀಕೆರೆಯ ನೂಲಿ ಚನ್ನಯ್ಯ ಮಠದ ಶ್ರೀ ವೃಷಭೇಂದ್ರ ಸ್ವಾಮೀಜಿ, ಆಚಾಪುರ ಪಿಎಸಿಎಸ್ ಅಧ್ಯಕ್ಷ ಕೆ.ಆರ್.ರಾಜು, ಅರ್ಚಕ ಗಂಗಾಧರ, ಸಿದ್ದಲಿಂಗಯ್ಯ, ಸೋಮಶೇಖರ ಗೌಡ, ಪ್ರಮೀಳಮ್ಮ ಉಪಸ್ಥಿತರಿದ್ದರು.