ಬೆಂಗಳೂರು: ದಾಂಪತ್ಯದಲ್ಲಿ ಮನಸ್ತಾಪ ಮೂಡಿದ್ದರಿಂದ ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ 71ನೇ ಅಧೀನ ಸಿವಿಲ್ ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಶಿವನಗರ 12ನೇ ‘ಸಿ’ ಮೈನ್ ರಸ್ತೆ ನಿವಾಸಿ ಹನುಮಂತ ಜಟ್ಟಪ್ಪ ಬೈಲ ಪತ್ತರ್ ಅಪರಾಧಿ. ಪತ್ನಿ ಜಯಶ್ರೀ ಎಂಬಾತನ್ನು ಕೊಲೆ ಮಾಡಿದ್ದ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಚಾಲಚಂದ್ರ ಭಟ್, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಪತಿಯ ಇಬ್ಬರು ಮಕ್ಕಳಿಗೆ ಪರಿಹಾರ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು. 15 ವರ್ಷಗಳ ಹಿಂದೆ ಜಯಶ್ರೀ ಮತ್ತು ಹನುಮಂತ ಮದುವೆ ಆಗಿದ್ದು, ಇಬ್ಬರು ಮಕ್ಕಳು ಇದ್ದರು. ಪತ್ನಿ ಶೀಲ ಶಂಕಿಸಿ ಜಗಳ ಮಾಡಿ ಹಲ್ಲೆ ನಡೆಸುತ್ತಿದ್ದ. ನೊಂದ ಜಯಶ್ರೀ, ತಾಯಿ ಮನೆಗೆ ಬಂದಿದ್ದಳು.
ಅಲ್ಲಿಗೂ ಬಂದ ಹನುಮಂತ, ಬೇರೆ ಮನೆ ಮಾಡುವುದಾಗಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಈ ವೇಳೆ ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿ ಮೇಲೆ ಕೋಪಗೊಂಡಿ ಕಲ್ಲು ಮತ್ತು ಚಾಕುವಿನಿಂದ ಹಲ್ಲೆ ನಡೆಸಿ 2018ರಲ್ಲಿ ಕೊಲೆ ಮಾಡಿದ್ದ. ಬಸವೇಶ್ವರನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಹನುಮಂತನನ್ನು ಬಂಧಿಸಿದ್ದರು.