ನ್ಯೂಸ್

ಪತ್ನಿ ಕೊಂದವ ಮಹಡಿಯಿಂದ ಜಿಗಿದು ಸಾವು

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತ್ನಿಯನ್ನು ಕೊಲೆ ಮಾಡಿ ಕೋಲಾರದ ತನ್ನ ಚಿಕ್ಕಮ್ಮನ ಮನೆಯಲ್ಲಿ ಅಡಗಿದ್ದ ಪತಿ ಬಂಧನ ಭೀತಿಯಿಂದ ಟೆರೆಸ್‌ನಿಂದ ಜಿಗಿದು ಮೃತಪಟ್ಟಿದ್ದಾನೆ.

ಬೆಂಗಳೂರಿನ ಸಿದ್ದಾಪುರದ ಸೋಮೇಶ್ವರನಗರ ನಿವಾಸಿ ತಬ್ರೇಜ್ ಪಾಷಾ (37) ಮೃತ ಆರೋಪಿ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಆ.2ರಂದು ಚಾಮರಾಜಪೇಟೆಯ ತವರು ಮನೆಯಲ್ಲಿದ್ದ ಸೈಯಿದಾ ಫಾಜೀಯಾ ಫಾತೀಮಾ (34) ಎಂಬಾಕೆಯನ್ನು ತಬ್ರೇಜ್ ಪಾಷಾ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಚಾಮರಾಜಪೇಟೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗೆ ಬಲೆಬೀಸಿದ್ದರು. ಕೋಲಾರದ ಹೊರವಲಯದಲ್ಲಿರುವ ದರ್ಗಾದಲ್ಲಿ ತಬ್ರೇಜ್ ಅಡಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧಿಸಲು ಹೋಗಿದ್ದರು. ಪೊಲೀಸರು ಹೋಗುವಷ್ಟರಲ್ಲಿ ಸಮೀಪದ ಆತನ ಚಿಕ್ಕಮ್ಮನ ಮನೆಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಲಭ್ಯವಾಯಿತು.

ಈ ಮಾಹಿತಿ ಮೇರೆಗೆ ಪೊಲೀಸರು, ಮನೆಯ ಹುಡುಕಾಟ ನಡೆಸಿಕೊಂಡು ಹೋಗುತ್ತಿದ್ದರು. ಇದನ್ನು ತಿಳಿದ ಆರೋಪಿ ತಪ್ಪಿಸಿಕೊಳ್ಳುವ ಸಲುವಾಗಿ ಮನೆಯ ಟೆರೆಸ್ ಮೇಲೆ ಏರಿ 12 ಅಡಿ ಎತ್ತರದಿಂದ ಜಿಗಿದು ಗಾಯಗೊಂಡು ಅಸ್ವಸ್ಥಗೊಂಡಿದ್ದ. ಸಂಬಂಧಿಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.