ದಾವಣಗೆರೆ: ಮದ್ಯದ ಅಮಲಿನಲ್ಲಿ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ.
ಬಸವರಾಜಪ್ಪ (32 ) ಮೃತ. ಈತನು ಮೂಲತಃ ನಿಟ್ಟೂರು ಗ್ರಾಮದ ನಿವಾಸಿಯಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಬಸವರಾಜಪ್ಪ ತನ್ನ ದೇಹದ ಮೇಲೆ ತಾನೆ ಗಾಯ ಮಾಡಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಮಾಡೆಲಿಂಗ್ಗೆ ಗುಡ್ಬೈ ಹೇಳಿ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಪಡೆದ ಮಿಸ್ ಇಂಡಿಯಾ ಫೈನಲಿಸ್ಟ್
ತಂದೆ ತಾಯಿಯನ್ನು ಕಳೆದುಕೊಂಡಿದ್ದ ಈತ ಚನ್ನಗಿರಿ ತಾಲೂಕಿನ ಸೋಮಶೆಟ್ಟಿಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದನು. ಬಸವರಾಜಪ್ಪ ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದನು. ಹೀಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಲೆದಾಡುತ್ತಿದ್ದನು. ಒಂದು ದಿನ ಕ್ಷೌರದ ಅಂಗಡಿಯಲ್ಲಿದ್ದ ರೇಜರ್ನಿಂದ ತನ್ನ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡಿದ್ದಾನೆ.
ಬಸವರಾಜಪ್ಪನ ದೇಹದಿಂದ ರಕ್ತ ಸುರಿಯುತ್ತಿದ್ದರು ಯದ್ಯಾವುದರ ಅರಿವಿಲ್ಲದೆ ಬೀದಿ ಬೀದಿ ತಿರುಗಾಡುತ್ತಿದ್ದನು. ಇದನ್ನು ಗಮನಿಸಿ ಸ್ಥಳೀಯರು ಬಸವರಾಜಪ್ಪನನ್ನು ತಕ್ಷಣ ಚಿಕಿತ್ಸೆಗೆಂದು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಬಸವರಾಜ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಅತಿಯಾಗಿ ಮದ್ಯ ಸೇವನೆ ಮಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಮೃತಪಟ್ಟ ಬಸವರಾಜಪ್ಪನ ಪ್ರಕರಣ ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.