ನ್ಯೂಸ್

ಹರಿಯಾಣದ ಮ್ಯಾಜಿಕ್ ಹಿಂದಿನ ಮರ್ಮ

ಹರಿಯಾಣದ ಹೊಲಗದ್ದೆಗಳಲ್ಲಿ ಜಿಲೇಬಿ ಬೆಳೆದು ಎಕ್ಸ್​ಪೋರ್ಟ್ ಮಾಡುವ ರಾಹುಲ್ ಗಾಂಧಿ ಅವರ ಕನಸಿಗೆ ಅಲ್ಲಿನ ಮತದಾರ ತಣ್ಣೀರು ಎರಚಿದ್ದಾನೆ! ಇದೊಂದು ತಮಾಷೆ, ಕಟಕಿ, ಕಾಲೆಳೆಯುವ ತಂತ್ರವೆಂದು ಕಂಡರೂ ಈ ಮಾತು ಭಾರತದ ರಾಜಕಾರಣದಲ್ಲಿ ಹಲವು ಆಯಾಮಗಳ ದಿಕ್ಸೂಚಿ ಆಗಿದ್ದಂತೂ ಸತ್ಯದ ಮಾತು. ಕಳೆದ ಏಪ್ರಿಲ್, ಮೇ, ಜೂನ್ ತಿಂಗಳಿನಲ್ಲಿ ಮುಕ್ತಾಯವಾದ ಲೋಕಸಭಾ ಚುನಾವಣೆ ಮತ್ತು ಜೂನ್ 4ರ ಫಲಿತಾಂಶದ ನಂತರ ಶುರುವಾದ ರಾಜಕೀಯ ತರ್ಕ ಮತ್ತು ಲೆಕ್ಕಾಚಾರಗಳು ಇದೀಗ ಮತ್ತೊಂದು ಮಗ್ಗುಲಿಗೆ ಹೊರಳಿವೆ. ಅದು ಈಗಷ್ಟೇ ಹೊರಬಂದ ಹರಿಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ವ್ಯಕ್ತವಾಗಿದೆ.

ವ್ಯವಸ್ಥಿತ ಕಾರ್ಯತಂತ್ರಕ್ಕೆ ಜಯ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಂದಾಗ ದೇಶದಲ್ಲಿ ಮೋದಿ ಮೇನಿಯಾ ಮುಗಿದೇ ಹೋಯಿತೆಂಬ ಚರ್ಚೆ ನಡೆದದ್ದೇ ಹೆಚ್ಚು. ಅದಕ್ಕೆ ಕಾರಣ ಇಲ್ಲ ಅಂತಿಲ್ಲ. ನಾನೂರರ ಗಡಿ ದಾಟುವ ಬಿಜೆಪಿ ನಾಯಕರ ಗುರಿ ತಪ್ಪಿ ಸರಳ ಬಹುಮತಕ್ಕೂ ಕೊರತೆ ಆದಾಗ ಅಂತಹ ಚರ್ಚೆಗಳು ನಡೆಯುವುದು ಸಹಜ. ಹಾಗಾದರೆ ನಾನೂರರ ಗುರಿ ಇಟ್ಟುಕೊಂಡದ್ದೇ ತಪ್ಪಾ? ಹಾಗೂ ಹೇಳುವ ಹಾಗಿಲ್ಲ. ಪ್ರತಿ ಚುನಾವಣೆಯಲ್ಲೂ ಪ್ರತಿಯೊಂದು ಪಕ್ಷಕ್ಕೂ ಅದರದ್ದೇ ಆದ ತಂತ್ರಗಾರಿಕೆ ಎಂಬುದು ಇದ್ದೇ ಇರುತ್ತೆ. ಪ್ರತಿಯೊಂದು ತಂತ್ರಗಾರಿಕೆಯು ಯಶಸ್ಸು ಕಾಣುತ್ತದೆ ಅಂತೇನೂ ಇಲ್ಲ. ಕೆಲವು ಬಾರಿ ತಂತ್ರಗಾರಿಕೆ ವಿಫಲವಾಗುತ್ತದೆ. ಹಾಗಂತ ಯಾರೂ ಮರುಪ್ರಯತ್ನ ಮಾಡದೆ ಕೈಕಟ್ಟಿ ಕೂರುವುದಿಲ್ಲ. ಈ ಸಂದರ್ಭದಲ್ಲಿ ಒಂದು ಸಂಗತಿಯನ್ನು ಉಲ್ಲೇಖಿಸುವುದಾದರೆ ಬಿಜೆಪಿ ಇಟ್ಟುಕೊಂಡ ನಾನೂರರ ಗುರಿ ವಾಸ್ತವ ನೆಲೆಗಟ್ಟಿನಲ್ಲಿ ಇರಲಿಲ್ಲ ಮತ್ತು ದಿಲ್ಲಿಯಿಂದ ಹಳ್ಳಿಯವರೆಗೆ ಎಲ್ಲರೂ ಅದೇ ಮೇನಿಯಾದಲ್ಲಿ ಮುಳುಗಿದ್ದರು. ನಾನೂರರ ಗುರಿ ಮುನ್ನೂರನ್ನಾದರೂ ದಾಟಿಸಬೇಕಿತ್ತು. ಅದೂ ಆಗದೇ ಹೋದದ್ದು ಬಿಜೆಪಿ ವಿರೋಧಿ ಪಾಳಯದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದರೆ, ಬಿಜೆಪಿ ಪಾಳಯದಲ್ಲಿ ಕಳವಳಕ್ಕೆ ಕಾರಣವಾಗಿತ್ತು. ನಿಜವಾಗಿ ಹೇಳಬೇಕೆಂದರೆ ಪ್ರಸಕ್ತ ಭಾರತ ಸಾಮಾಜಿಕ ಮತ್ತು ರಾಜಕೀಯ ಸಂರಚನೆ ಹದವನ್ನು ನೋಡಿದರೆ, ಮೋದಿಯವರಂತಹ ಬಲಾಢ್ಯ ನಾಯಕನನ್ನು ಬಿಜೆಪಿ ಬದಿಗಿಟ್ಟು ನೋಡಿದರೆ ತಾನಂದುಕೊಂಡ ರಾಜಕೀಯ ಗುರಿ ತಲುಪಬೇಕಾದರೆ ಇನ್ನೂ ಸಾಕಷ್ಟು ಪ್ರಯಾಸಪಡಲೇಬೇಕಿದೆ. ಅದಿರಲಿ, ಕೇವಲ ಮೂರೇ ತಿಂಗಳ ಅಂತರದಲ್ಲಿ ನಡೆದ ಹರಿಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆ ಮತ್ತೆ ಲೆಕ್ಕಾಚಾರಗಳನ್ನು ಅದಲು ಬದಲು ಮಾಡಿದೆ. ವಾಸ್ತವದಲ್ಲಿ ಇದು ಮುಂದಿನ ರಾಜಕಾರಣದ ದಿಕ್ಸೂಚಿ ಎಂದರೆ ತಪ್ಪಾಗಲಾರದು.

ಹರಿಯಾಣದ ಪವಾಡ ಏನು?: ಲೋಕಸಭಾ ಚುನಾವಣಾ ಫಲಿತಾಂಶದಿಂದ ಬಿಜೆಪಿ ನಾಯಕತ್ವ ಕಂಗೆಟ್ಟು, ಕೈಕಟ್ಟಿ ಕೂರಲಿಲ್ಲ. ಬದಲಾಗಿ ಲೋಕಸಭಾ ಚುನಾವಣಾ ಫಲಿತಾಂಶದ ಅನುಭವದ ಆಧಾರದಲ್ಲಿ ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಚುನಾವಣಾ ಸಿದ್ಧತೆಗೆ ಬಿಜೆಪಿಯ ರಾಷ್ಟ್ರೀಯ ನಾಯಕರು ಮುಂದಾದರು. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿಗಿರುವ ಸವಾಲು ಮತ್ತು ಅನುಕೂಲಕರ ಅಂಶಗಳ ಪಟ್ಟಿ ಮಾಡಿ ಸವಾಲನ್ನು ಜಯಿಸುವ ಸಂಕಲ್ಪ ಮಾಡಿ ಯುದ್ಧಕಣಕ್ಕೆ ಇಳಿದರು. ಬೂತ್ ಕಾರ್ಯಕರ್ತರಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಮಂತ್ರಿಯವರೆಗೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೊಂದು ಚೌಕಟ್ಟು ಹಾಕಿಕೊಂಡರು. ನಾಲ್ಕು ತಿಂಗಳ ಕಾಲ ಕರಾರುವಕ್ಕಾಗಿ ಕಾರ್ಯರಂಗಕ್ಕೆ ಇಳಿದರು. ಅದರ ಪರಿಣಾಮ ಹರಿಯಾಣದಲ್ಲಿ ಬಿಜೆಪಿ ಈ ಹಿಂದೆ ಎಂದೂ ಖಾತೆ ತೆರೆಯದ 22 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಲು ಸಾಧ್ಯವಾಯಿತು. ಮುಖ್ಯವಾಗಿ ಈ ಹಿಂದಿನ ಎರಡು ಬಾರಿಯ ಅಧಿಕಾರಾವಧಿಯಲ್ಲಿ ಗೆದ್ದಿದ್ದಕ್ಕಿಂತಲೂ ಅಧಿಕವಾಗಿ ಎಂಟು ಸ್ಥಾನ ಗೆದ್ದು ಒಟ್ಟು 48 ಕ್ಷೇತ್ರಗಳಲ್ಲಿ ಗೆಲುವಿನ ನಗೆಬೀರಿ ಸ್ವತಂತ್ರವಾಗಿ ಬಿಜೆಪಿ ಮೊದಲಬಾರಿಗೆ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಇದೆಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿನ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ದಾಖಲೆ ಎನಿಸಬಹುದಾದ 40 ಪ್ರತಿಶತ ಮತಗಳಿಕೆ ಸಾಧನೆ ಮಾಡಿದ್ದೂ ಗಮನಿಸಬೇಕಾದ ಮತ್ತೊಂದು ವಿಶೇಷ ಅಂಶ.

ಸೈನಿ ಕೈಚಳಕ: ಹರಿಯಾಣದ ಹಾಲಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಆರೆಂಟು ತಿಂಗಳ ಹಿಂದೆ ಯಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಯವರೆಗೂ ಸೈನಿ ಒಬಿಸಿ ಸಮುದಾಯಕ್ಕೆ ಸೇರಿದ ಓರ್ವ ಸಾಮಾನ್ಯ ನಾಯಕ ಮಾತ್ರ. ಎಂಟು ತಿಂಗಳ ಹಿಂದೆ ಇದೇ ಸೈನಿ ಅವರನ್ನು ಹರಿಯಾಣ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಇನ್ನೇನು ಲೋಕಸಭಾ ಚುನಾವಣೆಗೆ ಎರಡು ತಿಂಗಳಿರುವಾಗ ನಯಾಬ್ ಸಿಂಗ್ ಸೈನಿ ಮನೋಹರ ಲಾಲ್ ಖಟ್ಟರ್ ಅವರಿಂದ ತೆರವಾದ ಸಿಎಂ ಸ್ಥಾನವನ್ನು ಅಲಂಕರಿಸಿದರು. ಹಾಗೆ ನೋಡಿದರೆ ಸೈನಿ ನೇಮಕದ ಬಳಿಕವೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೊಡುಗೆ ಅತ್ಯಂತ ನಿರಾಶಾದಾಯಕ. ಆ ರಾಜ್ಯದಲ್ಲಿ ಹತ್ತು ವರ್ಷದಿಂದ ಅಧಿಕಾರದಲ್ಲಿದ್ದೂ, ಅಬ್ಬರದ ಪ್ರಚಾರದ ನಂತರದಲ್ಲೂ ಹರಿಯಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕರ್ಧ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಈ ಎಲ್ಲ ಕಾರಣಗಳಿಗಾಗಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತುಸು ಹೆಚ್ಚೇ ಹುಮ್ಮಸ್ಸಿನಲ್ಲಿತ್ತು. ಆದರೆ ಅದೇ ಸೈನಿ ಇದೀಗ ಅಭೂತಪೂರ್ವ ಗೆಲುವನ್ನು ತಂದುಕೊಟ್ಟು ದೆಹಲಿ ವರಿಷ್ಠರ ಎದುರು ಸೈ ಎನಿಸಿಕೊಂಡಿದ್ದಾರೆ.

ಫಲ ಕೊಟ್ಟ ಆರೆಸ್ಸೆಸ್ ತಂತ್ರಗಾರಿಕೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರದಲ್ಲಿ ಹರಿಯಾಣ ಚುನಾವಣೆ ಸಂದರ್ಭದಲ್ಲಿ ಆರೆಸ್ಸೆಸ್ ಬೂತ್ ಮಟ್ಟದವರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯರಂಗಕ್ಕಿಳಿದಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಕಲ ಸಮುದಾಯಗಳನ್ನೊಳಗೊಂಡ ನೂರಕ್ಕೂ ಹೆಚ್ಚು ಕಾರ್ನರ್ ಮೀಟಿಂಗ್​ಗಳನ್ನು ನಡೆಸಲಾಯಿತು. ಮತ್ತು ಪ್ರತಿಯೊಬ್ಬ ಮತದಾರನನ್ನು ವೈಯಕ್ತಿಕವಾಗಿ ತಲುಪಲು ಪ್ರಯತ್ನಿಸಲಾಯಿತು. ಇದರ ಪರಿಣಾಮ ಫಲಿತಾಂಶದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.

ಕಾಂಗ್ರೆಸ್ ಜಾಟ್ ಸವಾಲಿಗೆ ಸೈನಿ ಅಸ್ತ್ರ: ಎರಡು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಮತ್ತು ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಜಾಟ್ ಸಮುದಾಯದ ಭೂಪಿಂದರ್ ಹೂಡಾ ಅವರ ಮೇಲೆ ಅತಿಯಾದ ಅವಲಂಬನೆ ಕಾಂಗ್ರೆಸ್ ಪಕ್ಷದ ಪಾಲಿಗೆ ದುಬಾರಿ ಆಯಿತು. ಜಾಟ್, ದಲಿತ, ಮುಸ್ಲಿಂ ಸಮುದಾಯವನ್ನು ಓಲೈಸುವುದು ಕಾಂಗ್ರೆಸ್ ಪಕ್ಷದ ಪ್ರಧಾನ ತಂತ್ರವಾಗಿತ್ತು. ಜಾಟ್ ಸಮುದಾಯದ ಅತಿಯಾದ ಓಲೈಕೆ ಇತರ ಸಮುದಾಯಗಳು ಕಾಂಗ್ರೆಸ್​ನಿಂದ ದೂರ ಸರಿಯುವಂತೆ ಮಾಡಿತು. ಅದೇ ವೇಳೆ ಬಿಜೆಪಿ ಸರ್ಕಾರದ ಸಿಎಂ ನಯಾಬ್ ಸಿಂಗ್ ಸೈನಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ತಂಡ ಉಳಿದೆಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ನಯ ನಾಜೂಕಿನಿಂದ ಮಾಡಿತು. ಅದು ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿತು. ಅಂತಿಮವಾಗಿ ಕಾಂಗ್ರೆಸ್ ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಗ್ಯಾರಂಟಿ ನಂಬಲಿಲ್ಲ: ಕರ್ನಾಟಕದಂತೆಯೇ ಹರಿಯಾಣ ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷ ಮತದಾರರಿಗೆ ಗ್ಯಾರಂಟಿ ಭರವಸೆ ನೀಡಿತ್ತು. ಆದರೆ ಈ ಎರಡೂ ರಾಜ್ಯಗಳಲ್ಲಿ ಆ ಪಕ್ಷಕ್ಕೆ ಆ ತಂತ್ರಗಾರಿಕೆ ವರ್ಕೌಟ್ ಆಗದೆ ಇರುವುದೂ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎನ್ನಲು ಅಡ್ಡಿಯಿಲ್ಲ.

ಕಾಶ್ಮೀರದ್ದು ಹಿನ್ನಡೆ ಅಲ್ಲ: ಕಾಶ್ಮೀರದ ಅಸೆಂಬ್ಲಿಯಲ್ಲೂ ಒಟ್ಟು ಸ್ಥಾನ 90. ಸರಳ ಬಹುಮತಕ್ಕೆ 46 ಸಂಖ್ಯಾಬಲ ಬೇಕು. ನ್ಯಾಷನಲ್ ಕಾನ್ಪರೆನ್ಸ್ 42, ಬಿಜೆಪಿ 29 (ಮತಗಳಿಕೆ 25.5%) ಮತ್ತು ಐಎನ್​ಡಿಐಎ ಒಕ್ಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್ ಪಕ್ಷ ಪಡೆದುಕೊಂಡದ್ದು 6 (ಸ್ಪರ್ಧಿಸಿದ್ದು 35 ಸ್ಥಾನಗಳಲ್ಲಿ)ಸ್ಥಾನಗಳನ್ನು ಮಾತ್ರ. ಕಾಶ್ಮೀರದ ಚುನಾವಣೆಯ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಅಲ್ಪಸಂಖ್ಯಾತರು ಕಾಂಗ್ರೆಸ್ ಅಭ್ಯರ್ಥಿಗಳನ್ನೂ ನೆಚ್ಚಿಕೊಂಡಿಲ್ಲ, ಅದೆಷ್ಟೇ ಸ್ಪರ್ಧಿಗಳಿದ್ದರೂ ಪಾಕಿಸ್ತಾನ ಪರ ಮೃದುಧೋರಣೆ ಹೊಂದಿರುವ ನ್ಯಾಷನಲ್ ಕಾನ್ಪರೆನ್ಸ್ ಬೆಂಬಲಿಸುವ ವಿಚಾರದಲ್ಲಿ ಅಲ್ಲಿನ ಮುಸ್ಲಿಂ ಮತದಾರರು ಯಾವ ಗೊಂದಲಕ್ಕೂ ಒಳಗಾಗಲಿಲ್ಲ ಎಂಬುದು. ಅಷ್ಟೇ ಅಲ್ಲ, ಚುನಾವಣೆ ಫಲಿತಾಂಶ ಬಂದ ಮಾರನೇ ದಿನವೇ ನಾಲ್ವರು ಪಕ್ಷೇತರರನ್ನು ಸೆಳೆದುಕೊಳ್ಳುವ ಮೂಲಕ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್ ಪಾತ್ರ ನಗಣ್ಯ ಎಂಬ ಸಂದೇಶವನ್ನು ಉಮರ್ ಮತ್ತು ಫಾರೂಕ್ ಅಬ್ದುಲ್ಲಾ ನೀಡಿದರು. ಹಾಗಾದರೆ ಹರಿಯಾಣ ಮತ್ತು ಕಾಶ್ಮೀರದ ಚುನಾವಣೆ ಮೂಲಕ ಗಳಿಸಿದ್ದೇನು? ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು.

ಹರಿಯಾಣ, ಕಾಶ್ಮೀರ ಚುನಾವಣೆ ಫಲಿತಾಂಶದ ಪರಿಣಾಮ ಏನು? ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶದ ಪರಿಣಾಮ ಇಷ್ಟರಲ್ಲೇ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳಿಗೆ ಹೊಸ ಆಯಾಮ ನೀಡಿದೆ. ಇನ್ನು ರಾಜಕೀಯ ವಿಶ್ಲೇಷಕರು, ಪಂಡಿತರು, ಪೋಲ್ ಸ್ಟಾರ್ಸ್ ಎಚ್ಚರಿಕೆಯಿಂದ ಮಾತನಾಡುವಂತೆ ಮಾಡಿದೆ.

ಇನ್ನು ಎಕ್ಸಿಟ್ ಪೋಲ್​ಗಳ ಕತೆ?: ಕಳೆದ ಲೋಕಸಭಾ ಚುನಾವಣೆ ವೇಳೆ ಎಲ್ಲ ಎಕ್ಸಿಟ್ ಪೋಲ್​ಗಳೂ ಬಿಜೆಪಿ ಮುನ್ನೂರರ ಗಡಿ ದಾಟಲಿದೆ ಅಂತಲೇ ಹೇಳಿದ್ದವು. ಅದು ಹುಸಿಯಾದ ಮೇಲೆ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ಕಾಶ್ಮೀರದಲ್ಲಿ ಅತಂತ್ರ ವಿಧಾನಸಭೆ ಅಂತಲೇ ಷರಾ ಬರೆದಿದ್ದವು. ಆದರೆ ಆಗಿದ್ದೇ ಬೇರೆ. ಹೀಗಾಗಿ ಎಕ್ಸಿಟ್ ಪೋಲ್​ಗಾರರು ಕೂಡ ಮುಂದಿನ ಚುನಾವಣೆಗಳ ಸಂದರ್ಭದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬಹುದು ಎಂದು ನಿರೀಕ್ಷೆ ಮಾಡೋಣವೇ?.

(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)