ನ್ಯೂಸ್

ಸಾರಿಗೆ ಸಿಬ್ಬಂದಿಗೆ ಸರ್ಕಾರಿ ನೌಕರರಾಗುವ ಭಾಗ್ಯ ವಿಳಂಬ

ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅದಕ್ಕಾಗಿ ಸರ್ಕಾರ ರಚಿಸಿರುವ ಸಮಿತಿ ಮಾತ್ರ ಇನ್ನೂ ಮಾಹಿತಿ ಕಲೆ ಹಾಕುವುದರಲ್ಲೇ ನಿರತವಾಗಿದೆ. ಹೀಗಾಗಿ ಸರ್ಕಾರಿ ನೌಕರರಾಗುವ ಅವರ ಕನಸು ಇನ್ನಷ್ಟು ವಿಳಂಬವಾಗಲಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಲ್ಲಿರುವ 1.3 ಲಕ್ಷ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಕುರಿತ ಸಾಧಕ-ಭಾಧಕದ ವರದಿ ನೀಡಲು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ರಚಿಸಿ ಮೂರು ತಿಂಗಳಾದರೂ ಈವರೆಗೆ ಕೇವಲ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಜತೆಗೆ ಸಮಿತಿ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರನ್ನಾಗಿ ಮಾಡಲು ಇರುವ ಅಡೆತಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಈ ಕಾರ್ಯ ಇನ್ನೂ ಎರಡು ತಿಂಗಳು ಮುಂದುವರಿಯಲಿದೆ. ನಂತರ ಸಲಹೆಗಳನ್ನ ಕ್ರೋಢಿಕರಿಸಿ ವರದಿ ಸಿದ್ಧಪಡಿಸಿ ಸಕಾರಕ್ಕೆ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ಬೇಕಾಗಲಿದೆ. ಆದ್ದರಿಂದ, ಈ ಕುರಿತ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ತಡವಾಗುತ್ತಿದೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವ ಕುರಿತು ವರದಿ ನೀಡಲು ರಚಿಸಲಾಗಿರುವ ಸಮಿತಿ ಪ್ರಾಥಮಿಕ ಹಂತದ ಸಭೆ ನಡೆಸಿದೆ. ಅದಕ್ಕೆ ಸಂಬಂಧಿಸಿದ ಮಾಹತಿ ನೀಡುವಂತೆ ನಾಲ್ಕೂ ನಿಗಮದ ಅಧಿಕಾರಿಗಳಿಗೆ ಕೋರಲಾಗಿದೆ. | ಶಿವಯೋಗಿ ಸಿ.ಕಳಸದ ಕೆಎಸ್​ಆರ್​ಟಿಸಿ ಎಂಡಿ