ನ್ಯೂಸ್

ಬದುಕಿನ ಜೀವಾಳ

ಗಟ್ಟಿಯಾದ ಭೂಮಿಯನ್ನು ಕೃಷಿಮಾಡುವುದಕ್ಕೆ ಹದಗೊಳಿಸಿ, ನೀರು ಬೀಜ ಗೊಬ್ಬರಗಳಿಂದ ಪೋಷಣೆಗೈದು ಬಿತ್ತಿದಾಗ ಫಲ ಬರುವಂತೆ- ನಮ್ಮ ಹೃದಯದಲ್ಲಿರುವ ಅರಿಷಡ್ವರ್ಗಗಳನ್ನು, ದೈವೀಗುಣಗಳ ಸಹಕಾರದಿಂದ ಕಿತ್ತುಹಾಕಿ, ಕ್ಷಮೆ, ದಯೆ, ಶಾಂತಿ, ಸಂಸ್ಕೃತಿಗಳ ಬೀಜಗಳನ್ನು ಬಿತ್ತಿ ನಮ್ಮ ಬದುಕನ್ನು ಸಸ್ಯಶಾಲಿನಿಯನ್ನಾಗಿ ಮಾಡಿಕೊಳ್ಳುವದೇ ನಮ್ಮೆಲ್ಲರ ಧ್ಯೇಯ. ಬರೀ ವೇಷಭೂಷಣಗಳಿಂದ ನಮ್ಮ ಧರ್ಮ-ಸಂಸ್ಕೃತಿಯನ್ನು ಉಳಿಸಲು ಆಗುವದಿಲ್ಲ. ಹೊರಗಿನ ವೇಷಭೂಷಣಗಳು ಸಭ್ಯತೆಯನ್ನು ಸೂಚಿಸುತ್ತವೆ, ಅಂತರಂಗದ ಪರಿಪಕ್ವತೆಯು ಸಂಸ್ಕೃತಿಯನ್ನು ಸೂಚಿಸುತ್ತದೆ. ಸಭ್ಯತೆ ಅಂದರೆ ಬಾಹ್ಯಶುದ್ಧಿ. ಸಂಸ್ಕೃತಿ ಅಂದರೆ ಅಂತರಂಗ ಶುದ್ಧಿ ಎನ್ನುವುದು ಸದಾಕಾಲ ನೆನಪಿನಲ್ಲಿರಬೇಕು ಹಾಗೂ ಅದನ್ನು ಅನುಸರಿಸಬೇಕು. ಗಾಂಧಿಯವರು ಸೂಟು ಬೂಟು ಧರಿಸಿದ್ದಾಗ ಬ್ಯಾರಿಸ್ಟರ್ ಗಾಂಧಿ ಅಂದರು. ಯಾವಾಗ ಅವರು ಫಕೀರನ ಹಾಗೆ ಅರ್ಧಪಂಜಿ ಉಟ್ಟು, ಆಡಿನ ಹಾಲು ಕುಡಿದು, ರಾಮಮಂತ್ರ ಜಪಿಸುತ್ತಾ ಸಂನ್ಯಾಸ ಜೀವನದಂತೆ ಕಠೋರ ವ್ರತನಿಯಮ ಕೈಕೊಂಡರೋ ಆಗ ಅವರನ್ನು ದೇಶದ ಜನ ಒಪ್ಪಿಕೊಂಡರು.

ಮನುಷ್ಯನುಸಭ್ಯತೆಯನ್ನೊಳಗೊಂಡ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಇವು ಬದುಕಿನ ಎರಡು ದಂಡೆಗಳು. ದಿನಮಪಿ ರಜನಿ ಸಾಯಂ ಪ್ರಾತಃಶಶಿರವ ಸಂತಾ ಪುನರಯಾತಃ - ಹಗಲು ರಾತ್ರಿ, ದಿನ ಪಕ್ಷ, ಮಾಸ, ಋತು, ವರ್ಷ, ಸಂವತ್ಸರ, ಶತಸಂವತ್ಸರ ರೂಪದಿಂದ ಕಾಲವು ಆಟವಾಡುತ್ತಿದೆ. ಹರಿದು ಹೋದ ನೀರಿನ ಪ್ರವಾಹ ಮತ್ತೆ ಬರುವದಿಲ್ಲ. ಸರಿದು ಹೋದ ಆಯುಷ್ಯ ಪುನಃ ಬರುವುದೇ ಇಲ್ಲ. ಆದ್ದರಿಂದ ಈ ಕಾಲದೋಟವು, ಮನುಷ್ಯರನ್ನು ಎಚ್ಚರಿಸುತ್ತದೆ. ಸಾಧನಾ ಮಾರ್ಗದಲ್ಲಿ ಸಭ್ಯತೆ-ಸಂಸ್ಕೃತಿ ಯನ್ನು ರಕ್ಷಿಸಿಕೊಳ್ಳಲು ಸೂಚಿಸುತ್ತದೆ. ಮಹಾಭಾರತದಲ್ಲಿ ಉಲ್ಲೇಖವಾದಂತೆ, ‘ನೀತಿವಿದನಲ್ಲದ ಕುಮಂತ್ರಿ, ವಿನೀತಪರನಲ್ಲದ ಪುರೋಹಿತ/ ಕಾತರಸಿ ಸಮರಾಂಗಣಕೆ ಭಯಬೀತನಹ ಭೂಬುಜನ ದೆಶೆಯಿಂ/ ಬೀತು ಹೋಗದೆ ಸಕಲಸಂಪದವರಸ ಕೇಳೆಂದ’ (ವಿದುರ ನೀತಿ)- ನೀತಿ, ಧರ್ಮ ಸಂಸ್ಕೃತಿಯನ್ನು ಕಾಯ್ದುಕೊಂಡರೆ, ಸಕಲ ಸಂಪದವನ್ನು ಕಾಯ್ದುಕೊಂಡಂತೆ ಎಂಬುದನ್ನು ವಿದುರನು ಧೃತರಾಷ್ಟ್ರನಿಗೆ ಹೇಳಿದ್ದಾನೆ, ಹಾಗೆ ಸಭ್ಯತೆ ಸಂಸ್ಕೃತಿಗಳೇ ನಮ್ಮ ಬದುಕಿನ ಜೀವಾಳವಾಗಬೇಕು.