ನ್ಯೂಸ್

ಅಧಿಕಾರದ ಗತ್ತು ಮತ್ತು-ಸ್ಥಿರವಲ್ಲ ಯಾವತ್ತೂ!

|ಡಾ.ಕೆ.ಪಿ.ಪುತ್ತೂರಾಯ

ಒಂದೂರಲ್ಲಿ ಓರ್ವ ಅಗಸನಿಗೆ ಕೆರೆಯ ನೀರಿನಲ್ಲಿ ಬಟ್ಟೆಗಳನ್ನು ತೊಳೆಯುವಾಗ ಕೆರೆಯೊಳಗೆ ಒಂದು ಸುಂದರ, ಅಪರೂಪದ ದೇವರ ವಿಗ್ರಹ ಸಿಕ್ಕಿತು.

ಇದು ತನ್ನ ಭಾಗ್ಯವೆಂದು ತಿಳಿದ ಅಗಸ, ಆ ದೇವರ ಮೂರ್ತಿಯನ್ನು ಊರೆಲ್ಲಾ ಮೆರವಣಿಗೆ ಮಾಡಲು ಬಯಸಿದ. ಆದರೆ, ಮೆರವಣಿಗೆ ಮಾಡಲು, ಪಲ್ಲಕ್ಕಿ ಸಿಗದ ಕಾರಣ, ತನ್ನ ಕತ್ತೆಯ ಮೇಲೆಯೇ ವಿಗ್ರಹವನ್ನು ಕೂರಿಸಿ ಮೆರವಣಿಗೆ ಮಾಡಲು ನಿರ್ಧರಿಸಿದ. ಅಂತೆಯೇ ಕತ್ತೆಯನ್ನು ಶೃಂಗಾರಗೊಳಿಸಿ, ಅದರ ಮೇಲೆ ದೇವರ ವಿಗ್ರಹವನ್ನು ಕೂರಿಸಿ, ಮೆರವಣಿಗೆ ಮಾಡಿದ.

ಬಲು ಸುಂದರವಾದ ವಿಗ್ರಹವನ್ನು ಕಂಡ ಜನರು, ಅದರ ಮೇಲೆ ಹೂವಿನ ಮಳೆಯನ್ನೇ ಗೈದರು, ಹಾರ ಹಾಕಿದರು, ಆರತಿ ಎತ್ತಿ ಪೂಜೆ ಮಾಡಿಸಿದರು, ಜಯಕಾರ ಗೈದರು. ಇದೆಲ್ಲವೂ ತನಗೆ ಸಿಕ್ಕ ಗೌರವ, ಮರ್ಯಾದೆ ಎಂದು ತಿಳಿದ ಕತ್ತೆ ಜಂಭದಿಂದ ಬೀಗತೊಡಗಿತು. ಮಾತ್ರವೇ ಅಲ್ಲ ತನಗೆ ಇನ್ನು ಯಾರ ಅವಶ್ಯಕತೆಯೂ ಇಲ್ಲವೆಂದು ತಿಳಿದು ಅಗಸನಿಂದ ಮರುದಿನವೇ ದೂರವಾಗಿ, ಒಂಟಿಯಾಗಿ ತಿರುಗಾಡಲಾರಂಭಿಸಿತು.

ಆದರೆ ಕೆಲಸವಿಲ್ಲದೆ ಒಂಟಿ ಕತ್ತೆಯನ್ನು ನೋಡಿದ ಜನ, ಕತ್ತೆಯನ್ನು ಓಡಿಸಲಾರಂಭಿಸಿದರು, ಹೊಡೆಯಲಾರಂಭಿಸಿದರು. ಹಿಂದಿನ ದಿನ ಜಯಕಾರ ಹಾಕಿದ ಜನ ಇಂದು ನನ್ನನ್ನೇಕೆ ಕಡೆಗಣಿಸುತ್ತಿದ್ದಾರೆ ಎಂದು ಯೋಚಿಸಲು, ಆ ಕತ್ತೆಗೆ ಸತ್ಯದರ್ಶನವಾಯಿತು ಹಾಗೂ ಜನ ಭಕ್ತಿ ಭಾವದಿಂದ ಗೌರವ ಕೊಟ್ಟು ಜಯಕಾರ ಹಾಕಿದ್ದು ತನಗಲ್ಲ, ತನ್ನ ಮೇಲೆ ಕುಳ್ಳಿರಿಸಲಾಗಿದ್ದ ದೇವರ ವಿಗ್ರಹಕ್ಕೆ ಎಂಬ ನಿಜಾಂಶ ತಿಳಿಯಿತು. ಇದೇ ರೀತಿ ಅಂತಸ್ತು ಅಧಿಕಾರದಲ್ಲಿದ್ದವರಿಗೆ ಜನರು ಗೌರವ ನೀಡುತ್ತಾರೆ.

ಅದು ಅವರಿಗೆ ನೀಡಿದ ಗೌರವವಲ್ಲ; ಅವರ ಹುದ್ದೆಗೆ ನೀಡಿದ ಗೌರವ, ಸಲಾಂ ಹೊಡೀತಾರೆ. ಅದೂ ಅವರಿಗಲ್ಲ. ಅದರ ಕುರ್ಚಿಗೆ! ಅಧಿಕಾರ ಇದ್ದಲ್ಲಿ ಸುತ್ತ ಜನವೋ ಜನ. ಅಧಿಕಾರವಿಲ್ಲದಾಗ, ಅವರತ್ತ ನೋಡುವವರೇ ಇಲ್ಲ. ಬೆಲ್ಲ ಇದ್ದಲ್ಲಿ ಇರುವೆಗಳ ದಂಡು. ಬೆಲ್ಲ ಖಾಲಿಯಾದ ಮೇಲೆ, ಇರುವೆಗಳೂ ಜಾಗವನ್ನು ಖಾಲಿ ಮಾಡುತ್ತವೆ. ಇದು ಲೋಕ ನಿಯಮ. ಅಧಿಕಾರ ಬಂದ ಮೇಲೆ, ಜನರು ನಾನಾ ರೀತಿಯಾಗಿ ವರ್ತಿಸುತ್ತಾರೆ.

ಅವರ ಅರಿವಿಗೆ ಬಾರದೇನೇ, ಅವರ ನಡೆ-ನುಡಿಗಳಲ್ಲಿ, ಭಾವ-ಭಂಗಿಗಳಲ್ಲಿ ಮಾತಿನ ಧಾಟಿ ಧ್ವನಿಯಲ್ಲಿ ಬಿಂಕದ ವಾಸನೆ ಸೇರಿಕೊಂಡು, ಗಮನಾರ್ಹವಾದ ಬದಲಾವಣೆಗಳು ಕಂಡು ಬರುತ್ತವೆ.

ಅಧಿಕಾರವೆಂಬುದು, ಕಾನೂನಿನ ಚೌಕಟ್ಟಿನ ಒಳಗೆ, ಜನರ ಸೇವೆ ಮಾಡಲು ಕೈಗೆ ಸಿಕ್ಕಿರುವ ತಾತ್ಕಾಲಿಕವಾದ ಒಂದು ಅವಕಾಶವೆಂಬುದನ್ನು ಮರೆತು, ಈ ಅಧಿಕಾರ ಶಾಶ್ವತವೆಂಬಂತೆ ವರ್ತಿಸುತ್ತಾರೆ. ಕೆಲವರ ವರ್ತನೆಯಲ್ಲಿ ದುರಂಹಕಾರ ಎದ್ದು ಕಾಣುತ್ತದೆ. ಹಾಗೂ ತನ್ನ ವ್ಯಾಪ್ತಿಯಲ್ಲಿ ಬರುವ ಜನರ ಮೇಲೆ ಅಧಿಕಾರವನ್ನು ಚಲಾಯಿಸುತ್ತಾರೆ, ಮಾತ್ರವೇ ಅಲ್ಲ, ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ.

ಇನ್ನು ಕೆಲವರು, ಕೈಗೆ ಸಿಕ್ಕ ಅವಕಾಶವೆಂದು ತಿಳಿದು, ಭ್ರಷ್ಟಾಚಾರದಲ್ಲಿ ತೊಡಗಿ, ಸಾಕಷ್ಟು ಹಣವನ್ನು ಕಬಳಿಸುತ್ತಾರೆ. ಹೀಗೆ ಮಾಡುವಾಗ ಕಳ್ಳರಂತೆ, ಬಲು ಜಾಗ್ರತೆಯಿಂದ ವರ್ತಿಸುತ್ತಾರೆ. ಹೆಚ್ಚಿನವರು, ಏರಿದ ಮೇಲೆ, ಏರಲು ನೆರವಾದ ಏಣಿಯನ್ನೇ ಒದ್ದು ಬಿಸಾಕುವಂತೆ, ತನಗೆ ನೆರವಾದರನ್ನೇ ಮರೆಯುತ್ತಾರೆ; ನಿರ್ಲಕ್ಷಿಸುತ್ತಾರೆ.

ಆದುದರಿಂದ, ಕೈಗೆ ಒದಗಿ ಬಂದಿರುವ ಅಧಿಕಾರವನ್ನು ಸದುಪಯೋಗ ಪಡಿಸಿಕೊಳ್ಳಬೇಕೇ ಹೊರತು, ದುರುಪಯೋಗ ಮಾಡಿಕೊಳ್ಳಲು ಹೋಗಬಾರದು. ಮನುಷ್ಯನ ನಿಜರೂಪವನ್ನು ಕಾಣಬೇಕಾದರೆ, ಅವನಿಗೆ ಅಧಿಕಾರವನ್ನು ಕೊಟ್ಟು ನೋಡು ಎಂಬ ಮಾತಿದೆ. ಕಾರಣ ಕೆಲವರಿಗೆ ಅಧಿಕಾರದ ಪಿತ್ತ ಬೇಗನೆ ನೆತ್ತಿಗೆ ಏರಿ ಬಿಡುತ್ತದೆ. ಇದು ಅಧಿಕಾರದಲ್ಲಿದ್ದವರಿಗೆ ಗೊತ್ತಾಗದಿದ್ದರೂ, ಇತರರ ಗಮನಕ್ಕೆ ಬೇಗನೆ ಬಂದು ಬಿಡುತ್ತದೆ.

ಸಾಮಾನ್ಯವಾಗಿ ಅಧಿಕಾರಕ್ಕೆ ಎರಡು ಸಾಮರ್ಥ್ಯ ಗಳಿವೆ-ಒಂದು ಇತರರಲ್ಲಿ ಭಯ ಹುಟ್ಟಿಸುವಂತಹದು; ಇನ್ನೊಂದು ಗೌರವ ಹುಟ್ಟಿಸುವಂತಹದು. ಮೊದಲನೆಯದು ತಾತ್ಕಾಲಿಕ. ಏಕೆಂದರೆ ಅಧಿಕಾರವಿಲ್ಲವಾದಾಗ ಭಯವೂ ಇಲ್ಲವಾಗುತ್ತದೆ.

ಎರಡನೆಯದು ಶಾಶ್ವತ; ಅಧಿಕಾರದಲ್ಲಿದ್ದಾಗ, ಗೌರವಯುತವಾಗಿ ನಯವಿನಯದಿಂದ ನಡೆದುಕೊಂಡರೆ, ಅಧಿಕಾರ ಕಳೆದುಕೊಂಡಮೇಲೂ, ಅದೇ ಪ್ರೀತಿ, ವಿಶ್ವಾಸ, ಗೌರವ ಮುಂದುವರಿಯುತ್ತದೆ. ಹೆಚ್ಚಿನವರು ಅಧಿಕಾರವನ್ನು ಕಳಕೊಂಡಾಗ, ಹಲ್ಲಿಲ್ಲದ ಹುಲಿಗಳಂತಾಗುತ್ತಾರೆ; ನೀರಿಲ್ಲದ ಮೀನಿನಂತೆ ಚಡಪಡಿಸುತ್ತಾರೆ. ಕಾರಣ ‘ಅಧಿಕಾರಂಚ, ಗರ್ಭಂಚ, ಆಗಮನೇ ಆನಂದಂ, ನಿರ್ಗಮನೇ ಪ್ರಾಣಸಂಕಟಂ’ ಎಂಬ ಸುಭಾಷಿತದಂತೆ. ಅಧಿಕಾರ ಮತ್ತು ಬಸುರಿತನ, ಆಗಮಿಸುವಾಗ ಆನಂದವನ್ನೇ ನೀಡಿದರೂ ನಿರ್ಗಮಿಸುವಾಗ ಪ್ರಾಣ ಸಂಕಟವನ್ನು ನೀಡುತ್ತದೆ.

ಆದುದರಿಂದ ಹೀಗಾಗಲು ಬಿಡಬಾರದು. ಮಾತ್ರವಲ್ಲ, ಅಧಿಕಾರದ ಗತ್ತು, ಮತ್ತು ಯಾವತ್ತೂ ಸ್ಥಿರವಲ್ಲವೆಂದು ಅರ್ಥ ಮಾಡಿಕೊಂಡು ಅತ್ಯಂತ ವಿನಮ್ರತೆಯಿಂದ ಅಧಿಕಾರವನ್ನು ನಿಭಾಯಿಸಬೇಕು!

(ಪ್ರತಿಕ್ರಿಯಿಸಿ: drputhuraya@yahoo.co.in)