ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಭಾರತದ ಚೊಚ್ಚಲ ಪ್ರವಾಸಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.
ಅಮೆರಿಕದ ಹ್ಯೂಸ್ಟನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಆಯೋಜಿಸಲಾಗಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಂತೆ ಟ್ರಂಪ್ಗೂ ಕೂಡ ಭಾರತದಲ್ಲಿ ‘ಕೆಮ್ ಚೋ ಟ್ರಂಪ್’ (ಹೇಗಿದ್ದೀರಿ ಟ್ರಂಪ್) ಎಂಬ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಕಾರ್ಯಕ್ರಮದ ಸ್ಥಳದ ಕುರಿತು ಭಾರತ ಮತ್ತು ಅಮೆರಿಕ ಅಧಿಕಾರಿಗಳು ಒಮ್ಮತಕ್ಕೆ ಬರದಿರುವ ಹಿನ್ನೆಲೆಯಲ್ಲಿ ಟ್ರಂಪ್ ಭೇಟಿ ವಿಳಂಬವಾಗುವ ಸಾಧ್ಯತೆಗಳಿವೆ.
ಗುಜರಾತ್ನ ಅಹಮದಾಬಾದ್ನಲ್ಲಿ ಕೆಮ್ ಚೋ ಟ್ರಂಪ್ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಕೆಲಸಗಳನ್ನೂ ಪ್ರಾರಂಭಿಸಿದೆ. ಟ್ರಂಪ್ ಫೆ. 24 ರಿಂದ 26ರವರಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ಯಕ್ರಮವನ್ನು ಅಹಮದಾಬಾದ್ ಬದಲು ದೆಹಲಿ ಅಥವಾ ಎನ್ಸಿಆರ್ ಪ್ರದೇಶದಲ್ಲಿ ಆಯೋಜಿಸುವಂತೆ ಅಮೆರಿಕದ ಅಧಿಕಾರಿಗಳು ಕೋರಿದ್ದು, ಟ್ರಂಪ್ ಅಹಮದಾಬಾದ್ಗೆ ಪ್ರಯಾಣಿಸಲು ಉತ್ಸುಕರಾಗಿಲ್ಲ ಎಂದಿದ್ದಾರೆ. ಆದರೆ ಮೋದಿ ತಮ್ಮ ತವರು ರಾಜ್ಯದಲ್ಲಿ ಟ್ರಂಪ್ ಆತಿಥ್ಯ ವಹಿಸಲು ನಿರ್ಧರಿಸಿರುವುದರಿಂದ ಟ್ರಂಪ್ ಆಗಮನದ ದಿನಾಂಕ ಗೊತ್ತುಪಡಿಸುವುದರಲ್ಲಿ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುತ್ತಿದೆ.
ಅಹಮದಾಬಾದ್ ಉತ್ತಮ ಆಯ್ಕೆ: ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲು ಬೇಕಾದ ಸೂಕ್ತ ಸ್ಟೇಡಿಯಂಗಳು ಮತ್ತು ವ್ಯವಸ್ಥೆಗಳು ಕಡಿಮೆ ಇವೆ. ಹೌಡಿ ಮೋದಿ ರೀತಿ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಸೇರುವ ಕಾರ್ಯಕ್ರಮಕ್ಕೆ ಅಹಮದಾಬಾದ್ ಸೂಕ್ತ ಆಯ್ಕೆ ಎಂದು ಸರ್ಕಾರ ಅಮೆರಿಕ ಅಧಿಕಾರಿಗಳಿಗೆ ತಿಳಿಸಿದೆ. ಸಿಎಎ , ಎನ್ಆರ್ಸಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಇರಿಸುಮುರಿಸು ಎದುರಾಗಬಾರದು ಎಂಬುದೂ ಸರ್ಕಾರದ ಚಿಂತನೆ. ದೆಹಲಿ ಟ್ರಾಫಿಕ್ ಜಾಮ್ ಕಾರ್ಯಕ್ರಮಕ್ಕೆ ಅಡಚಣೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಮೊಟೇರಾದಲ್ಲಿ ಕಾರ್ಯಕ್ರಮ?
ಅಹಮದಾಬಾದ್ನಲ್ಲಿ ಸಿದ್ಧಗೊಳ್ಳುತ್ತಿರುವ ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೇರಾದಲ್ಲಿ ಟ್ರಂಪ್ರ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆದಿದೆ. ಸ್ಟೇಡಿಯಂನ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಟ್ರಂಪ್ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅಲ್ಲಿನ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಮೊಟೇರಾ ಸ್ಟೇಡಿಯಂನಲ್ಲಿ 1,10,000 ಪ್ರೇಕ್ಷಕರ ಆಸನ ವ್ಯವಸ್ಥೆ ಇದೆ. ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಜಪಾನ್ ಪ್ರಧಾನಿ ಶಿಂಜೋ ಅಬೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅಹಮದಾಬಾದ್ಗೆ ಭೇಟಿ ನೀಡಿದ್ದರು.