ಆಯಾ ಪ್ರಾಂತ್ಯದ ಕೋಟೆಯನ್ನು ನೋಡುತ್ತ ಅವುಗಳ ಜತೆ ಸಂವಾದಕ್ಕೆ ತೊಡಗಿದರೆ, ಅವು ಚರಿತ್ರೆಯ ಧೀರೋದಾತ್ತ ಅಧ್ಯಾಯಗಳನ್ನು ಪ್ರಸ್ತುತ ಪಡಿಸುತ್ತವೆ. ನಾಡಿನ ಚರಿತ್ರೆಯ ಹೆಬ್ಬಾಗಿಲಿನಂತಿರುವ ಈ ಕೋಟೆಗಳು ಶೌರ್ಯದ ಪ್ರತೀಕವೂ ಹೌದು. ಗೆಲುವು-ಸೋಲಿನ ಮೌನಸಾಕ್ಷಿಯೂ ಹೌದು. ಅಷ್ಟೇ ಅಲ್ಲ, ಕೋಟೆಯು ಒಂದು ರಾಜ್ಯದ, ಅದನ್ನಾಳಿದ ದೊರೆಯ ಮನೋಭಾವ ಹಾಗೂ ಆ ಕಾಲದ ಸಾಮಾಜಿಕ ಸ್ಥಿತಿಗತಿಯನ್ನು ತನ್ನದೇ ಭಾಷೆಯಲ್ಲಿ ತಿಳಿಸುತ್ತದೆ. ಇಂಥ ಹಲವು ಭವ್ಯ ಕೋಟೆಗಳು ಕರುನಾಡಿನ ಘನತೆಯಾಗಿ ನಿಂತಿವೆ. ಕರ್ನಾಟಕದಲ್ಲಿ ನೂರಕ್ಕೂ ಹೆಚ್ಚು ಕೋಟೆಗಳಿದ್ದು, ಅವುಗಳದ್ದೇ ಆದ ಇತಿಹಾಸ ಹೊಂದಿವೆ.
ಬೆಂಗಳೂರಿನ ನಿರ್ವತೃ ಕೆಂಪೇಗೌಡರು ಯಲಹಂಕದಿಂದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಾಯಿಸಿದಾಗ ಕಟ್ಟಿಸಿದ ಕೋಟೆಯೂ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಅದರ ವೈಶಾಲ್ಯ ಹಾಗೂ ಗುಣಮಟ್ಟ ಕೆಂಪೇಗೌಡರ ದೂರದರ್ಶಿತ್ವಕ್ಕೆ ಸಾಕ್ಷಿ. 1537ರಲ್ಲಿ ಕೆಂಪೇಗೌಡರಿಂದ ಮಣ್ಣಿನ ಕೋಟೆಯಾಗಿ ನಿರ್ವಿುಸಲ್ಪಟ್ಟಿದ್ದು, ಕಾಲಾಂತರದಲ್ಲಿ ಕಲ್ಲಿನ ಕೋಟೆಯಾಗಿ ಮಾರ್ಪಡಿಸಲಾಯಿತು. ದೆಹಲಿ ಗೇಟ್ ಮತ್ತು ಎರಡು ಬುರುಜ್ಗಳು ಈಗ ಅಸ್ತಿತ್ವದಲ್ಲಿವೆ.
ಚಿತ್ರದುರ್ಗದ ಕೋಟೆಯಂತೂ ವಿಹಂಗಮವಾದದ್ದು. ವಿಶಿಷ್ಟ ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿಯಾಗಿರುವಂಥದ್ದು. ‘ಕೋಟೆಯು ಬೆಟ್ಟದೊಳಗೋ ಅಥವಾ ಬೆಟ್ಟವು ಕೋಟೆಯೊಳಗೋ...’ ಎಂಬ ಭಾವ ಮೂಡಿಸುವಂಥದ್ದು. ಇದರ ಏಳುಸುತ್ತುಗಳಲ್ಲಿ ಮೂರು ನೆಲದ ಮೇಲೂ, ಇನ್ನುಳಿದ ನಾಲ್ಕು ಬೆಟ್ಟದ ಮೇಲೂ ಇವೆ. ಈ ಕೋಟೆಗೆ 35 ಗುಪ್ತಮಾರ್ಗಗಳು, 4 ಕಳ್ಳಬಾಗಿಲುಗಳು ಇವೆ. ಜೊತೆಗೆ ಕೋಟೆಯ ಸುತ್ತಲೂ ಇರುವ ಬೆಟ್ಟಗಳ ಮೇಲಿನ ಬತೇರಿಗಳಲ್ಲಿ ಕಣ್ಗಾವಲಿನ ಸೈನಿಕ ವ್ಯವಸ್ಥೆ ಇತ್ತು. ಹೈದರಾಲಿಯ ಸೇನೆಗೆ ಪೆಟ್ಟು ಕೊಟ್ಟು, ವೀರ ವನಿತೆ ಓಬವ್ವ ಶೌರ್ಯ ಮೆರೆದಿದ್ದು ಇದೇ ಕೋಟೆಯಲ್ಲಿಯೇ.
ಬೀದರ್, ಕಲಬುರಗಿ, ಕೊಪ್ಪಳ, ಸವದತ್ತಿ, ಶ್ರೀರಂಗಪಟ್ಟಣ, ಶಿರಸಂಗಿ, ಗೋಕಾಕ್, ಗಜೇಂದ್ರಗಡ, ನರಗುಂದ, ಮುಂಡರಗಿ, ಮಂಗಳೂರು, ಬಾರ್ಕರು, ಸಂಡೂರು, ಕಂಪ್ಲಿ, ಮಾಗಡಿಯಂಥ ಊರುಗಳು ಕೋಟೆಗಳಿಂದಲೇ ಪ್ರಸಿದ್ಧವಾಗಿವೆ. ಚಾಲುಕ್ಯರ ರಾಜಧಾನಿಯಾಗಿದ್ದ ಬಾದಾಮಿಯು ರಣಮಂಡಲ ಮತ್ತು ಬಾವನ್ಬಂಡೆಗಳೆಂಬ ಎರಡು ಕೋಟೆಗಳ ನಡುವೆ ನಿರ್ವಿುಸಲ್ಪಟ್ಟಿರುವುದು ಗಮನಾರ್ಹ.
ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಾನ್ಯಖೇಡ ಈಗಿನ ಮಳಖೇಡ (ಕಲಬುರಗಿ ಜಿಲ್ಲೆಯ ಸೇಡಂ ತಾಲೂಕು) ಭವ್ಯ ಕೋಟೆಯನ್ನು ಹೊಂದಿದೆ. ರಾಷ್ಟ್ರಕೂಟರ ರಾಜ ಅಮೋಘವರ್ಷ ನೃಪತುಂಗ ಮಳಖೇಡವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ. ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯ ‘ಕವಿರಾಜ ಮಾರ್ಗ’ ಗ್ರಂಥ ಬರೆದಿದ್ದ. ಇದು ಕನ್ನಡದ ಮೊದಲ ಉಪಲಬ್ಧ ಕೃತಿಯಾಗಿದೆ. ಕಾಗಿಣಾ ನದಿಯ ದಂಡೆಯ ಮೇಲಿರುವ ಮಳಖೇಡ ಕೋಟೆ, 3 ಸುತ್ತಿನ ಕೋಟೆಯಾಗಿದ್ದು ದಪ್ಪ ಕಲ್ಲುಗಳಿಂದ ನಿರ್ವಿುಸಲಾಗಿದೆ.
ಇತಿಹಾಸಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಏರಿಳಿತಗಳಿಗೆ ಸಾಕ್ಷಿಯಾದದ್ದು ಆನೆಗೊಂದಿ ಕೋಟೆ. ಹಂಪಿಯ ಸಮೀಪವೇ ಇರುವ ಈ ಕೋಟೆ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ತುಂಗಭದ್ರಾ ನದಿಯ ಕಡೆಯಿಂದ ಒಳನುಸುಳುವ ಶತ್ರುಗಳನ್ನು ಗಮನಿಸಿ, ದಮನಿಸಲು ಈ ಕೋಟೆ ನಿರ್ವಿುಸಲಾಯಿತು
ದೇಶದ ದೊಡ್ಡ ಕೋಟೆಗಳಲ್ಲಿ ಒಂದು ವಿಜಾಪುರದ (ಈಗಿನ ವಿಜಯಪುರ) ಕೋಟೆ. ಇದರ ಸರಾಸರಿ ಎತ್ತರ 90 ಅಡಿ. 10 ಕಿ.ಮೀ. ಸುತ್ತಳತೆ ಇರುವ ಈ ಕೋಟೆಯೊಳಗಿದ್ದ ನಗರವೇ ವಿಜಾಪುರ. ಈ ಕೋಟೆಯ ಸುತ್ತ ಆಳವಾದ ಕಂದಕಗಳಿವೆ.
ಹಾಸನದ ಬಳಿ ಇರುವ ಹಳೆಬೀಡು ಕೋಟೆಯು ಹೊಯ್ಸಳರ ರಾಜಧಾನಿಯಾದ ಹಳೆಬೀಡನ್ನು ಮಾತ್ರವಲ್ಲದೆ, ಸುತ್ತಮುತ್ತಣ ಹತ್ತಾರು ಹಳ್ಳಿಗಳನ್ನೂ ತನ್ನಲ್ಲಿ ಸೇರಿಸಿಕೊಂಡಿದ್ದಂಥ ವಿಶಾಲ ಕೋಟೆ. ಗಾರೆಯನ್ನೂ ಬಳಸದೆ ಕೇವಲ ಕರಿಕಲ್ಲುಗಳಿಂದ ಈ ಕೋಟೆಯನ್ನು ನಿರ್ವಿುಸಿರುವುದು ವಿಶೇಷ.
ಕರ್ನಾಟಕದ ದೊಡ್ಡ ಮಣ್ಣಿನ ಕೋಟೆಯು ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿದೆ. ಇದು ನಾಲ್ಕು ಸುತ್ತಿನ ಕೋಟೆ. ಈ ಕೋಟೆಯ ಒಂದೆಡೆ ನದಿಯಿದ್ದರೆ, ಉಳಿದ ಕಡೆಗಳಲ್ಲಿ ಕೆರೆಗಳಿವೆ. ಇಟ್ಟಿಗೆಯಿಂದ ಕಟ್ಟಿದ ವೃತ್ತಾಕಾರದ ಪುರಾತನ ಬಾವಿ ಇದೆ. ಹಾನಗಲ್ ಕದಂಬರ ರಾಜಧಾನಿಯಾಗಿತ್ತು. ಈ ಕೋಟೆಯಲ್ಲಿ ವೀರಭದ್ರ ದೇವಾಲಯ, ಬಿಲ್ಲೇಶ್ವರ ದೇವಾಲಯ, ಜೈನ ದೇವಾಲಯಗಳಿವೆ.