ನ್ಯೂಸ್

ಅಲ್ಲಮನ ಸ್ಪರ್ಶದಿಂದ ತೊಲಗಿತು ಗೋರಕ್ಷನ ಕೊರತೆ

ಗೋರಕ್ಷ ಅಲ್ಲಮನ ಎದುರು ಸುಮ್ಮನಾದ. ಅಲ್ಲಮನ ವ್ಯೋಮತತ್ತ್ವ ಗೋರಕ್ಷನ ಅರಿವಿಗೆ ಬಂದಿತು. ಈತ ಸಾಮಾನ್ಯನಲ್ಲ. ನಮ್ಮ ಆದಿನಾಥನೇ ಈ ರೂಪದಲ್ಲಿ ಭೂಮಿಗೆ ಇಳಿದು ಬಂದಿದ್ದಾನೆಂದು ಗೋರಕ್ಷ ಭಾವಿಸಿಕೊಂಡ. ಅವನು ಕೂಡಲೇ ಅಲ್ಲಮನಿಗೆ ಶರಣಾದ. ಆಗ ಅಲ್ಲಮನು ಗೋರಕ್ಷನಲ್ಲಿ ಮೂಡಿರುವ ಪರಿಪಕ್ವಭಾವದ ನೆಲೆಯನ್ನು ತಿಳಿದುಕೊಂಡು ಪ್ರೀತಿಯಿಂದ ಅವನ ಹಣೆಯನ್ನು ಎತ್ತಿ ಅವನೆಡೆಗೆ ಕರುಣೆಯನ್ನು ಬೀರಿದ.

ಅಲ್ಲಮನ ಕರುಣಾದೃಷ್ಟಿಗೆ ಅವನಲ್ಲಿದ್ದ ಮದ-ಮತ್ಸರಗಳು ಓಡಿಹೋದುವು. ಗೋರಕ್ಷನ ಮನಸ್ಸಿನಲ್ಲಿ ಅಡಗಿದ್ದ ಅಜ್ಞಾನವು ಕಾಣದಂತಾಯಿತು. ಅಲ್ಲಮನು ತನ್ನ ಕೈಚಾಚಿ ಗೋರಕ್ಷನ ದೇಹವನ್ನು ರ್ಸ³ಸಿದಾಗ ಅವನಲ್ಲಿದ್ದ ಕೊರತೆಗಳು ತೊಲಗಿಹೋದುವು. ಅವನಲ್ಲಿ ಪರಿಶುದ್ಧವಾದ ದೇಹ-ಮನಸ್ಸುಗಳು ಉದ್ಭವಗೊಂಡವು. ಗೋರಕ್ಷನು ಕಿಂಕರಭಾವವನ್ನು ವ್ಯಕ್ತಪಡಿಸಿದ. ಅವನಲ್ಲಿ ದಿವ್ಯವಾದ ರೋಮಾಂಚನವು ಉಂಟಾಯಿತು!

ಇದೀಗ ಗೋರಕ್ಷ ಎಲ್ಲ ಬಗೆಯ ಅಜ್ಞಾನದಿಂದ ಮುಕ್ತನಾಗಿದ್ದ. ತನ್ನ ನೆಲೆನಿಲ್ಲಬಹುದಾದ ಅವಸ್ಥೆ ಯಾವುದೆಂಬ ಪ್ರಶ್ನೆ ಅವನಲ್ಲಿ ಮೂಡಿತ್ತು. ಅವನು ಅಲ್ಲಮನಲ್ಲಿ ಭಕ್ತಿ-ಯುಕ್ತಿಗಳಿಂದ ತನ್ನ ಮನಸ್ಸಿನ ಇಂಗಿತವನ್ನು ತೋಡಿಕೊಂಡ. ಆಗ ಅಲ್ಲಮನು ಕಠಿನತೆ ಹೊಂದಿರುವ ದೇಹ ನಿನ್ನದೆಂದೂ ಕಾಯಸಿದ್ಧಿಯ ಬಗೆಯಿದೆಂದೂ ತಿಳಿಸಿ; ನಿತ್ಯಮುಕ್ತಿಯ ಸಿದ್ಧಿ ಇದಲ್ಲ. ಇದೊಂದು ಕೀಳುಮಾರ್ಗ. ಇದರಲ್ಲಿ ನೀನು ನಡೆಯದೆ ಪರಬ್ರಹ್ಮಸ್ವರೂಪನಿಗೆ ಶರಣು ಹೋಗಲು ಸಿದ್ಧನಾಗು-ಎಂದು ಗೋರಕ್ಷನಿಗೆ ತಿಳಿಹೇಳಿದ. ಗೋರಕ್ಷನು ಉತ್ಸಾಹಿತನಾದ. ಆಗ ಗೋರಕ್ಷನು ಅಲ್ಲಮನನ್ನು ಕೋರಿಕೊಂಡ ಬಗೆಯನ್ನು ಕವಿ ಚಾಮರಸನ ಮಾತಿನಲ್ಲಿಯೇ ನಾವು ಕೇಳೋಣ:

ನಂಬುವೊಡೆ ಹೇಳಾ ಗುಹೇಶ್ವರ

ನೆಂಬನಾವನು ವಾಸಿಸಲು ತನ

ಗಿಂಬಾದಾವುದು ಭಜಿಸಲೆಂತಾತನನು ಹೇಳೆನಲು|

ಹಂಬಲಿಸಲೇಕಾ ಗುಹೇಶ್ವರ

ನೆಂಬವನೆ ನಾನಿದಕೆ ಸಂಶಯ

ವೆಂಬುದಿಲ್ಲೈ ಸತ್ಯವಿದು ಗೋರಕ್ಷ ಕೇಳೆಂದ ||ಪ್ರಭು.ಲೀ.19-44||

‘ನೀನು ನನಗೆ ತಿಳಿಯುವಂತೆ ಹೇಳಬೇಕು. ಆ ಗುಹೇಶ್ವರನು ಎನ್ನುವವನು ಯಾರು? ನಾನು ಇರಬೇಕಾದ ತಾಣ ಯಾವುದು? ಆತನನ್ನು ಭಜಿಸುವ ಕ್ರಮ ಯಾವುದು? ಈ ಪ್ರಶ್ನೆಗಳನ್ನು ಗೋರಕ್ಷನು ಅಲ್ಲಮನಲ್ಲಿ ವಿನಯಪೂರ್ವಕ ನಿವೇದಿಸಿಕೊಂಡ. ಅಲ್ಲಮನು ಉತ್ತರ ನೀಡಿದ. ನಾವು ಶಿವಕವಿ ಚಾಮರಸನ ಮಾತುಗಳನ್ನೇ ಈ ವಿಷಯದಲ್ಲಿ ಏನು ಹೇಳುವನೆಂದು ಕೇಳೋಣ:

ಗುಹೆಯೆಲೈ ಕೇಳಾತ್ಮನಂತಾ

ಗುಹೆಗೆ ಪತಿಯಾನೆನ್ನ ನಾಮದ

ಮಹಿಮೆ ತಾನು ಗುಹೇಶ್ವರಾಂಕಿತವಾದ ಕತದಿಂದೆ |

ಮಹಿಯ ಲೌಕಿಕರಲ್ಲಿ ಮಳಹಿಸಿ

ವಿಹಿತವೆಂಬಂತಿರೆ ಗುಹೇಶ್ವರ

ಸಹಜನಾಮವೆ ನಟಿಸಿದೆನು ನಾನೆನ್ನ ಲೀಲೆಯಲಿ ||ಪ್ರಭು.ಲೀ.19-45||

‘ಗುಹೆಯೆ ಆತ್ಮ. ಆ ಗುಹೆಗೆ ನಾನೇ ಒಡೆಯ. ನನ್ನ ಹೆಸರಿನ ಮಹಿಮೆಯಿಂದಾಗಿ ನಾನು ‘ಗುಹೇಶ್ವರ ಎಂಬ ಅಂಕಿತವನ್ನು ಪಡೆದಿದ್ದೇನೆ. ಈ ಕಾರಣದಿಂದ ಈ ಲೋಕದ ಲೌಕಿಕರಲ್ಲಿ ಗುಹೇಶ್ವರನೆಂಬ ಸಹಜವಾದ ಹೆಸರಿನಿಂದ ನಾನು ನನ್ನ ಲೀಲೆಯನ್ನು ಪ್ರಕಟಿಸುತ್ತಿದ್ದೇನೆ’ ಎಂದು ಅಲ್ಲಮ ಸುಹಾಸ್ಯವದನನಾಗಿ ನುಡಿದ.

ಗೋರಕ್ಷನು ಅಲ್ಲಮನ ಮಾತುಗಳನ್ನು ಕೇಳಿ ವಿಸ್ಮಿತನಾದ. ಅಲ್ಲಮನ ಸಾಂತಲೀಲೆಯ ಮರ್ಮ ಗೋರಕ್ಷನಿಗೆ ತಿಳಿಯಲು ಸಾಧ್ಯವಾಗಲಿಲ್ಲ. ಗೋರಕ್ಷನು ಪುನಃ ‘ನೀನು ಬಲು ಜಾಣತನದ ಮಾತುಗಳನ್ನು ಆಡುತ್ತಿರುವೆ. ಗುಹೇಶ್ವರ ನೀನೆ ಆದಲ್ಲಿ ನಿನ್ನ ಕೈಯಲ್ಲಿ ಈ ಗುರುತಿನ ಲಿಂಗ ಏತಕ್ಕೆ? ಇದಿರಿಗೆ ಲಿಂಗವಿಡಿದು ನೀನು ಬೇರೆ; ಅದು ಬೇರೆ ಎಂದು ಏಕೆ ತೋರಿಸಿಕೊಂಡೆ. ಕರ್ಮ- ಭಕ್ತಿ- ಜ್ಞಾನಗಳ ಸಾಧನೆಯ ಭಾವಗಳಿಗೆ ಕಾರಣವೇನು?’ ಹೀಗೆಂದು ಅಲ್ಲಮನಲ್ಲಿ ಗೋರಕ್ಷ ಪ್ರಾರ್ಥಿಸಿಕೊಂಡ! ಆಗ ಗೋರಕ್ಷನ ಮಾತುಗಳನ್ನು ಕೇಳಿದ ಅಲ್ಲಮನು ‘ನಾನು ಈ ರೀತಿಯ ಲಿಂಗನಿಷ್ಠೆಯನ್ನು ಸ್ವೀಕರಿಸಿ ಎಲ್ಲರಿಗೂ ಮುಕ್ತಿಯನ್ನು ದೊರಕಿಸಿಕೊಡಬೇಕೆಂಬ ಕರುಣೆಯಿಂದ ಈ ರೀತಿಯಿಂದ ನಟಿಸುತಿದ್ದೇನೆ.

ಹಾಗಾಗಿ, ನನಗೆ ಮತ್ತು ಲಿಂಗಕ್ಕೆ ಭೇದಭಾವದ ಸಂಬಂಧ ಉಂಟೆಂದು ಹೇಳಬಹುದೆ?’ ಎಂದು ನುಡಿದನು. ಅಲ್ಲಮನ ವ್ಯೋಮತತ್ತ್ವವು ಗೋರಕ್ಷನಿಗೆ ಸ್ವಲ್ಪಸ್ವಲ್ಪವಾಗಿ ತಿಳಿಯುವಂತಾಯಿತು. ಇಲ್ಲಿ ಅಲ್ಲಮನು ಕರ್ಮ- ಭಕ್ತಿ- ಜ್ಞಾನ ಇವುಗಳಿಗೆ ಭೇದವಿಲ್ಲವೆಂದೂ ಅವು ಒಂದಕ್ಕೊಂದು ಪೋಷ್ಯ-ಪೋಷಕ ಭಾವದ ನೆಲೆಗಳಿಂದ ಕೂಡಿರುವುದೆಂದೂ ಗೋರಕ್ಷನಿಗೆ ತಿಳಿಸಿಕೊಟ್ಟನು. ಕರ್ಮವಿಲ್ಲದೆ ಭಕ್ತಿ ಇಲ್ಲ. ಕರ್ಮ-ಭಕ್ತಿಗಳು ಜ್ಞಾನಕ್ಕೆ ಪೋಷಕವಾಗಿಯೂ ಪ್ರೇರಕವಾಗಿಯೂ ಇರುವ ತತ್ತ್ವವೆಂಬುದು ಮೆಲ್ಲಮೆಲ್ಲನೆ ಗೋರಕ್ಷನ ಅರಿವಿಗೆ ಬಂದಿತು. ಶರಣಸಾಹಿತ್ಯದಲ್ಲಿ ಕರ್ಮಕ್ಕೆ ಸಿದ್ಧರಾಮನೂ ಭಕ್ತಿಗೆ ಬಸವಣ್ಣನೂ ಜ್ಞಾನಕ್ಕೆ ಅಲ್ಲಮನೂ ಪ್ರಸಿದ್ಧರಾಗಿರುವುದು ಸರಿಯಷ್ಟೆ. ಈ ಹಿನ್ನೆಲೆಯಲ್ಲಿ ಈ ಸಂಗತಿಗಳನ್ನು ನಾವು ಗಮನಿಸಬೇಕು. ಆದರೆ, ಜ್ಞಾನವು ಪ್ರಧಾನವಾಗಿದ್ದು ಕರ್ಮ-ಭಕ್ತಿಗಳು ಪೋಷಕವಾಗಿರುತ್ತವೆಂಬ ಹಿನ್ನೆಲೆಯಲ್ಲಿ ಗಮನಿಸಬೇಕು. (ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು,  ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)