ನ್ಯೂಸ್

ಜನರ ಬಳಿ ಮೊಬೈಲ್ ಸುಲಿಗೆ ಮಾಡುತ್ತಿದ್ದವರಿಗೆ ಜೈಲು ತೋರಿಸಿದ ಖಾಕಿ ಪಡೆ

ಬೆಂಗಳೂರು: ರಸ್ತೆಯಲ್ಲಿ ಜನರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ.

ಡಿ.ಜಿ.ಹಳ್ಳಿ ಮೋದಿ ಗಾರ್ಡನ್ ನಿವಾಸಿ ಆಸೀಫ್ ಬಾಷಾ ಅಲಿಯಾಸ್ ಷಾ (28) ಮತ್ತು ನೆಲಮಂಗಲನಗರದ ರೇಣುಕಾನಗರ ನಿವಾಸಿ ಇಮ್ರಾನ್ ಅಲಿಯಾಸ್ ಬೊಡ್ಕೆ (29) ಬಂಧಿತರು. 3.50 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 14 ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆ.2ರ ಮಧ್ಯಾಹ್ನ ಭೂಪಸಂದ್ರ ನಿವಾಸಿಯಾದ ಬಟ್ಟೆ ವ್ಯಾಪಾರಿ ನವೀದ್, ದ್ವಿಚಕ್ರ ವಾಹನದಲ್ಲಿ ವಿಲಿಯಮ್ಸ್ ಟೌನ್ ರಸ್ತೆಯಲ್ಲಿ ಹೋಗುತ್ತಿದ್ದರು. ಎದುರಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಏಕಾಏಕಿ ನವೀದ್‌ನನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಮೊಬೈಲ್, ಪರ್ಸ್ ಸುಲಿಗೆ ಮಾಡಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಜೆ.ಸಿ.ನಗರ, ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಸುಲಿಗೆ, ಕಳ್ಳತನ ಪ್ರಕರಣ ಪತ್ತೆಯಾಗಿವೆ.

ಹಗಲು ಮತ್ತು ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಒಂಟಿಯಾಗಿ ಓಡಾಡುವವರನ್ನೇ ಟಾರ್ಗೆಟ್ ಮಾಡಿ ಮಾರಕಾಸ್ತ್ರ ತೋರಿಸಿ, ಮೊಬೈಲ್, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ವಿಲೇವಾರಿ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು- ಮಸ್ತಿ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.