ಶೃಂಗೇರಿ: ಮಲೆನಾಡು ಭಾಗದಲ್ಲಿ ಕೃಷಿ ಜತೆಗೆ ಉಪ ಕಸುಬುಗಳಾಗಿ ಕೋಳಿ, ಜೇನು ಸಾಕಣೆ, ಹಂದಿ ಶೆಡ್ ನಿರ್ಮಾಣ, ತರಕಾರಿ ಬೆಳೆ ಮತ್ತಿತರ ಕೃಷಿ ಮಾಡಿ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಜತೆಗೆ ಕುಟುಂಬದ ಆರ್ಥಿಕ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.
ಅಣಬೆ ಕೃಷಿ ಮಾಡುವ ಸಂಖ್ಯೆ ಅತೀ ವಿರಳ. ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ಬೇಡಿಕೆ ಅತ್ಯಂತ ಕಡಿಮೆ. ನಗರ ಪ್ರದೇಶಗಳಲ್ಲಿ ಬೇಡಿಕೆ ಇದ್ದರೂ ಅಲ್ಲಿಗೆ ಹೋಗಿ ಮಾರಾಟ ಮಾಡುವುದು ತ್ರಾಸದಾಯಕ. ಹಾಗಾಗಿ ಅಣಬೆ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ.
ವಾಣಿಜ್ಯಬೆಳೆಗಳಾದ ಅಡಕೆ, ಕಾಫಿ, ಕಾಳುಮೆಣಸು ಮುಂತಾದ ಬೆಳೆಗಳ ಇಳುವರಿ, ಲಾಭ-ನಷ್ಟಗಳ ನಡುವೆ ಓಲಾಟ ನಡೆಯುತ್ತಿದೆ. ಹಾಗಾಗಿ ಉಪಕಸಬುಗಳತ್ತ ತಾಲೂಕಿನ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಅಣಬೆ ಬೆಳೆಸಿ ಅದರಲ್ಲಿ ಯಶಸ್ಸು ಕಂಡವರಲ್ಲಿ ಕೆ.ಕೆ.ತ್ರಿವೇಣಿ ಒಬ್ಬರು. ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಗಂಡಘಟ್ಟ ಗ್ರಾಮದ ಇವರು ಒಂದೂವರೆ ವರ್ಷದಿಂದ ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಣಬೆ ಕೃಷಿ ಬಗ್ಗೆ ತ್ರಿವೇಣಿ ಅವರಿಗೆ ಆರಂಭದಲ್ಲಿ ಯಾವ ಮಾಹಿತಿಯೂ ಇರಲಿಲ್ಲ. ಆದರೆ ಕೌಟುಂಬಿಕ ನಿರ್ವಹಣೆಗಾಗಿ ಹಣ ಸಂಪಾದಿಸಬೇಕು ಎಂಬ ಆಶಯದಿಂದ ಈ ದಿಸೆಯಲ್ಲಿ ಪ್ರಯತ್ನಕ್ಕೆ ಮುಂದಾದರು. ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಿತ್ತನೆ ಬೀಜವನ್ನು ಬೆಂಗಳೂರಿನ ಲ್ಯಾಬ್‌ನಿಂದ ತರಿಸಿಕೊಂಡು ಅಣಬೆ ಕೃಷಿ ಮಾಡಿದರೂ ನಿರೀಕ್ಷಿತ ಪ್ರಮಾಣದ ಇಳುವರಿ ಲಭಿಸಲಿಲ್ಲ. ಇದರಿಂದ ಕುಗ್ಗದೆ ಮರಳಿ ಪ್ರಯತ್ನ ಮಾಡು ಎಂಬಂತೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಅಣಬೆ ಕೃಷಿ ತರಬೇತಿಯಲ್ಲಿ ಭಾಗವಹಿಸಿ ಮಾಹಿತಿ ಪಡೆದರು. 10 ಕೆ.ಜಿ ಅಣಬೆ ಬೀಜವನ್ನು ಶಿವಮೊಗ್ಗದಿಂದ ತಂದು ಅಣಬೆ ಕೃಷಿ ಬೆಳೆಯಲು ಆರಂಭಿಸಿದ್ದರು. ಉತ್ತಮ ಇಳುವರಿ ಪಡೆದ ಅವರು ಮನೆಯವರ ಸಹಕಾರದಿಂದ ಸ್ವಯಂ ಉದ್ಯೋಗದಲ್ಲಿ ಯಶಸ್ಸು ಗಳಿಸಿದ್ದಾರೆ.
ವರ್ಷದಲ್ಲಿ 3 ತಿಂಗಳು: ಮಲೆನಾಡಿನಲ್ಲಿ ಹವಾಮಾನ ವೈಪರೀತ್ಯದಿಂದ ಮೂರು ತಿಂಗಳು ಮಾತ್ರ ಅಣಬೆ ಕೃಷಿ ಮಾಡಿ 28 ದಿನಕೊಮ್ಮೆ ಕಟಾವು ಮಾಡಲಾಗುತ್ತದೆ. ಒಂದು ಬಾರಿಗೆ 35ರಿಂದ 50 ಕೆ.ಜಿ ಅಣಬೆ ಇಳುವರಿ ಸಿಗುತ್ತಿದೆ. ತೀರ್ಥಹಳ್ಳಿ, ಹಾಸನ, ಶಿವಮೊಗ್ಗಕ್ಕೆ ಅಣಬೆ ಕಳುಹಿಸುವ ಇವರು ತಿಂಗಳಿಗೆ 5ರಿಂದ 9 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಅಣಬೆ ಕೃಷಿ ಜತೆಗೆ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿ ಹೈನುಗಾರಿಕೆ ಉದ್ಯಮದತ್ತ ಆಸಕ್ತಿ ಹೊಂದಿದ್ದಾರೆ.
ಬೆಳೆಯುವ ವಿಧಾನ: ಒಣಹುಲ್ಲನ್ನು ಐದು ಇಂಚು ಉದ್ದಕ್ಕೆ ಕತ್ತರಿಸಿ, ಐದರಿಂದ ಎಂಟು ತಾಸು ನೀರಿನಲ್ಲಿ ನೆನೆಸಿಡಬೇಕು. ಬಳಿಕ ಅಣಬೆ ಬಿತ್ತನೆ ಮಾಡಿದ ಹುಲ್ಲನ್ನು ಹಬೆಯಲ್ಲಿ ಎರಡು ತಾಸುಗಳ ಕಾಲ ಬೇಯಿಸಿ ಒಂದು ಕೆ.ಜಿ ಬಿತ್ತನೆಯಲ್ಲಿ 12 ಬೆಡ್ ಮಾಡಿ 20 ದಿನಗಳ ಕಾಲ ಕತ್ತಲುಕೋಣೆಯಲ್ಲಿ ಇಟ್ಟು 28ನೇ ದಿನಕ್ಕೆ ಅಣಬೆ ಕಟಾವು ಮಾಡಬೇಕು. ಪ್ರತಿದಿನ ಒಂದು ಕೆ.ಜಿ ಅಣಬೆ ತೆಗೆದು ಮಾರುಕಟ್ಟೆಯಲ್ಲಿ ಕೆ.ಜಿಗೆ 250 ರೂ.ಗೆ ಮಾರಾಟ ಮಾಡಬಹುದು.
ಕಾರ್ಮಿಕರ ಅವಶ್ಯವಿಲ್ಲ: ಅಣಬೆ ಕೃಷಿ ಮಾಡಲು ಕಾರ್ಮಿಕರ ಅಗತ್ಯವಿಲ್ಲ. ಮನೆಯವರೇ ಸೇರಿ ಸಮಯ ಸಿಕ್ಕಾಗ ಗಮನಕೊಟ್ಟು ಕಸುಬು ಮಾಡಬಹುದು. ಇದು ಅತ್ಯಂತ ಪೌಷ್ಟಿಕ ಆಹಾರ. ಪ್ರಸ್ತುತ ಸ್ಥಳೀಯ ಹೋಟೆಲ್‌ಗಳಲ್ಲಿ ಬಲು ಬೇಡಿಕೆ ಇದೆ. ನರೇಗಾ ಯೋಜನೆಯಡಿ ಇತರ ಸಂಸ್ಥೆಯೊಂದಿಗೆ ಒಗ್ಗೂಡಿ ಅಣಬೆ ಕೃಷಿ ಶೆಡ್ ಮಾಡಲು ಪ್ರೋತ್ಸಾಹ ನೀಡುತ್ತಿದೆ. ಸಂಜೀವಿನಿ ಕೆಎಸ್‌ಆರ್‌ಎಲ್‌ಪಿಎಸ್ ಯೋಜನೆಯಡಿ ಮಹಿಳಾ ಸ್ವಸಹಾಯ ಗುಂಪು ಅಥವಾ ಗ್ರಾಪಂ ಮಟ್ಟದ ಒಕ್ಕೂಟದ ಮೂಲಕ ಅನುಷ್ಠಾಗೊಳಿಸುತ್ತಿರುವ ಸಮುದಾಯ ಬಂಡವಾಳ ನಿಧಿ, ಬ್ಯಾಂಕಿನ ಸಾಲ ಹಾಗೂ ಸರ್ಕಾರದ ಯೋಜನೆಗಳಿಂದ ಸುಮಾರು 1.20 ಲಕ್ಷ ರೂ. ಹಣಕಾಸು ನೆರವು ಪಡೆದು ಅಣಬೆ ಕೃಷಿ ಆರಂಭಿಸಲು ಅವಕಾಶವಿದೆ.
ಯಾವುದೇ ಉದ್ಯಮ ಆರಂಭಿಸಬೇಕಾದರೆ ಆಸಕ್ತಿ ಮುಖ್ಯ. ಸಿಶಕ್ತಿ ಸಂಘಗಳ ಪ್ರೋತ್ಸಾಹದ ಜತೆಗೆ ಮಾರುಕಟ್ಟೆಯೂ ಪ್ರಮುಖ. ಗ್ರಾಮೀಣ ಭಾಗದಲ್ಲಿ ಈ ಉದ್ಯಮ ಮಾಡುವುದು ಕಷ್ಟವಾದರೂ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡುವ ಗುರಿ ಇದೆ. ಅಣಬೆ ಕೃಷಿ ಲಾಭದಾಯಕವಾದರೂ ಖರ್ಚು ಸಹ ಇದೆ. ಆದರೆ ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಪಡೆದ ಹೆಮ್ಮೆ ನನಗಿದೆ ಎನ್ನುತ್ತಾರೆ ತ್ರಿವೇಣಿ.