ಹೈದರಾಬಾದ್: ವ್ಯಕ್ತಿಯೊಬ್ಬ ಪತ್ನಿಯ ಸರವನ್ನು ನುಂಗಿರುವ ವಿಚಿತ್ರ ಘಟನೆಯೊಂದು ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ನಡೆದಿದೆ.
ಧರ್ಮಾವರಂ ಪಟ್ಟಣದ ರಾಜೇಂದ್ರ ನಗರದ ನಿವಾಸಿ, ರಾಮಾಂಜನೇಯುಲು ಎಂಬ ವ್ಯಕ್ತಿ ತನ್ನ ಪತ್ನಿಯ ಸರವನ್ನು ನುಂಗಿದ್ದಾನೆ. ಮೂರು ತಿಂಗಳವರೆಗೆ ಸರ ರಾಮಾಂಜನೇಯುಲು ಹೊಟ್ಟೆಯಲ್ಲಿಯೇ ಇತ್ತು. ಕೆಲವು ದಿನಗಳಿಂದ ತೀವ್ರ ಅಸ್ವಸ್ಥನಾಗಿದ್ದನು. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 'ಹೊಟ್ಟೆಯಲ್ಲಿರುವ ಸರವನ್ನು ಆಪರೇಷನ್ ಮಾಡಿ ತೆಗೆಯಬೇಕಿದೆ. ಸಾಕಷ್ಟು ಹಣ ಖರ್ಚಾಗುತ್ತದೆ' ಎಂದು ವೈದ್ಯರು ತಿಳಿಸಿದ್ದಾರೆ.
ಚಿಕಿತ್ಸೆಯ ವೆಚ್ಚದ ಅಂದಾಜನ್ನು ಹೇಳಿದಾಗ ಅಷ್ಟು ಹಣ ಕೊಡಲು ಸಾಧ್ಯವಾಗದ ಕಾರಣ ಅನಂತಪುರ ಸರ್ಕಾರಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ರೋಗಿ ಸ್ಥಿತಿಯನ್ನು ವೈದ್ಯರು ಅರಿತುಕೊಂಡರು. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿ ಕೆಲಸ ಮಾಡುತ್ತಿರುವ ಸುಕುಮಾರ್ ಯಾವುದೇ ಆಪರೇಷನ್ ಮಾಡದೆ ಹೊಟ್ಟೆಯಲ್ಲಿದ್ದ ಸರವನ್ನು ಬಾಯಿಯ ಮೂಲಕ ಹೊರತೆಗೆದಿದ್ದಾರೆ. ಸರವನ್ನು ಹೊರತೆಗೆಯಲು ವೈದ್ಯರು ಯಾವ ಪ್ರಯೋಗಮಾಡಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.
'ರಾಮಾಂಜನೇಯುಲು ಅವರ ಆರೋಗ್ಯವಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಶೀಘ್ರದಲ್ಲೇ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು. ಆದರೆ ಅವರು ಸರವನ್ನು ಯಾಕೆ ನುಂಗಿದ್ದಾರೆಂದು ತಿಳಿದು ಬಂದಿಲ್ಲ' ಎಂದು ವೈದ್ಯರು ತಿಳಿಸಿದ್ದಾರೆ.
ಯಾವುದೇ ಸರ್ಜರಿ ಮಾಡದೇ, ಒಂದೇ ಒಂದು ಹೊಲಿಗೆ ಕೂಡ ಇಲ್ಲದೆ ಚಿಕಿತ್ಸೆ ನೀಡಿದ ಡಾ.ಸುಕುಮಾರ್ ಅವರಿಗೆ ರಾಮಾಂಜನೇಯುಲು ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.