ಬಾಗಲಕೋಟೆ: ಮೂರು ಮಕ್ಕಳು ಮತ್ತು ಹೆಂಡತಿಯಿಂದ ದೂರವಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಎರಡನೇ ಮದುವೆಯಾಗಿದ್ದು, ಇದನ್ನು ಪ್ರಶ್ನಿದ ಮೊದಲ ಪತ್ನಿ ಮತ್ತು 15 ವರ್ಷದ ಮಗಳ ಮೇಲೆ ಸಾರ್ವಜನಿಕವಾಗಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ಬಾದಾಮಿ ತಾಲೂಕಿನ ಚಿಂಚಲಕಟ್ಟಿ ತಾಂಡಾದ ಸುಮಾರು 43 ವರ್ಷದ ಶಂಕರ್ ಪಮ್ಮಾರ ಹಲ್ಲೆ ನಡೆಸಿದವ. ಈತ 20 ವರ್ಷದ ಹಿಂದೆ ಭಾರತಿ ಎಂಬುವವರನ್ನು ಮದುವೆಯಾಗಿದ್ದ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬ ಕಲಹದಿಂದ ಬೇಸತ್ತ ಭಾರತಿ ಕಳೆದ ಮೂರು ವರ್ಷದಿಂದ ತಾಂಡಾದಲ್ಲೇ ಮಕ್ಕಳೊಂದಿಗೆ ಪತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ಮೊದಲ ಪತ್ನಿಗೆ ವಿಚ್ಛೇದನವನ್ನೂ ನೀಡದ ಶಂಕರ್ ಪಮ್ಮಾರ, ಮೂರು ತಿಂಗಳ ಹಿಂದೆ 2ನೇ ಮದುವೆಯಾಗಿದ್ದಾನೆ.
ಇದನ್ನೂ ಓದಿರಿ ಪೊಲೀಸ್ ಠಾಣೆಯ ಸಮೀಪದಲ್ಲೇ ನೇಣಿಗೆ ಶರಣಾದ ಸಿಬ್ಬಂದಿ
ಎರಡನೇ ಪತ್ನಿಯನ್ನು ಮನೆಗೆ ಕರೆತಂದ ಬಗ್ಗೆ ಪ್ರಶ್ನಿಸಿದ ಮೊದಲ ಪತ್ನಿಗೆ ಶಂಕರ್ ಪಮ್ಮಾರ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕೂದಲು ಹಿಡಿದು ಎಳೆದಾಡಿ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪತ್ನಿ ಜತೆಗೆ 15 ವರ್ಷದ ಮಗಳು ಸುಪ್ರೀತಾ ಮೇಲೂ ಹಲ್ಲೆ ಮಾಡಿದ್ದಾನೆ. ಭಾರತಿಯ ಕುತ್ತಿಗೆ, ನಡು, ಕೈಗೆ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.