ನ್ಯೂಸ್

ಪತ್ನಿಗೆ ಬೆಂಕಿ ಹಚ್ಚಿ ಪತಿಯೂ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಶೀಲ ಶಂಕಿಸಿ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಕೊತ್ತನೂರು ಮಾರಮ್ಮ ದೇವಸ್ಥಾನ ರಸ್ತೆ ನಿವಾಸಿ ಪ್ರಿಯಾಂಕಾ (24) ಮತ್ತು ಆತನ ಪತಿ ಪ್ರಭು ಜಂಗ್ಲಿ (30) ಬೆಂಕಿಯಿಂದ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನ.27ರ ರಾತ್ರಿ 7.30ಕ್ಕೆ ಈ ಘಟನೆ ನಡೆದಿದೆ. ಪ್ರಿಯಾಂಕಾ ನೀಡಿದ ದೂರಿನ ಮೇರೆಗೆ ಪತಿ ಪ್ರಭು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿ ಮೂಲದ ಪ್ರಭು ಮತ್ತು ಬೆಂಗಳೂರಿನ ಪ್ರಿಯಾಂಕಾ ಪ್ರೀತಿಸಿ 2023ರ ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಅನ್ಯೋನವಾಗಿದ್ದ ದಂಪತಿ ಬಳಿಕ ಪತ್ನಿ ಶೀಲದ ಬಗ್ಗೆ ಅನುಮಾನಗೊಂಡು ಪ್ರಭು ಜಗಳ ತೆಗೆದು ಹಲ್ಲೆ ಮಾಡುತ್ತಿದ್ದ.

ಒಂದೂವರೆ ತಿಂಗಳ ಹಿಂದೆ ಬೆಳಗಾವಿಯಿಂದ ನಗರಕ್ಕೆ ಬಂದು ದಂಪತಿ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೂ ಪ್ರಭು ಪ್ರತಿ ದಿನ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ನ.27ರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಪ್ರಭು, ಕೆಲಸಕ್ಕೆ ಹೋಗದೆ ಪ್ರಿಯಾಂಕಾ ಜತೆಗೆ ಜಗಳ ತೆಗೆದು ಹಲ್ಲೆ ಮಾಡಿದ್ದಾನೆ. ಬಾಟಲಿಯಿಂದ ತಂದಿದ್ದ ಪೆಟ್ರೋಲ್ ಅನ್ನು ಪತ್ನಿ ಮೇಲೆ ಸುರಿದು ಬಳಿಕ ತನ್ನ ಮೈ ಮೇಲೂ ಸುರಿದುಕೊಂಡು ಪತ್ನಿಗೆ ಬೆಂಕಿ ಹಚ್ಚಿ ಬಳಿಕ ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಉರಿ ತಾಳಲಾರದೆ ಇಬ್ಬರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ನೆರೆಹೊರೆಯ ನಿವಾಸಿಗಳು ಬೆಂಕಿ ನಂದಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.