ಕಾರವಾರ: ಮಹಾತ್ಮಾ ಗಾಂಧಿ ಅವರು ಕಾರವಾರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಾಸ್ತವ್ಯ ಮಾಡಿದ ಮನೆಯ ಡಾಕ್ಯುಮೆಂಟರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.
ಜಯಂತಿಯ ಅಂಗವಾಗಿ ನಗರಸಭೆ ಉದ್ಯಾನದಲ್ಲಿ ಗಾಂಧೀಜಿ ಅವರ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡಿ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಆಶ್ರಮ ರಸ್ತೆಯಲ್ಲಿರುವ ಹಳದೀಪು ಅವರ ಮನೆಗೆ ಭೇಟಿ ನೀಡಿ ವೀಕ್ಷಿಸಿದರು.
1933-34 ರಲ್ಲಿ ಹರಿಜನ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಕಾರವಾರಕ್ಕೆ ದೋಣಿಯ ಮೂಲಕ ಆಗಮಿಸಿದ್ದರು. ಕಾರವಾರದ ಹಳದೀಪುರ ಅವರ ನಿವಾಸದಲ್ಲಿ 27-2-1934 ರಂದು ರಾತ್ರಿ ವಾಸ್ತವ್ಯ ಹೂಡಿದ್ದರು. ಮರುದಿನ ಮನೆಯ ಸಮೀಪದ ಮೈದಾನದಲ್ಲಿ ಭಾಷಣ ಮಾಡಿದ್ದರು. ಆಗ ಅವರಿಗೆ ನೀಡಿದ ನೆನಪಿನ ಕಾಣಿಕೆ ಹಾಗೂ ಬಳಕೆ ಮಾಡಿದ ವಸ್ತುಗಳನ್ನು ಆ ಕಾಲದ ಛಾಯಾಚಿತ್ರಗಳನ್ನು ಹಳದೀಪುರ ಕುಟುಂಬ ಸಂರಕ್ಷಿಸಿದೆ.
ಮನೆಯಲ್ಲಿದ್ದ ಆಗಿನ ಕಾಲದ ಹಳೆಯ ಗ್ರಾಮಪೋನ್ ಸೇರಿದಂತೆ ಇತರೇ ಇಲೆಕ್ಟ್ರಾನಿಕ್ ವಸ್ತುಗಳು ಹಾಳಾಗಿದ್ದು, ಅವುಗಳನ್ನು ಪರಿಶೀಲಿಸಿದ ಎಸ್‌ಪಿ ಎಂ. ನಾರಾಯಣ, ಈ ವಸ್ತುಗಳನ್ನು ತಾನೇ ದುರಸ್ತಿ ಮಾಡಿಸಿಕೊಡುವುದಾಗಿ ಮನೆಯವರಿಗೆ ಭರವಸೆ ನೀಡಿದರು.
ಎಂಎಲ್‌ಸಿ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಉಪಾಧ್ಯಕ್ಷೆ ಪ್ರೀತಿ ಮಧುಕರ ಜೋಶಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಪೌರಾಯುಕ್ತ ಜಗದೀಶ್ ಹುಲಗೆಜ್ಜಿ , ಹಳದಿಪುರ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿದ್ದರು.