ಬೆಂಗಳೂರು: ಕಳಪೆ ಗುಣಮಟ್ಟದ ಕೀಟನಾಶಕಗಳನ್ನು ಮಾರಾಟಕ್ಕಾಗಿ ಪ್ರದರ್ಶನಕ್ಕಿಟ್ಟಿದ್ದ ಆರೋಪ ಸಂಬಂಧ ಮಳಿಗೆ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ದೇವಾನಂದ್ ಪಾಟೀಲ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್‌ಶೆಟ್ಟಿ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ಕೀಟನಾಶಕ ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಕಂಪನಿಯ ಉತ್ಪನ್ನಗಳನ್ನು ಮಾರಾಟಕ್ಕಾಗಿ ಪ್ರದರ್ಶಿಸಿದ ಅಂಗಡಿ ಮಾಲೀಕರಾಗಿದ್ದಾರೆ. ಹೀಗಾಗಿ ಆ ಉತ್ಪನ್ನಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ದಂಡ ವಿಧಿಸಲು ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಕೀಟನಾಶಕ ಕಾಯ್ದೆಯ ಸೆಕ್ಷನ್ 33ರ ಅನುಸಾರ ಕಳಪೆ ಕೀಟನಾಶಕ ಉತ್ಪಾದಿಸುವ ಕಂಪನಿಯ ಅಧಿಕಾರಿಗಳನ್ನು ಮಾತ್ರ ಆರೋಪಿಗಳಾಗುತ್ತಾರೆ. ಕಾಯ್ದೆಯ ಸೆಕ್ಷನ್ 29ರ ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ವಿಚಾರಣೆಯನ್ನು ಎದುರಿಸಲು ಕಂಪನಿಯ ಎ್ಲ ಉದ್ಯೋಗಿಗಳನ್ನು ಆರೋಪಿಗಳಾಗಿ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಕಳಪೆ ಗುಣಮಟ್ಟದ ಕೀಟನಾಶಕವನ್ನು ದಾಸ್ತಾನು ಮಾಡಿದ ಪ್ರತಿಯೊಬ್ಬ ವ್ಯಕ್ತಿಯು ಆರೋಪಿಯಾಗಿದ್ದು, ಕಾನೂನು ಕ್ರಮಕ್ಕೆ ಗುರಿಯಾಗುತ್ತಾನೆ ಎಂಬುದಾಗಿ ಒಪ್ಪಿಕೊಂಡಲ್ಲಿ ಚಿಲ್ಲರೆ ಅಂಗಡಿ ಮಾಲೀಕರು ಜತೆಗೆ, ಕೀಟನಾಶಕವನ್ನು ಖರೀದಿಸುವವರು ಸಹ ಕಾನೂನು ಕ್ರಮ ಎದುರಿಸಬೇಕಾಗಬಹುದು. ಆದ್ದರಿಂದ ಅಂತಹ ವಾದ ಒಪ್ಪಲಾಗದು ಎಂದು ಪೀಠ ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿದೆ.