ಬೆಂಗಳೂರು : ಸೆರೆವಾಸ ಅನುಭವಿಸುತ್ತಿರುವ ಸಮಯದಲ್ಲೇ ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾಗಲು ಸಜಾಬಂಧಿಗೆ ಅವಕಾಶ ಮಾಡಿಕೊಟ್ಟಿದ್ದ ಹೈಕೋರ್ಟ್, ಇದೀಗ ಮಗು ಹೊಂದಲು ಪರೋಲ್ ಮಂಜೂರು ಮಾಡಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಪ್ರಕರಣ ಸಂಬಂಧ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ಕೋಲಾರದ ಆನಂದ್ ಎಂಬಾತನನ್ನು ಇದೇ ಜೂ. ೫ರಿಂದ ೩೦ ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಪೀಠ ನಿರ್ದೇಶಿಸಿದೆ.
ಈ ಸಂಬಂಧ ಆರೋಪಿಯ ಪತ್ನಿ ತನ್ನ ಪತಿ ಆನಂದ್‌ನನ್ನು ೯೦ ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲು ಜೈಲು ಅಧೀಕ್ಷಕರಿಗೆ ನಿರ್ದೇಶಿಸುವಂತೆ ಕೋರಿ ಆತನ ಪತ್ನಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಅರ್ಜಿದಾರಳ ಪರ ವಕೀಲ ಡಿ.ಮೋಹನ್ ಕುಮಾರ್ ವಾದ ಮಂಡಿಸಿ, ಅರ್ಜಿದಾರೆಯನ್ನು ಮದುವೆಯಾಗಲು ಆರೋಪಿಯನ್ನು ಪರೋಲ್ ಮೇಲೆ ಬಿಡುಗಡೆ ಮಾಡಲು ಈ ಹಿಂದೆ ಹೈಕೋರ್ಟ್ ಆದೇಶಿಸಿತ್ತು. ಸದ್ಯ ದಂಪತಿ ಸಂತಾನ ಹೊಂದಲು ಬಯಸಿದ್ದು, ೯೦ ದಿನ ಪರೊಲ್ ಮೇಲೆ ಮಂಜೂರು ಮಾಡಬೇಕು. ಈ ಕುರಿತು ಅರ್ಜಿದಾರೆ ಸಲ್ಲಿಸಿರುವ ಮನವಿ ಪತ್ರವನ್ನು ಜೈಲು ಅಧಿಕಾರಿಗಳು ಪರಿಗಣಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದರು.
ಸರ್ಕಾರಿ ವಕೀಲರು, ಅರ್ಜಿದಾರೆಯ ಮನವಿ ಪುರಸ್ಕರಿಸಬಹುದಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರು ಅರ್ಜಿದಾರೆಯ ಪತಿಯನ್ನು ಜೂ. ೫ರಿಂದ ೩೦ ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಬೇಕು.
ಈ ಅವಧಿಯಲ್ಲಿ ಆನಂದ್ ವಾರಕ್ಕೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು. ೩೦ ದಿನಗಳ ನಂತರ ಪರೋಲ್ ಷರತ್ತುಗಳನ್ನು ಪಾಲಿಸಿದ್ದಲ್ಲಿ, ಬಳಿಕ ಆದರ ಆಧಾರದ ಮೇಲೆ ಮತ್ತೆ ೬೦ ದಿನಗಳ ಕಾಲ ಪೆರೋಲ್ ವಿಸ್ತರಣೆಗೆ ಆನಂದ್ ಹಾಗೂ ಅರ್ಜಿದಾರೆ ಕೋರಬಹುದು ಎಂದು ನಿರ್ದೇಶಿಸಿದೆ. ಆ ಮೂಲಕ ದಂಪತಿಗೆ ಸಂತಾನಭಾಗ್ಯ ಪಡೆಯಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.
ಪ್ರಕರಣವೇನು?
ಕೊಲೆ ಪ್ರಕರಣವೊಂದರಲ್ಲಿ ಕೋಲಾರದ ಆನಂದ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ೨೦೧೯ರಲ್ಲಿ ಕೋಲಾರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಜೀವಾವಧಿ ಶಿಕ್ಷೆಯನ್ನು ೧೦ ವರ್ಷಕ್ಕೆ ಇಳಿಸಿ ಕಳೆದ ವರ್ಷ ಹೈಕೋರ್ಟ್ ತೀರ್ಪು ನೀಡಿತ್ತು. ಜೈಲಿಗೆ ಹೋಗುವ ಮುನ್ನವೇ ಆನಂದ್ ಮತ್ತು ಅರ್ಜಿದಾರೆ ಪರಸ್ಪರ ಪ್ರೀತಿಸುತ್ತಿದ್ದರು. ಆ ಬಳಿಕವೂ ಪ್ರೀತಿ ಮುಂದುವರಿದಿತ್ತು. ಮದುವೆಯಾಗಲು ಅವರು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ಅರ್ಜಿ ಪರಿಗಣಿಸಿದ್ದ ಹೈಕೋರ್ಟ್, ಮದುವೆಯಾಗಲು ವೈವಾಹಿಕ ಜೀವನ ನಡೆಸಲು ಆನಂದ್‌ನನ್ನು ಕಳೆದ ವರ್ಷ ಮಾ.೩೧ರಿಂದ ೮೦ ದಿನ ಕಾಲ ಪರೋಲ್ ಮೇಲೆ ಬಿಡುಗಡೆಗೊಳಿಸಲು ಪರಪ್ಪನ ಅಗ್ರಹಾರ ಜೈಲು ಮುಖ್ಯ ಅಧೀಕ್ಷಕರಿಗೆ ಹೈಕೋರ್ಟ್ ಆದೇಶಿಸಿತ್ತು.