ನ್ಯೂಸ್

ಮನುಕುಲ ಉದ್ಧರಿಸಿದ ಮಹಾವೀರ

| ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ, ಶ್ರೀದಿಗಂಬರ ಜೈನಮಠ ಮೂಡುಬಿದಿರೆ

ಭಾರತವು ಶ್ರೇಷ್ಠವಾದ ದರ್ಶನ, ಸಂಸ್ಕೃತಿ ಮತ್ತು ಅಧ್ಯಾತ್ಮದಿಂದ ಶ್ರೀಮಂತವಾಗಿರುವ ದೇಶ. ಈ ದೇಶದಲ್ಲಿ ಹಲವು ಬಾರಿ ಧರ್ಮದ ಉನ್ನತಿಯಾಗಿದೆ. ಕೆಲವು ಬಾರಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯಿಂದ ಜನರೆಲ್ಲ ನೋವು, ಸಂಕಷ್ಟ ಪಡೆಯುತ್ತಾರೆ. ಇಂತಹ ಧರ್ಮಸಂಕಷ್ಟದಿಂದ ಪಾರುಗೊಳಿಸಲು ಧರ್ವತ್ಮರು ಹುಟ್ಟಿ, ಅವತರಿಸಿ ಜನರ ಸಂಕಷ್ಟವನ್ನು ದೂರಗೊಳಿಸುತ್ತಾರೆ.

ಬಿಹಾರ್ ರಾಜ್ಯದ ವೈಶಾಲಿ ನಗರದ ಕುಂಡ ಗ್ರಾಮದಲ್ಲಿ ರಾಜ ಸಿದ್ಧಾರ್ಥ-ತ್ರಿಶಾಲೆಯ ಪುತ್ರನಾಗಿ ವರ್ಧಮಾನ ಮಹಾವೀರರ ಜನನ ಕ್ರಿ.ಪೂ. 27.3.598ರಲ್ಲಿ ಆಯಿತು. ಬಾಲಕನ ಜನನದಿಂದ ರಾಜ್ಯದೆಲ್ಲೆಡೆ ಶುಭ ಸೂಚನೆಯಾಗುತ್ತದೆ. ಎಲ್ಲೆಲ್ಲೂ ಆನಂದದ ವಾತಾವರಣ. ಧಾರ್ವಿುಕ, ಸಾಮಾಜಿಕ, ರಾಜಕೀಯ, ಪ್ರಾಕೃತಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶದ ಅಭಿವೃದ್ಧಿ ಕಂಡು ‘ವರ್ಧಮಾನ’ ಎಂದು ಸಾರ್ಥಕ ಬಾಲಕನ ಹೆಸರು ಇಡುತ್ತಾರೆ. ಬಾಲ್ಯದಲ್ಲಿ ಆಟ-ಪಾಠಗಳಲ್ಲಿ ಬುದ್ಧಿವಂತನಾಗಿದ್ದ ವರ್ಧಮಾನ ಮದವೇರಿದ ಆನೆಯೊಂದು ಉತ್ಪಾತ ಮಾಡಿದಾಗ ಧೈರ್ಯದಿಂದ ಹೋರಾಡಿ, ಅದನ್ನು ಪಳಗಿಸಿ ಅದರ ಸಿಟ್ಟು ಇಳಿಯುವಂತೆ ಮಾಡಿದ.

ಸಂಗಮ ಎಂಬ ದೇವ ಒಂದು ಭಯಾನಕ ಸರ್ಪದ ರೂಪ ತಳೆದು ಕ್ರೀಡಾನಿರತ ವರ್ಧಮಾನ ಸಹಿತ ಬಾಲಕರಿಗೆ ಭಯ ಹುಟ್ಟಿಸಿದಾಗ ಸ್ವಲ್ಪವೂ ಅಂಜದೆ, ಅಳುಕದೆ ಆ ಘಟಸರ್ಪದ ತೊಂದರೆ ದೂರ ಮಾಡಿದ. ಪುನರ್ ಜನ್ಮ ಎಂಬುದು ಇದೆಯಾ ಇಲ್ಲವಾ ಎಂಬ ಶಂಕೆ ಸಂಜಯಂತ, ವಿಜಯಟತ ಚಾರಣ ಮುನಿಗಳಿರ್ವರಿಗೆ ಹಲವು ಸಮಯದಿಂದ ಕಾಡುತ್ತಿತ್ತು. ಅದಕ್ಕೆ ಇವರೆಗೂ ಸರಿಯಾಗಿ ಉತ್ತರ ಸಿಕ್ಕಿರಲಿಲ್ಲ. ಬಾಲಕ ವರ್ಧಮಾನರನ್ನು ಕಂಡ ಕೂಡಲೇ ಅವರಿಗೆ ಈವರೆಗೂ ಕಂಡಿರದ ಸತ್ಯದರ್ಶನವಾಯಿತು. ಬಾಲಕನ ದರ್ಶನ ಮಾತ್ರದಿಂದ ಉತ್ತರ ಕಂಡು ಸಂತೋಷ ಪಟ್ಟರು ಹಾಗೂ ಬಾಲಕನಿಗೆ ‘ಸನ್ಮತಿ’ ಎಂಬ ಹೆಸರು ನೀಡಿದರು.

ಹೀಗೆ ಕುಮಾರನಾದ ಬಾಲಕ ಮುಂದೆ ಜೀವಿಗಳು ಕಷ್ಟ ಪಡಲು ಕಾರಣ ಹುಡುಕುವ ದಾರ್ಶನಿಕರಾಗುತ್ತಾರೆ. ಜೀವಿಗೆ ಜೀವಿ ನೆರವು, ಪರಸ್ಪರ ಒಬ್ಬರಿಗೊಬ್ಬರು ಸಹಕಾರ ಮಾಡುವುದು, ಕಷ್ಟಗಳಿಗೆ ಸ್ಪಂದಿಸಿ ನೆರವು ನೀಡುವುದು ಮಾನವರ ಕರ್ತವ್ಯವಾಗಬೇಕು. ಸಂಸಾರದ ಬಂಧನಕ್ಕೆ ಕಾರಣ ಅರಿಷಡ್ ವರ್ಗ- ಕ್ರೋಧ, ಮಾನ, ಮಾಯಾ, ಲೋಭ, ಮದ, ಮತ್ಸರವೆಂಬ ಶತ್ರು ತನ್ನೊಳಗೆ ಇರುವ ಕೆಟ್ಟ ಮನಸು. ಮನಸ್ಸಿನ ಪರಿವರ್ತನೆ ಜ್ಞಾನ, ವಿವೇಕದಿಂದ ಸಾಧ್ಯ.

ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರಾದ ಸರಿಯಾದ ಪಾಲನೆಯಿಂದ ಜೀವನ ಪಾವನವಾಗುವುದು. ಹುಟ್ಟು-ಸಾವುಗಳ ಸಂಸಾರ ಚಕ್ರದಿಂದ ಪಾರಾಗಲು ಯೋಗ್ಯ ಸಂಸ್ಕಾರ, ಸಭ್ಯತೆ ಅಗತ್ಯ ಎಂಬ ಜ್ಞಾನವನ್ನು, 12 ವರ್ಷ ಕಂಡುಕೊಂಡ ಸತ್ಯವನ್ನು ದಿವ್ಯಜ್ಞಾನದ ಮೂಲಕ ಪಡೆದು ಜೀವ, ಆಜೀವ, ಅಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ ಎನ್ನುವ ಏಳು ತತ್ವಗಳಲ್ಲಿ ತಿಳಿಸಿದರು.

ಪಾಪದಿಂದ ಕೆಡುಕು, ಪುಣ್ಯದಿಂದ ಒಳಿತು, ಸ್ಥಿತಪ್ರಜ್ಞ ಮನಸ್ಸಿನ ಉತ್ತಮ ಧ್ಯಾನದಿಂದ ಕರ್ಮದ ಕ್ಷಯವಾಗುತ್ತದೆ. ಅಸುರಿ ಸಂಪತ್ತಿನ ನಾಶದಿಂದ ದೈವಿ ಸಂಪತ್ತು ಲಭಿಸುತ್ತದೆ. ಶ್ರೇಷ್ಠ ಆತ್ಮವನ್ನು ಪರಮಾತ್ಮನಾಗಿಸುವುದು ಮಾನವ ಜೀವನದ ಉತ್ತಮ ಸಂಸ್ಕಾರಗಳು. ವಿವಿಧ ಭವಗಳ ಒಟ್ಟು ಮೊತ್ತ ದ್ರವ್ಯ, ಕ್ಷೇತ್ರ, ಕಾಲ, ಭವ, ಭಾವ ಎನ್ನುವ ಪಂಚ ಪರಾವರ್ತನೆಯಿಂದ ಮುಕ್ತಿ ಸಿಗದು ಎಂದು ಬೋಧಿಸಿದರು. ಜನಸಾಮಾನ್ಯರಿಗೆ ಅವರು ಬೋಧಿಸಿದ ಉಪದೇಶಗಳ ಸಾರ

ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ.

ಮೂರು ಗುಣ ವ್ರತ ನಾಲ್ಕು, ಶಿಕ್ಷಾ ವ್ರತ- ರಾತ್ರಿ ಭೋಜನ ತ್ಯಾಗ, ಶುದ್ಧ ನೀರು, ಗಾಳಿಯನ್ನು ಸೇವಿಸುವುದು, ಹಳಸಿದ ಪದಾರ್ಥಗಳ ಸೇವನೆ ನಿಷೇಧ, ಮದ್ಯ, ಮಧು, ಮಾಂಸದ ತ್ಯಾಗ, ಬೇಟೆ ಮಾಡದೆ ಇರುವುದು, ಜೂಜು ಆಡದಿರುವುದು, ಇನ್ನೊಬ್ಬರ ಸಂಪತ್ತಿನ ಬಗ್ಗೆ ಲೋಭ ಮಾಡದಿರುವುದು. ಭಗವಾನ್ ಮಹಾವೀರ ಸ್ವಾಮಿಯ ಸಂದೇಶ ಒಂದು ಜಾತಿವರ್ಗಕ್ಕೆ ಸೀಮಿತವಾಗಿರಲಿಲ್ಲ. ಅದು ಇಡೀ ಮನುಕುಲದ ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಸವೋದಯ ಧರ್ಮತೀರ್ಥವಾಗಿತ್ತು. ಮಾನವ ಹುಟ್ಟಿನಿಂದ ಯಾರೂ ಮೇಲಲ್ಲ, ಕೀಳಲ್ಲ. ತನ್ನ ಕಾಯಕದಿಂದ ಮನುಷ್ಯ ಉತ್ತಮ ಅಥವಾ ಕನಿಷ್ಠನಾಗುತ್ತಾನೆ ಎಂಬುದಾಗಿ ತಿಳಿಸಿ, ಮನಸು, ವಚನ, ಕಾಯದ ಶುದ್ಧಿಯಿಂದ, ಆತ್ಮ ಸುಸಂಕೃತವಾಗುವುದು ಎಂದು ತಿಳಿಸಿಕೊಟ್ಟರು.

‘ತತ್ವಜ್ಞಾನ ವಿಹಿನಾನಮ್ ದುಃಖ್ಖಮೇವ ಶಾಶ್ವತಮ್- ‘ಪರಿಪೂರ್ಣವಾದ ಜ್ಞಾನವು ಆತ್ಮನನ್ನು ಸುಖಿಯನ್ನಾಗಿ ಇಡಬಲ್ಲದು’ ಎಂದು ನುಡಿದು, ಸಿದ್ಧ ಭಗವಂತರಾಗಿ ಅಮರ ಸಂದೇಶ ನೀಡಿದ ಭಗವಾನ್ ಮಹಾವೀರ ಜನ್ಮಕಲ್ಯಾಣದ ಸಂದರ್ಭದಲ್ಲಿ ಸರ್ವರಿಗೂ ಶುಭಾಶಯಗಳು.