ನ್ಯೂಸ್

ರಾಜ್ಯಕ್ಕೆ ತಟ್ಟಿದ ಬಿಸಿಲಾಘಾತ

kumarvrl

ಬೆಂಗಳೂರು: ಕರೊನಾ ಕಾರಣದಿಂದ ಮೊದಲೇ ಹೈರಾಣಾಗಿರುವ ರಾಜ್ಯದ ಜನತೆ ತಾಪಮಾನ ಏರಿಕೆಯಿಂದಾಗಿ ಮತ್ತಷ್ಟು ಕಂಗಾಲಾಗಿದ್ದಾರೆ. ಮಾರ್ಚ್ ಆರಂಭದಲ್ಲಿ 34-35 ಡಿಗ್ರಿ ಸೆಲ್ಸಿಯಸ್​ನಷ್ಟಿದ್ದ ಗರಿಷ್ಠ ತಾಪಮಾನ ಪ್ರಮಾಣ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗ 40 ಡಿಗ್ರಿ ದಾಟಿದ್ದರೆ, ಉಳಿದೆಡೆಯೂ ಬಿಸಿಲು ತೀವ್ರಗೊಂಡಿದೆ.

ಗುರುವಾರ ಕಲಬುರಗಿಯಲ್ಲಿ 42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಯಚೂರು, ವಿಜಯಪುರ, ಬೀದರ್, ಗದಗ, ಕೊಪ್ಪಳ, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ 38ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಹಾಸನ ಮುಂತಾದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಸರಾಸರಿ 35ರಿಂದ 38 ಡಿಗ್ರಿ ಸೆಲ್ಸಿಯಸ್​ನಷ್ಟಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಲವೆಡೆ ಅಕಾಲಿಕ ಮಳೆ ಸುರಿಯುತ್ತಿದ್ದರೂ ಕೆಲ ಜಿಲ್ಲೆಗಳಲ್ಲಿ ತಾಪಮಾನ ಏರಿಳಿತವಾಗುತ್ತಿದೆ. ಅದರಲ್ಲೂ ರಾಯಚೂರು, ಕಲಬುರಗಿ ಹಾಗೂ ವಿಜಯಪುರದಲ್ಲಿ ಕಳೆದ ಒಂದು ವಾರದಿಂದ ಗರಿಷ್ಠ ತಾಪಮಾನ ಸರಾಸರಿ 40 ಡಿಗ್ರಿ ಸೆಲ್ಸಿಯಸ್​ನಷ್ಟಿದೆ. ರಾತ್ರಿ ವೇಳೆ ಸೆಕೆ : ಬಿಸಿಲಿನ ಝುಳ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ 1ರಿಂದ 2 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ಹೆಚ್ಚಳವಾಗಿದೆ.

28ರವರೆಗೆ ಮಳೆ

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿತ್ತು. ಗುಡುಗಿನ ಅಬ್ಬರ ಜೋರಾಗಿತ್ತು. ತುಮಕೂರಿನಲ್ಲೂ ಜೋರು ಮಳೆ ಸುರಿದಿದೆ. ಮೇಲ್ಮೈ ಸುಳಿಗಾಳಿ, ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಏ.28ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಜೋರು ಮಳೆಯಾಗಲಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.