ನ್ಯೂಸ್

ಹೆಡ್‌ಕಾನ್‌ಸ್ಟೆಬಲ್ ಸಾವು ಹೃದಯಾಘಾತವಲ್ಲ, ಆತ್ಮಹತ್ಯೆ

ಬೆಂಗಳೂರು: ವಿಜಯನಗರ ಸಂಚಾರ ಠಾಣೆ ಹೆಡ್‌ಕಾನ್‌ಸ್ಟೆಬಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಾಸನ ಮೂಲದ ಎಂ.ಎನ್. ನವೀನ್ (36) ಮೃತ ಹೆಡ್‌ಕಾನ್‌ಸ್ಟೆಬಲ್. ವಿಜಯನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನವೀನ್, ಅತ್ತಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು.

ಶುಕ್ರವಾರ ಕರ್ತವ್ಯ ಮುಗಿಸಿಕೊಂಡು ಹೋಗಿದ್ದ ನವೀನ್, ಶನಿವಾರ ಸೇವೆಗೆ ಬಂದಿರಲಿಲ್ಲ. ಠಾಣೆಗೆ ಮಾಹಿತಿ ಸಹ ನೀಡಿರಲಿಲ್ಲ. ಸಹೋದ್ಯೋಗಿಗಳು ಮೊಬೈಲ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಕೊನೆಗೆ ಅವರ ಸ್ನೇಹಿತರಿಗೆ ಕರೆಮಾಡಿ ಮನೆ ವಿಳಾಸ ಪಡೆದು ಹೋಗಿ ನೋಡಿದಾಗ ಮೃತಪಟ್ಟಿರುವುದು ಕಂಡು ಬಂದಿತ್ತು. ಆರಂಭದಲ್ಲಿ ಹೃದಯಾಘಾತ ಆಗಿರಬಹುದು ಎಂದು ತಿಳಿದು ಪಾಲಕರಿಗೆ ವಿಷಯ ತಿಳಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು.

ಇದೀಗ ವೈದ್ಯರ ವರದಿಯಲ್ಲಿ ಮದ್ಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆ.25ಕ್ಕೆ ಮದುವೆ ನಿಗದಿ ಆಗಿತ್ತು. ಸ್ನೇಹಿತ ಬಳಿ ಯಾವುದೇ ನೋವು ಹೇಳಿಕೊಂಡಿರಲಿಲ್ಲ. ಆಗಾಗಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಾಲಕರಿಗೆ ವಿಷಯ ತಿಳಿಸಿ ಅವರಿಂದ ಹೇಳಿಕೆ ಪಡೆದು ತನಿಖೆ ನಡೆಸಿದಾಗ ಮಾತ್ರ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೈರಲ್ ಆದ ಪೊಲೀಸ್ ಸ್ಟೇಟಸ್ :

ಹೆಡ್‌ಕಾನ್‌ಸ್ಟೆಬಲ್ ನವೀನ್ ಆತ್ಮಹತ್ಯೆ ಬೆನ್ನೆಲ್ಲೆ ಕಾನ್‌ಸ್ಟೆಬಲ್‌ರೊಬ್ಬರು ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಭಾವುಕ ನುಡಿಗಳು ಮತ್ತು ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ‘ಸುರಿವ ಮಳೆಯಲ್ಲಿ ರಸ್ತೆಯಲ್ಲಿ ನಿಂತಾಗ ಸೈಡಿಗೆ ಬಾ ಎನ್ನಲಿಲ್ಲ. ಗುಡುಗು ಮಿಂಚಿನ ನಡುವೆ ಬೆದರಿ ನಡುಗುವಾಗ ಬೆಂಬಲಕ್ಕೂ ಬಾರಲಿಲ್ಲ. ಎಲ್ಲ ಮುಗಿದ ಮೇಲೆ ಆರ್‌ಐಪಿ.ಅಂತೆ... ಆರೋಗ್ಯ ಕೈ ಕೊಟ್ಟಾಗ ಆಸ್ಪತ್ರೆಯಲ್ಲಿ ಆರೋಗ್ಯ ಭಾಗ್ಯ ಯೋಜನೆಯೇ ಇರಲಿಲ್ಲ. ಕುಟುಂಬದವರಿಗೆ ಕಷ್ಟವೆಂದಾಗ ಕಣ್ಣೊರೆಸಲು ಕರ್ತವ್ಯದಿಂದ ಬಿಡುಗಡೆಯೇ ಸಿಗಲಿಲ್ಲ. ಎಲ್ಲ ಮುಗಿದ ಮೇಲೆ ಆರ್‌ಐಪಿ..ಅಂತೆ. ವಾರಕ್ಕೊಮ್ಮೆ ಸಾರ್ವಜನಿಕ ಸಂಪರ್ಕ ಸಭೆ ನಡೆಸುವಾಗ ಪೊಲೀಸರ ಸಭೆಗೆ ಸಮಯವೇ ಇರಲಿಲ್ಲ, ಸಾರ್ವಜನಿಕವಾಗಿ ಪೊಲೀಸರ ಪರವಾಗಿ ಎಂದು ಧ್ವನಿ ಎತ್ತಲಿಲ್ಲ, ಎಲ್ಲ ಮುಗಿದ ಮೇಲೆ ಆರ್‌ಐಪಿ..ಅಂತೆ. ಹೃದಯಾಘಾತ ಆಗುತ್ತದೆ ಎಂದು ಸಾರಿ ಸಾರಿ ಹೇಳಿದರು ಕ್ಯಾಮರಾ ಧರಿಸಬೇಕಂತೆ, ಕ್ಯಾಮರಾ ಮೇಲೆ ಇಟ್ಟಿರುವ ನಂಬಿಕೆ ಪೊಲೀಸರ ಮೇಲೆ ಇಲ್ಲವಂತೆ, ಎಲ್ಲ ಮುಗಿದ ಮೇಲೆ ಆರ್‌ಐಪಿ..ಅಂತೆ ಎಂದು ಕಾನ್‌ಸ್ಟೆಬಲ್ ಮಾಡಿರುವ ಸ್ಟೇಟಸ್ ಎಲ್ಲೆಡೆ ವೈರಲ್ ಆಗಿದೆ.