ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆಯೋಜಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿದರು. ಎಂ.ಬಿ. ಶಿವಕುಮಾರ್, ಕುಬೇರಪ್ಪ, ಡಾ. ಶಿವಕುಮಾರ್, ಸಿದ್ದೇಶ್ವರ್ ಇತರರಿದ್ದರು.  
ನ್ಯೂಸ್

ಯಶಸ್ವಿ ಕಾರ್ಯಗಳಲ್ಲಿದೆ ಭಾರತೀಯರ ಪರಿಶ್ರಮ

ಶಿಕಾರಿಪುರ: ರಾಷ್ಟ್ರ ಸರ್ವ ಕ್ಷೇತ್ರದಲ್ಲೂ ಅಭಿವೃದ್ಧಿ ಆಗಬೇಕಾದರೆ ಯುವಶಕ್ತಿ ಸದ್ಬಳಕೆ ಆಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ವಿವೇಕಾನಂದರು ತೇಜಸ್ಸಿನ ಸಾಕಾರ ಮೂರ್ತಿ. ಹಿಂದು ಧರ್ಮದ ಸಂದೇಶಗಳು ಜಗತ್ತಿನೆಲ್ಲೆಡೆ ಬೆಳಗುವಂತೆ ಮಾಡಿದವರು ಎಂದರು.

ಯುವಕರು ಜಾಗೃತರಾದರೆ ದೇಶ ಅಭಿವೃದ್ಧಿ ಆಗುತ್ತದೆ. ಜಗತ್ತಿನಲ್ಲಿ ನೀವು ಯಾವ ಮೂಲೆಗೆ ಹೋದರೂ, ಯಾವುದೇ ಯಶಸ್ವಿ ಕ್ಷೇತ್ರವನ್ನು ಗಮನಿಸಿದರೆ ಅಲ್ಲಿ ಭಾರತೀಯರ ಪರಿಶ್ರಮ, ಜ್ಞಾನದ ಛಾಪು ಕಂಡು ಬರುತ್ತದೆ. ವಿವೇಕಾನಂದರ ಯೋಚನೆ, ಸಂಕಲ್ಪ ಮತ್ತು ಗುರಿಯ ಬಲದಿಂದ ಜಗತ್ತಿನ ಭೂಪಟದಲ್ಲಿ ಭಾರತ ವಿಭಿನ್ನವಾಗಿ ಪ್ರಕಾಶಿಸುತ್ತಿದೆ. ಪಾಶ್ಚಾತ್ಯರಿಗೆ ಭಾರತ ಹಾಗೂ ಭಾರತೀಯರ ಬಗೆಗಿದ್ದ ಸಂಕುಚಿತ ಮನೋಭಾವನೆಯನ್ನು ತಮ್ಮ ಒಂದೇ ಒಂದು ಭಾಷಣದಿಂದ ದೂರ ಮಾಡಿದರು ಎಂದು ಹೇಳಿದರು.

ವಿವೇಕಾನಂದರು ಚಿಂತಕ, ಯುಕ್ತಿ-ಶಕ್ತಿಯ ಸಂಚಾಲಕ, ಪರಮ ಗುರುವಿನ ಆರಾಧಕ, ಸಮಾಜ ಸುಧಾರಕ, ರಾಷ್ಟ್ರಪ್ರೇಮ ಪ್ರಚೋದಕ, ದಮನಿತರ ಆಶಾಕಿರಣ, ಜನಮನದಲ್ಲಿ ಚಿರಸ್ಥಾಯಿಯಾಗಿ ನೆಲೆ ನಿಂತ ವಿಶ್ವ ಧರ್ಮ ಪ್ರಚಾರಕ ಹಾಗೂ ಯುವ ಸಮೂಹದ ಮಾಂತ್ರಿಕ. ಯುವ ಸಮೂಹ ನಮ್ಮ ರಾಷ್ಟ್ರದ ಸಂಪತ್ತು ಎಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ ಎಂದರು.

ಸಂಸ್ಥೆ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಆಡಳಿತ ಮಂಡಳಿಯ ಕುಬೇರಪ್ಪ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ್, ಕೆಆರ್‌ಸಿಎಸ್ ಪ್ರಿನ್ಸಿಪಲ್ ಸಿದ್ದೇಶ್ವರ್, ಡಾ. ರವೀಂದ್ರ, ಮೈತ್ರಿ ಸಂಸ್ಥೆ ಪ್ರಾಚಾರ್ಯ ವಿಶ್ವನಾಥ್, ಉಪ ಪ್ರಾಚಾರ್ಯ ಪ್ರಶಾಂತ್ ಇತರರಿದ್ದರು.