ಲಖನೌ: ಉತ್ತರ ಭಾರತೀಯರು ಮದುವೆ ಸಮಾರಂಭದಲ್ಲಿ ಸಂಭ್ರಮಾಚರಣೆಗಾಗಿ ಬಂದೂಕಿನಿಂದ ಗುಂಡು ಹಾರಿಸುವುದು ಸಾಮಾನ್ಯವಾಗಿದೆ. ಆದರೆ ಇಂತಹ ಆಚರಣೆಗಳು ಕೆಲವೊಮ್ಮೆ ಅಪರಾಧ ಕೃತ್ಯಗಳಲ್ಲಿ ಕೊನೆಗೊಳ್ಳುತ್ತಿರುವುದು ದುರಂತವೇ ಸರಿ. ಇದೀಗ ಇಂತಹದ್ದೇ ಘಟನೆ ನಡೆದಿದ್ದು, ಮದುವೆ ಸಂಭ್ರಮದಲ್ಲಿದ್ದವರಿಗೆ ಮದುಮಗನೇ ಶಾಕ್ ನೀಡಿದ್ದಾನೆ.
ಮದುವೆ ಸಂಭ್ರಮಾಚರಣೆಯಲ್ಲಿದ್ದ ವೇಳೆಯೇ ಮದುಮಗನಿಂದ ಅಪರಾಧ ಕೃತ್ಯ ನಡೆದುಹೋಗಿದೆ. ಸಂತೋಷಕ್ಕಾಗಿ ಹಾರಿಸಿದ ಗುಂಡು ಸೀದಾ ತನ್ನ ಸ್ನೇಹಿತ ಎದೆಗೆ ತಗುಲಿ ಆತ ಸಾವನ್ನಪ್ಪಿದ್ದಾನೆ.
ಉತ್ತರ ಪ್ರದೇಶದ ಸೊನ್ಭದ್ರ ಜಿಲ್ಲೆಯಲ್ಲಿ ಬ್ರಹ್ಮಾ ನಗರದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು, ಮದುಮಗ ಮನೀಶ್ ಮಧೇಶಿಯಾ ಸುತ್ತಲೂ ಸ್ನೇಹಿತರು ಸೇರಿದಂತೆ ಹಲವರು ನಿಂತಿದ್ದರು, ಇದೇ ವೇಳೆ ಖುಷಿಯಲ್ಲಿ ಗುಂಡು ಹಾರಿಸಿದ್ದಾನೆ. ಈ ಗುಂಡು ಅಲ್ಲೇ ನಿಂತಿದ್ದ ತನ್ನ ಸೈನಿಕ ಸ್ನೇಹಿತ ಬಾಬು ಲಾಲ್ ಯಾದವ್ನನ್ನು ತಗುಲಿದೆ. ದುರಂತ ಎಂದರೆ ಈ ಗನ್ ಕೂಡ ಮೃತ ಯಾದವ್ನದ್ದಾಗಿದೆ.
ಕೂಡಲೇ ಯಾದವ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಇನ್ನು ವರನ ವಿರುದ್ಧ ದೂರು ಕೂಡ ದಾಖಲಾಗಿದೆ.
ಯಾವುದೇ ಸಭೆ ಸಮಾರಂಭಗಳಲ್ಲಿ ಈ ರೀತಿ ಬಂದೂಕು ಬಳಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಒಂದು ವೇಳೆ ಬಳಸಿದರೂ ಅನುಮತಿ ಪಡೆದಿರಬೇಕಿದೆ. ಇದು ಗೊತ್ತಿದ್ದರೂ ಪದೇ ಪದೇ ಇಂತಹ ಅಚಾತುರ್ಯ ಘಟನೆಗಳು ನಡೆಯುತ್ತಲೇ ಇದೆ. (ಏಜೆನ್ಸೀಸ್)