ನ್ಯೂಸ್

ಸಾಂಸ್ಕೃತಿಕ ಅಸ್ಮಿತೆಯ ದೊಡ್ಡ ಶಕ್ತಿ ಭೂಪೇನ್ ದಾ

ಇಂದು, ಸೆಪ್ಟೆಂಬರ್ 8, ಭಾರತೀಯ ಸಂಸ್ಕೃತಿ ಮತ್ತು ಸಂಗೀತವನ್ನು ಪ್ರೀತಿಸುವ ಎಲ್ಲರಿಗೂ ಬಹಳ ವಿಶೇಷವಾದ ದಿನ. ಈ ದಿನ ಅಸ್ಸಾಂನ ನನ್ನ ಸಹೋದರ ಸಹೋದರಿಯರಿಗೆ ಇನ್ನಷ್ಟು ವಿಶೇಷವಾದುದು. ಭಾರತ ಕಂಡ ಅತ್ಯಂತ ಅಸಾಧಾರಣ ಧ್ವನಿಗಳಲ್ಲಿ ಒಬ್ಬರಾದ ಡಾ. ಭೂಪೇನ್ ಹಜಾರಿಕಾ ಅವರ ಜಯಂತಿ. ನಿಮಗೆಲ್ಲರಿಗೂ ತಿಳಿದಿರುವಂತೆ, ಈ ವರ್ಷ ಅವರ ಜನ್ಮ ಶತಮಾನೋತ್ಸವದ ಆಚರಣೆ ಆರಂಭವಾಗಿದೆ. ಭಾರತೀಯ ಕಲಾತ್ಮಕ ಅಭಿವ್ಯಕ್ತಿ ಮತ್ತು ಜನಮಾನಸಕ್ಕೆ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ಸಂದರ್ಭವಿದು.

ಭೂಪೇನ್ ದಾ ನಮಗೆ ನೀಡಿದ್ದು ಸಂಗೀತವನ್ನು ಮೀರಿ ವಿಸ್ತರಿಸಿದೆ. ಅವರ ಸಂಯೋಜನೆಗಳು ಮಾಧುರ್ಯ ಮೀರಿದ ಭಾವನೆಗಳ ಮಿಲನವಾಗಿವೆ. ಕೇವಲ ಧ್ವನಿಗಿಂತ ಹೆಚ್ಚಾಗಿ, ಅವರು ಜನರ ಹೃದಯಬಡಿತವಾಗಿದ್ದರು. ಪ್ರತಿ ಪದವೂ ದಯಾಪರತೆ, ಸಾಮಾಜಿಕ ನ್ಯಾಯ, ಏಕತೆ ಮತ್ತು ಆಳವಾಗಿ ಬೇರೂರಿದ ಅನ್ಯೋನ್ಯತೆ ಪ್ರತಿಧ್ವನಿಸುವ ಅವರ ಹಾಡುಗಳನ್ನು ಕೇಳುತ್ತ ತಲೆಮಾರುಗಳು ಬೆಳೆದಿವೆ.

ಅಸ್ಸಾಂನಿಂದ ಹೊರಹೊಮ್ಮಿದ ಧ್ವನಿಯು ಕಾಲಾತೀತ ನದಿಯಂತೆ ಹರಿಯಿತು, ಗಡಿಗಳು ಮತ್ತು ಸಂಸ್ಕೃತಿಗಳನ್ನು ದಾಟಿತು, ಮಾನವೀಯತೆಯ ಚೈತನ್ಯವನ್ನು ಹೊತ್ತು ಸಾಗಿತು. ಭೂಪೇನ್ ದಾ ಪ್ರಪಂಚದಾದ್ಯಂತ ಪಯಣಿಸಿದರು, ಸಮಾಜದ ಎಲ್ಲ ವರ್ಗಗಳ ದಿಗ್ಗಜರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದರು, ಆದರೆ ಅವರು ಅಸ್ಸಾಂನಲ್ಲಿನ ತಮ್ಮ ಬೇರುಗಳೊಂದಿಗೆ ಆಳವಾದ ಸಂಪರ್ಕ ಹೊಂದಿದ್ದರು. ಅಸ್ಸಾಂನ ಶ್ರೀಮಂತ ಮೌಖಿಕ ಪರಂಪರೆ, ಜಾನಪದ ಮತ್ತು ಸಮುದಾಯಿಕ ಕಥೆ ಹೇಳುವ ಅಭ್ಯಾಸಗಳು ಅವರ ಬಾಲ್ಯದ ಮೇಲೆ ಗಾಢ ಪ್ರಭಾವ ಬೀರಿದವು. ಈ ಅನುಭವಗಳು ಅವರ ಕಲಾತ್ಮಕ ಶಬ್ದಕೋಶದ ಆಧಾರವನ್ನು ರೂಪಿಸಿದವು. ಅವರು ಯಾವಾಗಲೂ ಅಸ್ಸಾಂನ ಮೂಲ ಅಸ್ಮಿತೆ ಮತ್ತು ಅಲ್ಲಿನ ಜನರ ನೈತಿಕ ಪ್ರಜ್ಞೆಯನ್ನು ತಮ್ಮೊಳಗೆ ಹೊಂದಿದ್ದರು.

ಭೂಪೇನ್ ದಾ ಅವರ ಪ್ರತಿಭೆ ಬಹಳ ಸಣ್ಣ ವಯಸ್ಸಿನಲ್ಲಿಯೇ ಸ್ಪಷ್ಟವಾಗಿತ್ತು. ಕೇವಲ ಐದು ವರ್ಷ ವಯಸ್ಸಿನಲ್ಲಿ, ಅವರು ಸಾರ್ವಜನಿಕ ಸಮಾರಂಭದಲ್ಲಿ ಹಾಡಿದರು ಮತ್ತು ಅಸ್ಸಾಮಿ ಸಾಹಿತ್ಯದ ದಿಗ್ಗಜ ಲಕ್ಷ್ಮಿನಾಥ್ ಬೆಜ್ಬರುವಾ ಅವರ ಗಮನ ಸೆಳೆದರು. ಅವರ ಹದಿಹರೆಯದಲ್ಲಿ, ತಮ್ಮ ಮೊದಲ ಹಾಡನ್ನು ರೆಕಾರ್ಡ್ ಮಾಡಿದರು. ಜ್ಯೋತಿ ಪ್ರಸಾದ್ ಅಗರ್ವಾಲಾ ಮತ್ತು ಬಿಷ್ಣು ಪ್ರಸಾದ್ ರಾಭಾ ಅವರಂತಹ ಸಾಂಸ್ಕೃತಿಕ ದಿಗ್ಗಜರು ಅವರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದರು ಮತ್ತು ಅವರ ಜಿಜ್ಞಾಸೆಯ ಸ್ವಭಾವವನ್ನು ಗಾಢವಾಗಿಸಿದರು. ಕಲಿಯುವ ಈ ಉತ್ಸಾಹವು ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕಾಟನ್ ಕಾಲೇಜಿನಲ್ಲಿ ಉತ್ತಮ ಸಾಧನೆ ಮಾಡಲು ಕಾರಣವಾಯಿತು ಮತ್ತು ಅವರನ್ನು ಅಮೆರಿಕಕ್ಕೆ ಕರೆದೊಯ್ದಿತು, ಅಲ್ಲಿ ಅವರು ಆ ಕಾಲದ ಪ್ರಮುಖ ಶಿಕ್ಷಣ ತಜ್ಞರು, ಚಿಂತಕರು ಮತ್ತು ಸಂಗೀತಗಾರರೊಂದಿಗೆ ಸಂವಾದ ನಡೆಸಿದರು. ಅವರು ಶ್ರೇಷ್ಠ ಕಲಾವಿದ ಪಾಲ್ ರೋಬೆಸನ್ ಅವರನ್ನು ಭೇಟಿಯಾದರು. ರೋಬೆಸನ್ ಅವರ ’ಣ್ಝ Mಚ್ಞ ್ಕಡಛ್ಟಿ’ ಹಾಡು ಭೂಪೇನ್ ದಾ ಅವರ ಸಾಂಪ್ರದಾಯಿಕ ಸಂಯೋಜನೆ ‘ಬಿಸ್ತಿರ್ನೆ ಪರೋರೆ’ಗೆ ಸ್ಪೂರ್ತಿಯಾಯಿತು. ಜನರಿಗೆ ಅಚ್ಚುಮೆಚ್ಚಿನವರಾಗಿದ್ದ ಅಮೆರಿಕದ ಮಾಜಿ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಅವರು ಭಾರತೀಯ ಜಾನಪದ ಸಂಗೀತದ ಪ್ರದರ್ಶನಕ್ಕಾಗಿ ಅವರಿಗೆ ಚಿನ್ನದ ಪದಕ ನೀಡಿದರು.

ಭೂಪೇನ್ ದಾ ಅವರಿಗೆ ಅಮೆರಿಕದಲ್ಲಿಯೇ ಉಳಿಯುವ ಅವಕಾಶವಿತ್ತು, ಆದರೆ ಅವರು ಭಾರತಕ್ಕೆ ಹಿಂತಿರುಗಿ ಸಂಗೀತದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ರೇಡಿಯೊದಿಂದ ರಂಗಭೂಮಿಯವರೆಗೆ, ಚಲನಚಿತ್ರಗಳಿಂದ ಶೈಕ್ಷಣಿಕ ಸಾಕ್ಷ ್ಯತ್ರಗಳವರೆಗೆ, ಅವರು ಪ್ರತಿಯೊಂದು ಮಾಧ್ಯಮದಲ್ಲೂ ಪ್ರವೀಣರಾಗಿದ್ದರು. ಅವರ ಸಂಯೋಜನೆಗಳಲ್ಲಿ ಸಾಹಿತ್ಯದ ಜೊತೆಗೆ ಸಾಮಾಜಿಕ ಸಂದೇಶಗಳೂ ಇದ್ದವು, ಬಡವರಿಗೆ ನ್ಯಾಯ, ಗ್ರಾಮೀಣಾಭಿವೃದ್ಧಿ, ಸಾಮಾನ್ಯ ನಾಗರಿಕರ ಶಕ್ತಿ ಮುಂತಾದ ವಿಷಯಗಳನ್ನು ಅವು ಒಳಗೊಂಡಿದ್ದವು. ತಮ್ಮ ಸಂಗೀತದ ಮೂಲಕ, ಅವರು ದೋಣಿ ನಡೆಸುವವರು, ಚಹಾ ತೋಟದ ಕೆಲಸಗಾರರು, ಮಹಿಳೆಯರು, ರೈತರು ಮುಂತಾದವರ ಆಕಾಂಕ್ಷೆಗಳಿಗೆ ದನಿಯಾದರು.

ಭೂಪೇನ್ ಹಜಾರಿಕಾ ಅವರ ಜೀವನ ಪಯಣವು ‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ಮನೋಭಾವದ ಪ್ರಬಲ ಅಭಿವ್ಯಕ್ತಿಯಾಗಿತ್ತು. ಅವರ ಸಂಯೋಜನೆಗಳು ಭಾಷೆ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ದೇಶಾದ್ಯಂತ ಜನರನ್ನು ಒಗ್ಗೂಡಿಸಿದವು. ಅವರು ಅಸ್ಸಾಮಿ, ಬಂಗಾಳಿ ಮತ್ತು ಹಿಂದಿ ಭಾಷೆಗಳ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದರು.

ಭೂಪೇನ್ ದಾ ರಾಜಕೀಯ ವ್ಯಕ್ತಿಯಲ್ಲದಿದ್ದರೂ, ಸಾರ್ವಜನಿಕ ಸೇವೆಯ ಪ್ರಪಂಚದೊಂದಿಗೆ ಸಂಪರ್ಕ ಹೊಂದಿದ್ದರು. 1967ರಲ್ಲಿ, ಅವರು ಅಸ್ಸಾಂನ ನವೋಬೋಯಿಚಾ ಕ್ಷೇತ್ರದಿಂದ ಸ್ವತಂತ್ರ ಶಾಸಕರಾಗಿ ಆಯ್ಕೆಯಾದರು, ಇದು ಅವರ ಸಾರ್ವಜನಿಕ ವ್ಯಕ್ತಿತ್ವವು ಸಾರ್ವಜನಿಕ ನಂಬಿಕೆಯಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸ್ಪಷ್ಟಪಡಿಸಿತು. ಅವರು ಎಂದಿಗೂ ವೃತ್ತಿಪರ ರಾಜಕಾರಣಿಯಾಗಲಿಲ್ಲವಾದರೂ, ಇತರರಿಗೆ ಸೇವೆ ಸಲ್ಲಿಸುವ ಅವರ ಉತ್ಸಾಹವು ಪ್ರಭಾವಶಾಲಿಯಾಗಿತ್ತು.

ಭಾರತ ಸರ್ಕಾರ ಮತ್ತು ಜನರು ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿದ್ದಾರೆ. ಅವರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. 2019ರಲ್ಲಿ, ನಮ್ಮ ಅಧಿಕಾರಾವಧಿಯಲ್ಲಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದು ವೈಯಕ್ತಿಕವಾಗಿ ನನಗೆ ಮತ್ತು ಎನ್​ಡಿಎ ಸರ್ಕಾರಕ್ಕೆ ಗೌರವದ ವಿಷಯವಾಗಿದೆ. ಪ್ರಪಂಚದಾದ್ಯಂತ ಜನರು, ವಿಶೇಷವಾಗಿ ಅಸ್ಸಾಂ ಮತ್ತು ಈಶಾನ್ಯದ ಜನರು ಅವರಿಗೆ ನೀಡಲಾದ ಪುರಸ್ಕಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಈ ಪುರಸ್ಕಾರವು ಭೂಪೇನ್ ದಾ ಅವರ ಹೃದಯಕ್ಕೆ ಬಹಳ ಹತ್ತಿರವಾಗಿದ್ದ ತತ್ವಗಳನ್ನು ಗೌರವಿಸುತ್ತದೆ- ಸಂಗೀತವು ಸತ್ಯವನ್ನು ಆಧರಿಸಿದ್ದಾಗ, ಎಲ್ಲ ಅಡೆತಡೆಗಳನ್ನು ಮೀರುತ್ತದೆ. ಒಂದು ಹಾಡು ಜನರ ಕನಸುಗಳ ಭಾರವನ್ನು ಹೊತ್ತುಕೊಳ್ಳಬಹುದು ಮತ್ತು ಪ್ರಪಂಚದಾದ್ಯಂತದ ಹೃದಯಗಳನ್ನು ರ್ಸ³ಸಬಹುದು.

2011ರಲ್ಲಿ ಭೂಪೇನ್ ದಾ ಅವರು ನಿಧನರಾದ ಸಮಯ ನನಗೆ ನೆನಪಿದೆ. ಅವರ ಅಂತಿಮ ಸಂಸ್ಕಾರದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದನ್ನು ನಾನು ದೂರದರ್ಶನದಲ್ಲಿ ನೋಡಿದೆ. ಆ ಸಮಯದಲ್ಲಿ ಎಲ್ಲರ ಕಣ್ಣುಗಳು ತೇವವಾಗಿದ್ದವು. ಅವರ ಅದ್ಭುತ ಜೀವನದಂತೆಯೇ, ಸಾವಿನಲ್ಲೂ ಅವರು ಜನರನ್ನು ಒಂದುಗೂಡಿಸಿದರು. ಹೀಗಾಗಿ ಅವರ ಸಂಗೀತ, ರೂಪಕಗಳು ಮತ್ತು ನೆನಪುಗಳ ಜೀವಾಳವಾಗಿದ್ದ ಬ್ರಹ್ಮಪುತ್ರ ನದಿ ತಟದ ಜಲುಕ್ಬರಿ ಬೆಟ್ಟದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಿದ್ದು ಸೂಕ್ತವಾಗಿತ್ತು. ಭೂಪೇನ್ ಹಜಾರಿಕಾ ಅವರ ಜೀವನ ಪಯಣವನ್ನು ಯುವಜನರಲ್ಲಿ ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಭೂಪೇನ್ ಹಜಾರಿಕಾ ಸಾಂಸ್ಕೃತಿಕ ಟ್ರಸ್ಟ್​ನ ಕಾರ್ಯವನ್ನು ಅಸ್ಸಾಂ ಸರ್ಕಾರ ಬೆಂಬಲಿಸಿರುವುದು ಸಂತೋಷದ ವಿಷಯ.

ಭೂಪೇನ್ ಹಜಾರಿಕಾ ಅವರನ್ನು ಪಡೆದ ಭಾರತವು ಧನ್ಯ. ಅವರ ಶತಮಾನೋತ್ಸವ ವರ್ಷವನ್ನು ಪ್ರಾರಂಭಿಸುತ್ತಿರುವ ಈ ಸಂದರ್ಭದಲ್ಲಿ, ಅವರ ಸಂದೇಶವನ್ನು ವ್ಯಾಪಕವಾಗಿ ಹರಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ. ಭಾರತದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಧೋಲಾ ಮತ್ತು ಸಾದಿಯಾವನ್ನು ಸಂರ್ಪಸುವ ಸೇತುವೆಗೆ ಭೂಪೇನ್ ಹಜಾರಿಕಾ ಅವರ ಹೆಸರಿಟ್ಟಿರುವುದು ಸೂಕ್ತವಾಗಿದೆ. ಅವರ ಹಾಡುಗಳು ವಿವಿಧ ಪ್ರದೇಶಗಳ ಹೃದಯಗಳನ್ನು ಬೆಸೆದಂತೆಯೇ, ಈ ಸೇತುವೆಯು ಪ್ರದೇಶ ಮತ್ತು ಜನರನ್ನು ಸಂರ್ಪಸುತ್ತದೆ.