ಬೆಂಗಳೂರು: ಡಿ. ದೇವರಾಜ ಅರಸು ಶ್ರಮದಿಂದ ಇಂದು ತಳಸಮುದಾಯಗಳ ಶೋಷಿತರು ಚೈತನ್ಯ ಪಡೆಯಲು ಸಾಧ್ಯವಾಯಿತು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ್ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಹಮ್ಮಿಕೊಂಡಿದ್ದ
ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು 108ನೇ ಜಯಂತಿ ಉದ್ಘಾಟಿಸಿ ‘ಅರಸ್ ಅವರ ಜೀವನ ಸಾಧನೆ ಹಾಗೂ ಆಡಳಿತ ಸುಧಾರಣೆ’ಗಳನ್ನು ಕುರಿತು ಮಾತನಾಡಿದರು.
ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜದ ತಾರತಮ್ಯಗಳನ್ನು ಅಳಿಸಿ ಹಾಕಲು ಸಾಧ್ಯ. ವಿದ್ಯಾರ್ಥಿಗಳು ಅರಸು ಅವರ ಆಶೋತ್ತರಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುವಂತೆ ಕರೆ ನೀಡಿದರು.
ಕುಲಸಚಿವ ಶೇಕ್ ಲತೀಪ್ ಮಾತನಾಡಿ, ಕರ್ನಾಟಕದ ಪೂರ್ಣಾವಧಿ ಆಳ್ವಿಕೆ ನೀಡಿದ ಮೊದಲ ಮುಖ್ಯಮಂತ್ರಿ. ದೇವರಾಜ ಅರಸು ಶೋಷಿತರ ಬಿಡುಗಡೆಗಾಗಿ ತಂದ ಸುಧಾರಣೆಗಳು ಅಂದಿನ ಕಾಲಕ್ಕೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದವು. 20 ಅಂಶಗಳ ಕಾರ್ಯಗಳನ್ನು ಅನುಷ್ಠಾನಗೊಳಿಸಿದ ನಿಜವಾದ ಸುಧಾರಕ ಎಂದರು.
ಉಳುವವನೇ ಭೂಮಿಯ ಒಡೆಯ ಎನ್ನುವ ಕಾಯ್ದೆಯನ್ನು ಜಾರಿ ಮಾಡಿದ ಪರಿಣಾಮ ಇಂದು ಅನೇಕ ಭೂ ರಹಿತರು ಭೂಮಿಯ ಒಡೆಯರಾಗಲು ಸಾಧ್ಯವಾಯಿತು. ಆಡಳಿತ ರಾಜಕಾರಣ, ಶಿಕ್ಷಣ, ವ್ಯವಸಾಯ ಎಲ್ಲ ರಂಗದಲ್ಲಿ ಅವರು ತಂದ ಸುಧಾರಣೆಗಳು ಅವಿಸ್ಮರಣೀಯ ಎಂದು ಶ್ಲಾಘಿಸಿದರು.
ಹಿಂದುಳಿದ ವರ್ಗಗಳ ಕೋಶದ ವಿಶೇಷಾಧಿಕಾರಿ ಡಾ.ಡಿ.ಕೆ. ಚಿತ್ತಯ ಪೂಜಾರ್ ಮಾತನಾಡಿ, ಬೆಂ.ವಿವಿ ಯಲ್ಲಿ ಅರಸು ಹೆಸರಿನಲ್ಲಿ ಸಂಶೋಧನಾ ಕೇಂದ್ರದ ಸ್ಠಾಪಿಸುವ ಅಗತ್ಯವಿದೆ. ಈ ಮೂಲಕ ರಾಜ್ಯದ ದಮನಿತ ಹಿಂದುಳಿದ ವರ್ಗಗಳ, ತಳ ಸಮುದಾಯದಗಳ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹಾಗೂ ಔದ್ಯೋಗಿಕ ಸ್ಥಿತಿಗತಿಗಳನ್ನು ಕುರಿತು ಅಧ್ಯಯನ ನಡೆಸಬೇಕಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಡಾ.ಎಸ್. ಶ್ರೀನಿವಾಸ್, ಶಿಕ್ಷಕೇತರರ ಸಂಘದ ಅಧ್ಯಕ್ಷ ಪಿ. ಶಿವಪ್ಪ ಉಪಾಧ್ಯಕ್ಷ ಎಂ.ಎನ್. ಶಿವಣ್ಣ ಸೇರಿ ಹಲವರು ಉಪಸ್ಥಿತರಿದ್ದರು.