ನ್ಯೂಸ್

ಸಾರಿಗೆ ಇಲಾಖೆಯನ್ನೇ ಸಮಾಧಿ ಹಂತಕ್ಕೆ ತಲುಪಿಸಿದ ಸರ್ಕಾರ: ಪಿ.ರಾಜೀವ್ ಆಕ್ರೋಶ | Bus fare hike proposal

ಬೆಂಗಳೂರು: ಸಾರಿಗೆ ಇಲಾಖೆಯನ್ನು ಸಮಾಧಿ ಮಾಡುವ ಮಟ್ಟಕ್ಕೆ ಕಾಂಗ್ರೆಸ್ ಸರ್ಕಾರ ತಂದು ನಿಲ್ಲಿಸಿದೆ. ಆರ್ಥಿಕವಾಗಿ ಇಲಾಖೆ ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆ ನೌಕರರು ನಾಳೆಯಿಂದ ಪ್ರತಿಭಟನೆ ನಡೆಸಲು ಕರೆ ನೀಡಿದ್ದಾರೆ. ಸಾರಿಗೆ ಇಲಾಖೆ ನೌಕರರ ಜೊತೆಗೆ ಬಿಜೆಪಿ ನಿಲ್ಲಲಿದೆ.

ಸಾರಿಗೆ ಇಲಾಖೆ ಸಚಿವರಿಗೆ ತನ್ನ ಇಲಾಖೆಯ ಆರ್ಥಿಕ ಸ್ಥಿತಿಗತಿಯೇನೆಂದು ಅರ್ಥವಾಗಿಲ್ಲದೇ ಇರುವುದು. ಬಹು ದೊಡ್ಡ ಆರ್ಥಿಕ ಹೊರೆಯಿಂದ ಇಲಾಖೆ ತತ್ತರಿಸಿದ್ದರೆ ಸಚಿವ ರಾಮಲಿಂಗಾರೆಡ್ಡಿಯವರು ಇಲಾಖೆ ಲಾಭದಲ್ಲಿದೆ ಎನ್ನುತ್ತಾರೆ ಎಂದು ಟೀಕಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಉಪೇಂದ್ರ ತ್ರಿಪಾಠಿ ಅವರು ಬಿಎಂಟಿಸಿಯ ಎಂ.ಡಿ. ಆಗಿದ್ದಾಗ ಆ ಸಂಸ್ಥೆಯನ್ನು ನಷ್ಟದಿಂದ ಲಾಭಕ್ಕೆ ತಂದರು. ಇಲಾಖೆಗೆ ಬಹಳಷ್ಟು ಆಸ್ತಿಯನ್ನೂ ಮಾಡಿದ್ದರು. 700 ಕೋಟಿ ಮೊತ್ತವನ್ನು ಠೇವಣಿ ಇಟ್ಟಿದ್ದರು ಎಂದರು.

ಪ್ರಾಮಾಣಿಕ ಅಧಿಕಾರಿಗಳು ಶೇಖರಿಸಿಟ್ಟ ಆಸ್ತಿಯನ್ನು ಮಾರಾಟ ಮಾಡಲು ಈ ಸರ್ಕಾರ ಹೊರಟಿದೆ. ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದೇ ಇರುವುದೇ ಇದಕ್ಕೆ ಕಾರಣ ಎಂದು ಪಿ.ರಾಜೀವ್ ವಿಶ್ಲೇಷಿಸಿದರು.

ಸಿಎಂ ಸಿದ್ದರಾಮಯ್ಯ ಜಾತ್ರೆ

ಭಾರಿ ಸಾಧನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯನವರು ಜಾತ್ರೆ ಮಾಡುತ್ತಲೇ ಇದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಅಂದರೆ ಇಂದಿನವರೆಗೆ ಸಾರಿಗೆ ಇಲಾಖೆಗೆ ಈ ಸರ್ಕಾರವು 7,401 ಕೋಟಿ ಕೊಡಬೇಕಿದೆ. ಭವಿಷ್ಯನಿಧಿ ನ್ಯಾಸ ಮಂಡಳಿಗೆ 2,500 ಕೋಟಿ ರೂ.ಗಳಿದೆ.

ನಿವೃತ್ತ ನೌಕರರ ಬಾಕಿ 362 ಕೋಟಿ, ಸಿಬ್ಬಂದಿಗಳ ಬಾಕಿ ಪಾವತಿ, ಸರಬರಾಜುದಾರರ ಬಿಲ್ ಪಾವತಿ, ಇಂಧನ ಬಾಕಿ ಸೇರಿ 1,000 ಕೋಟಿ, ಎಂವಿಸಿ ಕ್ಲೈಮ್‍ಗಳು, ಇತರ ಬಿಲ್‍ಗಳು, ನಿವೃತ್ತ ನೌಕರರ ಪರಿಷ್ಕøತ ಉಪ ಧನ, ರಜೆ ನಗದೀಕರಣ- 700 ಕೋಟಿ, ಒಟ್ಟು ಸಾಲದ ಬಾಕಿ ಹೊಣೆಗಾರಿಕೆ ಸೇರಿದಾಗ 5,614 ಕೋಟಿ ಆಗುತ್ತದೆ ಎಂದು ಪಿ. ರಾಜೀವ್ ಅವರು ವಿವರ ನೀಡಿದರು. ಬಾಕಿ ಮೊತ್ತಕ್ಕೆ ಸರಕಾರವು ಶೇ 10.5 ಬಡ್ಡಿ ಕಟ್ಟಬೇಕಿದೆ ಎಂದರು.

ಶಕ್ತಿ ಯೋಜನೆ ಅಡಿಯಲ್ಲಿ 2023-24ನೇ ಸಾಲಿನ ಬಾಕಿ 1180 ಕೋಟಿಯಷ್ಟಿದೆ. 2024-25ರಲ್ಲಿ ಬಾಕಿ ಉಳಿಸಿಕೊಂಡದ್ದು 607 ಕೋಟಿ- ಅಂದರೆ, 1787 ಕೋಟಿ ಬಾಕಿ ಇದೆ. ಆದರೆ, ಸಿದ್ದರಾಮಯ್ಯನವರು ಜಾತ್ರೆ ಮಾಡುತ್ತಲೇ ಇದ್ದಾರೆ. ಆ ಯೋಜನೆ ತಂದ್ಬಿಟ್ಟಿದ್ದೇವೆ; ಈ ಯೋಜನೆ ತಂದಿದ್ದೇವೆ ಎನ್ನುತ್ತಾರೆ. ಯಾವ ಪುರುಷಾರ್ಥ ಇದೆ ಇದರಲ್ಲಿ ಎಂದು ಪ್ರಶ್ನಿಸಿದರು.

ದರ ಹೆಚ್ಚಳ ಪ್ರಸ್ತಾಪ

ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೇತೃತ್ವದ ಸಭೆಯಲ್ಲಿ ಸಾರಿಗೆ ಇಲಾಖೆಯ ವಿಚಾರ ಚರ್ಚೆಯಾಗಿದೆ. 3650 ಕೋಟಿ ಹೊರೆಯಾಗುತ್ತಿದೆ ಎಂದು ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಸಭಾ ನಡಾವಳಿಗಳನ್ನು ಮುಂದಿಟ್ಟರು. ಶೇ 15ರಷ್ಟು ಪ್ರಯಾಣದರ ಹೆಚ್ಚಳಕ್ಕೆ ಸಭೆಯು ನಿರ್ಣಯಿಸಿ, ಅದರಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು. ಪ್ರಯಾಣದರ ಪರಿಷ್ಕರಣೆ ನಂತರವೂ ನಿಗಮವು 1800 ಕೋಟಿ ನಷ್ಟ ಅನುಭವಿಸುತ್ತದೆ ಎಂದು ಸಭೆಯು ಗಮನಿಸಿತ್ತೆಂದು ತಿಳಿಸಿದರು.

ನಿಗಮದಲ್ಲಿ 200 ಎಕರೆ ಭೂಮಿ ಲಭ್ಯವಿದ್ದು, ಆದಾಯ ಕ್ರೋಡೀಕರಣಕ್ಕೆ ಬಳಸಲು ಮುಖ್ಯ ಕಾರ್ಯದರ್ಶಿ ಸಲಹೆ ನೀಡಿದ್ದಾರೆ. ಸರ್ಕಾರದ ಮುಂದೆ ಬೇಡಿಕೆ ಇಡಬೇಡಿ ಎಂಬುದು ಇದರ ಅರ್ಥ ಎಂದು ಪಿ.ರಾಜೀವ್ ವಿವರಿಸಿದರು.

ಒಂದು ಲಕ್ಷದ 5 ಸಾವಿರ ಕೋಟಿ ಸಾಲ ಮಾಡಿ, ಅದರಲ್ಲಿ ಉತ್ಪಾದನೆ ಇಲ್ಲದ್ದಕ್ಕೆ ಸುರಿದು, ನಿಗಮಗಳಿಗೆ ಹಣ ಕೊಡಲಾಗದೆ ದಿನಗಳನ್ನು ದೂಡುತ್ತಿದೆ. ಬೊಮ್ಮಾಯಿ ನೇತೃತ್ವ ಬಿಜೆಪಿ ಸರ್ಕಾರ ಸಾರಿಗೆ ನಿಗಮಗಳಿಗೆ ಸಕಾಲದಲ್ಲಿ ಭವಿಷ್ಯನಿಧಿಗೆ 1200 ಕೋಟಿ ರೂ, ಇಂಧನ ವೆಚ್ಚಕ್ಕೆ 800 ಕೋಟಿ ರೂ ಕೊಡಲಾಗಿತ್ತು ಎಂದು ಸಮಜಾಯಿಷಿ ನೀಡಿದರು.

ಸಾವಿನ ಭಾಗ್ಯ

ಗುತ್ತಿಗೆದಾರ ಸಚಿನ್ ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆ ಕುಟುಂಬದ ಜತೆ ಬಿಜೆಪಿ ನಿಲ್ಲಲಿದೆ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ; ಈ ಸರ್ಕಾರ ಸಾವಿನ ಭಾಗ್ಯವನ್ನು ಕೊಟ್ಟಿದೆ ಎಂದು ಟೀಕಿಸಿದರು.

ಈ ಪ್ರಕರಣ ಸಂಬಂಧ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ. ನಾಳೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ದೆಹಲಿಯಿಂದ ಹಿಂತಿರುಗಿದ ಬಳಿಕ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ ಎಂದು ಪಿ.ರಾಜೀವ್ ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್, ರಾಜ್ಯ ವಕ್ತಾರ ಕೆ.ಎಂ.ಅಶೋಕ್ ಗೌಡ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಇದ್ದರು.