ಬೆಟ್ಟದಪುರ: ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪ್ರಮುಖವಾಗಿ ರಾಜ್ಯ ಸರ್ಕಾರವು ಹೆಚ್ಚಿನ ಒತ್ತು ನೀಡಿ ಮೂಲ ಸೌಕರ್ಯ ಒದಗಿಸಿಕೊಟ್ಟರೆ ಶಾಲೆಗಳು ಮುಚ್ಚುವುದಿಲ್ಲ ಎಂದು ಒಕ್ಕಲಿಗ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಹೇಳಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ನಂಜೇಗೌಡ ನಂಜುಂಡ ಅವರು ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿ ಬಳಿಕ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬುದು ಸುಳ್ಳು. ಇತ್ತಿಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಸರ್ಕಾರಿ ಶಾಲೆಗಳೂ ಫಲಿತಾಂಶ ದಾಖಲಿಸುತ್ತಿವೆ. ಅದರೆ ಪಾಲಕರಲ್ಲಿ ಖಾಸಗಿ ಶಾಲೆಗಳ ಮೇಲೆ ವ್ಯಾಮೋಹಕ್ಕೆ ಅರ್ಥವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದಾರೆ. ಇಂದಿನ ದಿನದಲ್ಲಿ ಶಿಕ್ಷಣವೇ ನಿಜವಾದ ಸಂಪತ್ತು. ಹಾಗಾಗಿ ಮಕ್ಕಳಿಗೆ ತಪ್ಪದೆ ಶಿಕ್ಷಣಕೊಡಿಸಿ, ಉತ್ತಮ ನಾಗರಿಕರಾಗಿ ಮಾಡಬೇಕು. ನಮ್ಮ ಚಪ್ಪರದಹಳ್ಳಿ ಗ್ರಾಮ ತನ್ನದೇ ಆದ ವಿಶೇಷ ಮಹತ್ವ ಹೊಂದಿದ್ದು, ಪ್ರಾಚೀನ ಕಾಲದ ಇತಿಹಾಸ ಇರುವಂತಹ ಗ್ರಾಮವಾಗಿದೆ. ಈ ನೆಲದಲ್ಲಿ ಹುಟ್ಟಿದಂತಹ ಅನೇಕರು ವಿಶೇಷ ಸಾಧನೆಗಳನ್ನು ಮಾಡುವ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ ಎಂದರು.
ಉಪನ್ಯಾಸಕ ದರ್ಶನ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಸಿಗುವಂತ ಗುಣಮಟ್ಟದ ಶಿಕ್ಷಣ ಎಲ್ಲಿಯೂ ಸಿಗಲ್ಲ. ನುರಿತ ಶಿಕ್ಷಕರನ್ನು ಸರ್ಕಾರಿ ಶಾಲೆಯಲ್ಲಿ ಕಾಣಬಹುದು. ಇಲ್ಲಿನ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಯಶಸ್ವಿಯಾಗಿ ಬಂದಿದ್ದಾರೆ. ಅಂತವರ ಮಾರ್ಗದರ್ಶನಲ್ಲಿ ಕಲಿಯುವ ಅವಕಾಶ ಸಿಗುವುದು ಪುಣ್ಯವಾಗಿದೆ. ಮಕ್ಕಳು ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನಂಜೇಗೌಡ ಹಾಗೂ ಉಪನ್ಯಾಸಕ ದರ್ಶನ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎ ನಂದೀಶ್, ಉಪಾಧ್ಯಕ್ಷೆ ಅನಿತಾ ರಮೇಶ್, ಉಪನ್ಯಾಸಕ ದರ್ಶನ್, ಮುಖ್ಯಶಿಕ್ಷಕ ಶಿವಾನಂದ್, ಶಿಕ್ಷಕರಾದ ಎಸ್.ಮಹೇಶ್, ಗಾಲಿಬ್ ಸಾಬ್ ಬಾಗಲಕೋಟೆ, ಚಂದನಾ, ಮೈನಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಸೇರಿದಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.