ನ್ಯೂಸ್

ಮುಡಾ ಹಗರಣ ಮುಚ್ಚಿ ಹಾಕಲು ಸರ್ಕಾರ ಹುನ್ನಾರ

ಬೆಂಗಳೂರು: ಮೈಸೂರಿನ ಮುಡಾ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಡೀ ಹಗರಣದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು, ಬೆಳವಣಿಗೆಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂದರೆ ತಪ್ಪಲ್ಲ. ಆದರೆ, ಈ ಹಗರಣವನ್ನು ಮುಚ್ಚಿಹಾಕಲು ಸರ್ಕಾರವೇ ಹೊರಟಿದೆ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಇದೆ ಎಂದು ದೂರಿದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹಗರಣವೇ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ, ಮೈಸೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಂತೆಗಟ್ಟಲೇ ಕಡತ್ನ, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಸಚಿವ ಭೈರತಿ ಸುರೇಶ್ ಅವರೇ ತಾನೇ ಎಂದು ಪ್ರಶ್ನಿಸಿದರು.

ಈ ರೀತಿ ನಡೆದೇ ಇಲ್ಲ ಎನ್ನುವುದಾದರೆ ಅಧಿಕಾರಿಗಳನ್ನು ಕಳಿಸಿ ಯಾಕೆ ತನಿಖೆ ಮಾಡುತ್ತಿದ್ದಾರೆ? ದಿಢೀರ್ ವರ್ಗಾವಣೆಗಳು ಯಾಕೆ ಆಗುತ್ತಿವೆ? ವರ್ಗಾವಣೆಗೆ ಗುರಿಯಾದ ಅಧಿಕಾರಿ ಈ ಹಗರಣದ ಬಗ್ಗೆ ಸರ್ಕಾರಕ್ಕೆ ಎಷ್ಟು ಸಲ ದೂರು ನೀಡಿದ್ದರು? ಎಷ್ಟು ಕಡತ, ದಾಖಲೆಗಳನ್ನು ಕಳಿಸಿದ್ದರು ಎಂಬ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆ ಎಂದು ಹೇಳಿದರು.

ಮೈಸೂರಿನಿಂದ ತಂದ ಹೆಲಿಕಾಪ್ಟರ್‌ನಲ್ಲಿ ತಂದ ದಾಖಲೆಗಳನ್ನು ಭೈರತಿ ಸುರೇಶ್ ಎಲ್ಲೆಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಮಾಹಿತಿ ಜನರಿಗೆ ಗೊತ್ತಾಗಬೇಕು ಎಂದು ಆಗ್ರಹಿಸಿದರು.

ಹಿಂದೆ ಅರ್ಕಾವತಿ ರೀಡೂ ಹಗರಣ ನಡೆಯಿತಲ್ಲಾ? ಅದು ಎಲ್ಲಿಗೆ ಮುಟ್ಟಿತು? ಅದಕ್ಕೊಂದು ಆಯೋಗ ಮಾಡಿಕೊಂಡು ಹಗರಣ ಮುಚ್ಚಿ ಹಾಕಿದರಲ್ಲವೇ? ಮುಡಾದಲ್ಲಿ ಹದಿನಾಲ್ಕು ನಿವೇಶನಗಳನ್ನು ಅಧಿಕಾರಿಗಳು ಇವರಿಗೆ ರೆಡ್ ಕಾರ್ಪೆಟ್ ಹಾಕಿ ಕೊಟ್ಟಿದ್ದಾರೆ ಪಾಪ. ಇವರ ಭೂಮಿಗೆ ಬದಲಾಗಿ ಇವರಿಗೆ ನಿವೇಶನಗಳನ್ನು ಹಂಚಿದ್ದಾರಂತೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿಗಳು ಇವರ ಜಮೀನಿಗೆ 62 ಕೋಟಿ ರೂ.ಬೆಲೆ ಕಟ್ಟಿಕೊಂಡಿದ್ದಾರೆ. ಅದರ ಬಗ್ಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಅವರ ಸಂಪುಟದ ಸದಸ್ಯರೇ ಮಾತನಾಡಲು ರೆಡಿ ಇದ್ದಾರೆ ಎಂದು ಟಾಂಗ್ ಕೊಟ್ಟರು.

ಹುಚ್ಚು ಯಾರಿಗಿದೆ ಎಂದು ಗೊತ್ತಾಗುತ್ತದೆ

ಒಬ್ಬರು ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ, ಚಿಕಿತ್ಸೆ ಕೊಡಿಸಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ. ನಾನು ನೋಡಿದರೆ ಹಾಗೆ ಕಾಣುತ್ತೇನೆಯೇ? ಜನರು ನನ್ನನ್ನು, ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಲಿ. ಹುಚ್ಚು ಯಾರಿಗೆ ಇದೆ ಎಂಬುದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.