ನ್ಯೂಸ್

ನಮ್ಮ ನಾಡು, ನಮ್ಮ ಹೆಮ್ಮೆ: ಇತಿಹಾಸದ ಸುವರ್ಣ ಯುಗ ವಿಜಯನಗರ ಸಾಮ್ರಾಜ್ಯ

| ವೈ.ಎಂ. ಬಸವರಾಜ ಕಮಲಾಪುರ

ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಸಂಸ್ಕೃತಿಯನ್ನು ರಕ್ಷಿಸಿದ್ದಲ್ಲದೆ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸುವರ್ಣ ಯುಗವನ್ನೇ ಸೃಷ್ಟಿಸಿತು. ಹಂಪಿಯ ಕಾವ್ಯಧಾರೆ, ಕಲೆ ಮತ್ತು ವಾಸ್ತುಶಿಲ್ಪವು ಕನ್ನಡದ ಪ್ರಭಾವವನ್ನು ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಸಿದೆ. ಈ ಸಾಮ್ರಾಜ್ಯವು ಕನ್ನಡಿಗರ ಹೆಮ್ಮೆಯ ಸಂಕೇತವಾಗಿ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದೆ.

ಹಕ್ಕ-ಬುಕ್ಕರಿಂದ ಸ್ಥಾಪಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯವು (ಕ್ರಿ.ಶ. 1336-1646) ಕೇವಲ ಒಂದು ರಾಜಮನೆತನವಾಗಿರದೆ, ಕರ್ನಾಟಕದ ಭವ್ಯ ಇತಿಹಾಸದ ಸುವರ್ಣ ಯುಗವೆಂದೇ ಪರಿಗಣಿಸಲ್ಪಟ್ಟಿದೆ. ಈ ಸಾಮ್ರಾಜ್ಯವು ಕರ್ನಾಟಕದ ನೆಲದಲ್ಲಿ ಹುಟ್ಟಿ, ಇಲ್ಲಿನ ಸಂಸ್ಕೃತಿ, ಕಲೆ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿದೆ. ತುಂಗಭದ್ರಾ ನದಿಯ ದಡದಲ್ಲಿರುವ ಹಂಪಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಸ್ಥಾಪಿತವಾದ ಈ ಸಾಮ್ರಾಜ್ಯವು ದಕ್ಷಿಣ ಭಾರತದ ಸಂಸ್ಕೃತಿ ಮತ್ತು ಹಿಂದು ಧರ್ಮವನ್ನು ರಕ್ಷಿಸುವ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತ್ತು. ಕರುನಾಡಿನೊಂದಿಗೆ ವಿಜಯನಗರ ಸಾಮ್ರಾಜ್ಯದ ಸಂಬಂಧ ಕೇವಲ ಐತಿಹಾಸಿಕ ದಾಖಲೆಯಾಗಿ ಉಳಿಯದೆ, ಕನ್ನಡ ನಾಡಿನ ಆತ್ಮದ ಭಾಗವೇ ಆಗಿದೆ.

ವಿಜಯನಗರದ ಅರಸರು (ಹರಿಹರ, ಬುಕ್ಕ, ದೇವರಾಯರು, ಕೃಷ್ಣದೇವರಾಯರು ಮುಂತಾದವರು) ವೀರ ಯೋಧರಷ್ಟೇ ಆಗಿರದೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಮಹಾನ್ ಪೋಷಕರಾಗಿದ್ದರು. ಅವರ ಆಶ್ರಯದಲ್ಲಿ ಕನ್ನಡ ಭಾಷೆ ರಾಜಕೀಯ ಆಡಳಿತ ಭಾಷೆಯಾಗಿಯೂ, ಸಾಹಿತ್ಯ ಮತ್ತು ಕಾವ್ಯ ಭಾಷೆಯಾಗಿಯೂ ಬೆಳೆಯಿತು. ಕನ್ನಡ ಪ್ರದೇಶಗಳಲ್ಲಿ ಆಡಳಿತ ಮತ್ತು ಕಾನೂನಿನ ಭಾಷೆಯಾಗಿ ಕನ್ನಡವನ್ನು ಬಳಸಲಾಗುತ್ತಿತ್ತು. ಹಂಪಿಯ ಸುತ್ತಮುತ್ತ ದೊರಕಿರುವ ಅನೇಕ ಕನ್ನಡ ಶಾಸನಗಳು ಮತ್ತು ದಾಖಲೆಗಳಲ್ಲಿ ಕನ್ನಡ ಲಿಪಿ ಮತ್ತು ಶುದ್ಧ ಕನ್ನಡದ ಬಳಕೆಯು ವ್ಯಾಪಕವಾಗಿ ಕಂಡುಬರುತ್ತದೆ. ಇದು ರಾಜಕೀಯ ವ್ಯವಸ್ಥೆಯಲ್ಲಿಯೇ ಕನ್ನಡದ ಗೌರವ ಮತ್ತು ಅಧಿಕೃತತೆಯನ್ನು ಹೆಚ್ಚಿಸಿತು. ಕೃಷ್ಣದೇವರಾಯನ ಆಸ್ಥಾನವು ಅಷ್ಟದಿಗ್ಗಜ ಕವಿಗಳಿಂದ ಅಲಂಕೃತವಾಗಿತ್ತು. ಕನ್ನಡ, ತೆಲುಗು, ಸಂಸ್ಕೃತ ಭಾಷೆಗಳಿಗೆ ಸಮಾನ ಆದ್ಯತೆ ನೀಡಲಾಗಿತ್ತು. ಹಾಗಾಗಿಯೇ ಆ ಕಾಲವನ್ನು ಕನ್ನಡ ಸಾಹಿತ್ಯದ ಸುವರ್ಣಯುಗ ಎಂದೇ ಭಾವಿಸಲಾಗಿದೆ.

ಕರ್ನಾಟಕ ವೈವಿಧ್ಯಮಯ ಸಂಸ್ಕೃತಿಯ ಬೀಡು. ಅಸಂಖ್ಯ ಅಚ್ಚರಿಗಳ ನಾಡು. ವೈಶಿಷ್ಟ್ಯಗಳ ನೆಲೆವೀಡು. ಇಲ್ಲಿರುವಷ್ಟು ನಿಸರ್ಗರಮ್ಯ ತಾಣಗಳು ಬೇರೆಲ್ಲೂ ಕಾಣಸಿಗವು. ಕನ್ನಡಿಗರಲ್ಲಿ ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸುವಂಥ ವಸ್ತುವಿಷಯಗಳ ವೈವಿಧ್ಯಕ್ಕಂತೂ ಕೊರತೆಯೇ ಇಲ್ಲ. ಅವುಗಳಲ್ಲಿ ಆಯ್ದ ಕೆಲವು ಸಂಗತಿಗಳನ್ನು ರಾಜ್ಯೋತ್ಸವದ ನವೆಂಬರ್ ತಿಂಗಳುದ್ದಕ್ಕೂ 30 ದಿನಗಳ ಕಾಲ ‘ನಮ್ಮ ನಾಡು ನಮ್ಮ ಹೆಮ್ಮೆ’ ಶೀರ್ಷಿಕೆಯಡಿ ‘ವಿಜಯವಾಣಿ’ ಪ್ರಕಟಿಸುತ್ತಿದೆ. ಕರುನಾಡಿನ ಹಿರಿಮೆಯನ್ನು ಮೆಲುಕು ಹಾಕುತ್ತ ರಾಜ್ಯೋತ್ಸವದ ಸಡಗರದಲ್ಲಿ ಪಾಲ್ಗೊಳ್ಳೋಣ.

ಕಲೆ, ಸಂಸ್ಕೃತಿಯ ಕೇಂದ್ರ

ವಿಜಯನಗರದ ರಾಜಧಾನಿಯಾದ ಹಂಪಿಯು ಕೇವಲ ರಾಜಕೀಯ ಅಧಿಕಾರದ ಕೇಂದ್ರವಾಗಿರದೆ, ಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಸಾಹಿತ್ಯದ ನಭೋಮಣಿಯಾಗಿತ್ತು. ವಿಜಯನಗರ ಶೈಲಿಯ ವಾಸ್ತುಶಿಲ್ಪವು ಇಂದಿಗೂ ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ ಮತ್ತು ಕಮಲ ಮಹಲ್ ನಂತಹ ಅದ್ಭುತ ರಚನೆಗಳ ಮೂಲಕ ಜೀವಂತವಾಗಿದೆ. ಈ ಭವ್ಯ ರಚನೆಗಳು ಕನ್ನಡ ಸಂಸ್ಕೃತಿಯ ಘನತೆಯನ್ನು ಪ್ರತಿಬಿಂಬಿಸಿ ಕನ್ನಡಿಗರಲಿ ತಮ್ಮ ಪರಂಪರೆಯ ಬಗ್ಗೆ ಅಪಾರ ಹೆಮ್ಮೆಯ ಭಾವನೆಯನ್ನು ಸ್ಪುರಿಸುತ್ತವೆ. ವಿಜಯನಗರ ಸಾಮ್ರಾಜ್ಯದ ಹಂಪಿಯ ಕವಿಗಳು, ಪಂಡಿತರು ಮತ್ತು ಶಾಸ್ತ್ರಜ್ಞರು ಕನ್ನಡ ಭಾಷೆಯನ್ನು ಕಾವ್ಯಾತ್ಮಕವಾಗಿ ಮತ್ತು ವೈಜ್ಞಾನಿಕವಾಗಿ ಸಮೃದ್ಧಗೊಳಿಸಿದರು. ಕನ್ನಡ ಭಾಷೆಯು ಹಿಂದು ಸಂಸ್ಕೃತಿಯ ವಿಸ್ತಾರದ ಮಾಧ್ಯಮವಾಗಿ ಕೆಲಸ ಮಾಡಿ, ದೇವಸ್ಥಾನಗಳಲ್ಲಿ, ಭಜನೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ಪಡೆಯಿತು.

ಕವಿಗಳು, ರಾಜರ ಕೊಡುಗೆ

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಕನ್ನಡಕ್ಕೆ ಕೊಡುಗೆ ನೀಡಿದ ಪ್ರಮುಖ ರಾಜರು ಮತ್ತು ಕವಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. ಕೃಷ್ಣದೇವರಾಯರು ಕನ್ನಡ, ತೆಲುಗು ಮತ್ತು ಸಂಸ್ಕೃತಕ್ಕೆ ಸಮಾನ ಪೋ›ತ್ಸಾಹ ನೀಡಿದರು. ಅವರ ಆಸ್ಥಾನವು ಅಷ್ಟದಿಗ್ಗಜರಿಂದ ಅಲಂಕೃತವಾಗಿತ್ತು. ಹರಿಹರ, ಬುಕ್ಕರು ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಆಶ್ರಯ ನೀಡಿದರು. ಕುಮಾರವ್ಯಾಸರು (ಕರ್ಣಾಟ ಭಾರತ ಕಥಾಮಂಜರಿ), ಚಾಮರಸರು (ಪ್ರಭುಲಿಂಗಲೀಲೆ), ಲಕ್ಷ್ಮೀಶರು (ಜೈಮಿನಿಭಾರತ), ಪುರಂದರದಾಸರು (ಕೀರ್ತನೆಗಳು, ಸುಳಾದಿಗಳು), ಕನಕದಾಸರು (ಮೋಹನ ತರಂಗಿಣಿ, ನಳ ಚರಿತ್ರೆ), ಶ್ರೀಪಾದರಾಯ ಮತ್ತು ವಾದಿರಾಜರು (ದಾಸಸಾಹಿತ್ಯ) ಅದ್ಭುತ ಎನಿಸುವ ಕೃತಿಗಳನ್ನು ನಾಡಿಗೆ ನೀಡಿದ್ದಾರೆ.

ಅಸ್ಮಿತೆಯ ಪ್ರತೀಕ ಹಂಪಿ

ತಾಳಿಕೋಟೆ ಕದನದ ನಂತರ (1565) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯು ದಾಳಿಕೋರರ ಲೂಟಿಗೆ ಒಳಗಾಗಿ ಹಾಳಾಯಿತು. ವಿಜಯನಗರ ಸಾಮ್ರಾಜ್ಯದ ಅವನತಿಯು ಕನ್ನಡಿಗರ ಪಾಲಿಗೆ ಒಂದು ಭಾವನಾತ್ಮಕ ದುರಂತವಾಗಿತ್ತು. ಇಂದಿಗೂ ಹಂಪಿಯ ಅವಶೇಷಗಳು ಹಿಂದಿನ ವೈಭವ ಮತ್ತು ನಂತರದ ದುರಂತ ಎರಡನ್ನೂ ಕಣ್ಣಮುಂದೆ ನಿಲ್ಲಿಸುತ್ತವೆ. ಹಂಪಿಯು ಕನ್ನಡಿಗರ ಪಾಲಿಗೆ ಕೇವಲ ಪ್ರವಾಸಿ ತಾಣವಲ್ಲ, ಬದಲಿಗೆ ಇದು ತಮ್ಮ ಮೂಲ ಮತ್ತು ಅಸ್ಮಿತೆಯ ಪ್ರತೀಕ. ಈ ಸಾಮ್ರಾಜ್ಯದ ಪರಂಪರೆ ಮತ್ತು ನೆನಪುಗಳು ಕರ್ನಾಟಕದ ಜನರೊಂದಿಗೆ ಆಳವಾದ ನಂಟನ್ನು ಹೊಂದಿವೆ. ವಿಜಯನಗರದ ಆಳರಸರು ನೀಡಿದ ಉತ್ತಮ ಆಡಳಿತ, ತೋರಿದ ಧೈರ್ಯ, ಕಲೆಗೆ ನೀಡಿದ ಪ್ರೋತ್ಸಾಹ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಆಳವಾಗಿ ಬೇರೂರಿವೆ. ಇಂದಿಗೂ ಸ್ಪೂರ್ತಿಯ ಸೆಲೆಯಾಗಿವೆ. ಕನ್ನಡ ನಾಡಿನ ಕವಿಗಳು, ಸಾಹಿತಿಗಳು ಮತ್ತು ಕಲಾವಿದರು ವಿಜಯನಗರದ ವೈಭವವನ್ನು ನಿರಂತರವಾಗಿ ತಮ್ಮ ಕೃತಿಗಳಲ್ಲಿ ಸ್ಮರಿಸಿದ್ದಾರೆ.