ಶ್ರೀರಂಗಪಟ್ಟಣದ ಗಂಜಾಂನ ಚಂದಗಾಲು ರಸ್ತೆ ಬಳಿ ಇರುವ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ್ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂಭ್ರಮದಿಂದ ಆಚರಿಸಿದರು. ಭಾನುಪ್ರಿಯಾ, ಆರ್.ರಾಘವೇಂದ್ರ, ಸ್ಪಂದನಾ ಇತರರಿದ್ದರು. 
ನ್ಯೂಸ್

ಸರ್ವರಿಗೂ ಸಮಾನತೆ, ಸಹಬಾಳ್ವೆ ಕಲ್ಪಿಸಿದ ಕೀರ್ತಿ

ಶ್ರೀರಂಗಪಟ್ಟಣ: ನಾಡಪ್ರಭು ಕೆಂಪೇಗೌಡರು ಸರ್ವರಿಗೂ ಸಮಾನತೆ ಹಾಗೂ ಸಹಬಾಳ್ವೆಯೊಂದಿಗೆ ಸಂತಸದಿಂದ ಬದುಕುವ ಅವಕಾಶ ಕಲ್ಪಿಸಿದ ಕಾರಣದಿಂದಲೇ ಅವರು ಸಾಮಾಜಿಕ ಹರಿಕಾರ ಎಂದು ವಿಶ್ವವಿಖ್ಯಾತಗೊಂಡರು ಎಂದು ರಿವರ್ ವ್ಯಾಲಿ ಸಂಸ್ಥೆಯ ಅಧ್ಯಕ್ಷ ಆರ್.ಆದರ್ಶ್ ತಿಳಿಸಿದರು.

ಪಟ್ಟಣದ ಗಂಜಾಂನ ಚಂದಗಾಲು ರಸ್ತೆ ಬಳಿ ಇರುವ ರಿವರ್‌ವ್ಯಾಲಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವವನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯೊಂದಿಗೆ ಶ್ರೀ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಮಾನತೆ ಹಾಗೂ ಸಾಮಾಜಿಕ ಕಾಳಜಿ ಎಂಬುದು ಸಂದೇಶವಾಗಿ ಸಾರುವುದಲ್ಲ, ಬದಲಿಗೆ ನಿದರ್ಶನವಾಗುವಂತೆ ಸಾಧಿಸಿ ತೋರಿಸುವುದು ಎಂಬುದಕ್ಕೆ ನಮ್ಮ ನಾಡಿಗೆ ದೊರೆ ಕೆಂಪೇಗೌಡರ ದೂರದೃಷ್ಟಿ ಫಲವಾಗಿ ಲಭಿಸಿದ ಹಲವು ಕೊಡುಗೆಗಳಿಂದ ನಾವು ಅವರನ್ನು ಸರ್ವಕಾಲಕ್ಕೂ ಸ್ಮರಿಸುವಂತಾಗಿದೆ. ಬೆಂಗಳೂರಿನ ರಕ್ಷಣೆಗೆ ಸುತ್ತಲೂ ಕೋಟೆ, ಅಭಿವೃದ್ಧಿ, ಸಮೃದ್ಧಿಗಾಗಿ ವಿಧವಿಧ ವಾಣಿಜ್ಯ ವರ್ತಕರಿಗೆ ವಿವಿಧ ಪೇಟೆ, ಕಲೆ-ಸಂಸ್ಕೃತಿ, ಕೃಷಿ ಮತ್ತು ನೀರಾವರಿಗಾಗಿ ಕೆರೆ-ಕಟ್ಟೆ ನಾಲೆಗಳ ನಿರ್ಮಾಣ ಅವರಲ್ಲಿ ಅಡಗಿದ್ದ ವೈವಿಧ್ಯತೆಯ ಚಿಂತನೆಗಳಿಗೆ ಸಾಕ್ಷಿಯಾಗಿವೆ. ಇಷ್ಟೆಲ್ಲ ನೀಡಿದ ಅವರು ಜಾತ್ಯತೀತ ದೊರೆಯಾಗಿ ಎಲ್ಲ ರಾಜ್ಯಗಳ ಅನ್ಯ ಭಾಷಿಕ ಜನರನ್ನು ಕನ್ನಡ ನಾಡಿನ ಮನಸ್ಸುಗಳೊಂದಿಗೆ ಬೆರೆಯಲು ಹೃದಯಪೂರ್ವಕವಾಗಿ ಸ್ವಾಗತಿಸಿದ ಕಾರಣದಿಂದಲೇ ನಮ್ಮ ಬೃಹತ್ ಬೆಂಗಳೂರು ಇಂದು ಮತ್ತೊಂದು ಪುಟ್ಟ ಭಾರತವಾಗಿ ವಿಶ್ವ ಮಟ್ಟದಲ್ಲಿ ಮುಕಟದಂತೆ ಹೊರಹೊಮ್ಮಲು ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಭಾನುಪ್ರಿಯಾ, ಪ್ರಾಂಶುಪಾಲ ಆರ್.ರಾಘವೇಂದ್ರ, ಮುಖ್ಯಶಿಕ್ಷಕಿ ಸ್ಪಂದನಾ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.