ನ್ಯೂಸ್

ಹಟ ಮಾಡಿ ತಂದೆ ಸ್ಕೂಟರ್ ಏರಿದ ಬಾಲಕಿ ಮತ್ತೆ ವಾಪಸ್ ಬರಲಿಲ್ಲ..!

ಬೆಂಗಳೂರು: ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ನೆಲಕ್ಕುರುಳಿದ ಪರಿಣಾಮ 8 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ನೆಲಗೆದರಹಳ್ಳಿ ನಿವಾಸಿ ನಕ್ಷತ್ರಾ (8) ಮೃತ ಬಾಲಕಿ. ಅವಘಡದಲ್ಲಿ ಮೃತಳ ತಂದೆ ರಮೇಶ್‌ಗೆ ಸಣ್ಣಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಜತೆ ನೆಲೆಗದರಹಳ್ಳಿಯಲ್ಲಿ ನೆಲೆಸಿರುವ ರಮೇಶ್, ಪೀಣ್ಯ ಕೈಗಾರಿಕಾ ವಲಯದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ಬರುವಾಗ ಭಾನುವಾರ ಊಟದ ಬ್ಯಾಗ್ ಅನ್ನು ಕಾರ್ಖಾನೆಯಲ್ಲೇ ಮರೆತು ಬಂದಿದ್ದರು.

ಮನೆ ಸಮೀಪವೇ ಕಾರ್ಖಾನೆ ಇದ್ದ ಕಾರಣ ಬ್ಯಾಗ್ ತರಲು ರಮೇಶ್ ಹೊರಟಾಗ ಬಾಲಕಿ ತಾನು ಬರುವುದಾಗಿ ಹಟ ಮಾಡಿ ಅಪ್ಪನ ಜತೆ ಹೋಗಿದ್ದಳು. ನೆಲಗೆದರನಹಳ್ಳಿಯಿಂದ ಗಂಗೊಂಡನಹಳ್ಳಿ ಕಡೆ ಸಾಗುವ ಇಳಿಜಾರು ರಸ್ತೆನಲ್ಲಿ ಬೈಕ್ ಸವಾರಿ ಮೇಲೆ ರಮೇಶ್ ನಿಯಂತ್ರಣ ಕಳೆದುಕೊಂಡಿದ್ದಾರೆ.

ಸ್ಕಿಡ್ ಆಗಿ ರಸ್ತೆಗುರಳಿದ ಬೈಕ್‌ನಿಂದ ಕೆಳಕ್ಕೆ ಬಿದ್ದು ನಕ್ಷತ್ರಾಳ ತಲೆಗೆ ಗಂಭೀರ ಗಾಯ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.