ಪ್ರವೀಣ್ ಗೋಡ್ಖಿಂಡಿ, ಖ್ಯಾತ ಕೊಳಲು ವಾದಕ
ಸ್ನೇಹಜೀವಿ, ಮಾತೃಹೃದಯಿ ಯಶವಂತ ಸರದೇಶಪಾಂಡೆ ನನಗೆ , ಅತ್ಯಂತ ಆಪ್ತ ಗೆಳೆಯ. ನಮ್ಮಿಬ್ಬರದೂ ಒಂದೇ ಊರಿನ ನಂಟಿನ ಜತೆಗೆ ಕಲೆಯ ನಂಟು ಗಟ್ಟಿಯಾಗಿ ಬೆಸೆದಿತ್ತು. ಅವರ ನನ್ನ ಸ್ನೇಹ 30 ವರ್ಷಗಳಿಗೂ ಹಳೆಯದು. ಅಮೆರಿಕದಲ್ಲಿ 1998ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಅಂದಿನಿಂದ ಇಂದಿನವರೆಗೂ ಜತೆಯಲ್ಲೇ ಸಾಗಿದ್ದೆವು. ಅವರು ಎಲ್ಲೆಲ್ಲಿ ಕಾರ್ಯಕ್ರಮ ನೀಡುತ್ತಾರೋ ಅಲ್ಲೆಲ್ಲ ನಾನೂ ಕಾರ್ಯಕ್ರಮ ನೀಡುತ್ತಿದ್ದೆ. ಹಾಗಾಗಿ ದೇಶ-ವಿದೇಶಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಿಗೆ ಒಟ್ಟಿಗೇ ಹೋಗುತ್ತಿದ್ದೆವು. ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವು ಕೆಲಸ ಮಾಡುತ್ತಿದ್ದರೂ ನಮ್ಮ ಬಾಂಧವ್ಯ ಒಂದೇ ಕುಟುಂಬದ ರೀತಿ ಇತ್ತು. ನನ್ನ ಪತ್ನಿ ಸಾರಿಕಾ ಅವರ ಅನೇಕ ನಾಟಕಗಳಲ್ಲಿ ಕೆಲಸ ಮಾಡಿದ್ದಾರೆ.
ಹಾಸ್ಯವನ್ನು ಅವರು ಕೇವಲ ಅಭಿನಯಕ್ಕೆ ಸೀಮಿತವಾಗಿಸಿಕೊಂಡಿರಲಿಲ್ಲ. ಅದನ್ನು ಜೀವನದಲ್ಲೂ ಅಳವಡಿಸಿಕೊಂಡಿದ್ದರು. ಚಿಕ್ಕ ಚಿಕ್ಕ ವಿಷಯಗಳಲ್ಲಿ ಹಾಸ್ಯ ಹುಡುಕುತ್ತಿದ್ದರು. ಸ್ನೇಹಜೀವಿ ಆಗಿದ್ದರು. ಪ್ರತಿಯೊಂದರಲ್ಲೂ ಅಚ್ಚುಕಟ್ಟುತನವಿತ್ತು. ನಾಟಕ ಹಾಗೂ ರಂಗಭೂಮಿಯ ಬಗ್ಗೆ ಅತೀವ ಪ್ರೀತಿ ಹೊಂದಿದ್ದರು. ಹಾಗಾಗಿ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಬೇರೆ ಭಾಷೆಯ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸುತ್ತಿದ್ದರು. ಯಾವುದೇ ಕನಸು ಕಂಡರೂ ಅದರ ಬೆನ್ನು ಹತ್ತಿ ಈಡೇರುವವರೆಗೂ ಬಿಡುತ್ತಿರಲಿಲ್ಲ. ಅಂತಹ ಛಲವಾದಿ. ಅವರಿಗೆ ಶಾಪಿಂಗ್ ಹುಚ್ಚು ಬಹಳ ಇತ್ತು. ಎಲ್ಲೇ ಹೋದರೂ ಹೊಸದನ್ನು ಹುಡುಕಿ ಖರೀದಿಸುತ್ತಿದ್ದರು. ತಾಸುಗಟ್ಟಲೆ ಶಾಪಿಂಗ್ ಮಾಡುತ್ತಿದ್ದರು. ಅದೇ ರೀತಿ ಅವರಿಗೆ ವಿಶೇಷವಾದ ಗಿಫ್ಟ್ಗಳನ್ನು ಕೊಡುವುದು ತುಂಬ ಇಷ್ಟ. 2008ರಲ್ಲಿ ನನ್ನ ಹೊಸ ಮನೆಗೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ 8 ಅಡಿಯ ಕೊಳಲನ್ನು ಕೊಡುಗೆಯಾಗಿ ನೀಡಿದ್ದರು. ಹೀಗೆ ಅವರೊಂದಿನ ಒಡನಾಟ ಮರೆಯಲಾಗದು.
ಅವರೊಂದಿಗೆ ನಟಿಸಬೇಕು ಎಂಬ ಉತ್ಕಟ ಆಶಯದೊಂದಿಗೆ ನಾನೊಂದು ನಾಟಕ ಬರೆದಿದ್ದೆ. ಅದಕ್ಕೆ ಅವರೇ ‘ಕೊಳಲು.ಕಾಮಿಡಿ’ ಎಂಬ ಶೀರ್ಷಿಕೆ ನೀಡಿದ್ದರು. ಒಟ್ಟಿಗೆ ತಾಲೀಮು ಸಹ ಮಾಡುತ್ತಿದ್ದೆವು. ಇದೇ ಅ. 17-18ರಂದು ನಾಟಕ ಪ್ರದರ್ಶನಕ್ಕೆ ದಿನಾಂಕ ನಿಗದಿಯಾಗಿತ್ತು. ಎನ್.ಆರ್. ಕಾಲನಿಯ ಸಿ. ಅಶ್ವತ್ಥ್ ಕಲಾ ಭವನದಲ್ಲಿ ಪ್ರದರ್ಶನ ನಡೆಯಬೇಕಿತ್ತು. ಅದಕ್ಕಾಗಿ ಅವರು ಭಾನುವಾರವಷ್ಟೇ ಫೇಸ್ಬುಕ್ನಲ್ಲಿ ಬರೆದು ಪಬ್ಲಿಸಿಟಿ ಆರಂಭಿಸಿದ್ದರು. ರಂಗಭೂಮಿ, ಕಿರುತೆರೆ, ಚಲನಚಿತ್ರ ನಟರು, ಕಲಾವಿದರು, ನಿರ್ದೇಶಕರು ಎಲ್ಲರಿಗೂ ಆಹ್ವಾನ ನೀಡಿದ್ದರು. ನಮ್ಮಿಬ್ಬರ ಸಹಯೋಗದಲ್ಲಿ ಮೂಡಿಬರುತ್ತಿರುವ ನಾಟಕದ ಬಗ್ಗೆ ಎಲ್ಲರಲ್ಲೂ ಬಹಳ ಕುತೂಹಲವಿತ್ತು.
ನಾಲ್ಕು ದಿನಗಳ ಹಿಂದೆ ನಮ್ಮ ಮನೆಯಲ್ಲೇ ರಿಹರ್ಸಲ್ ಮುಗಿಸಿ ಧಾರವಾಡಕ್ಕೆ ಹೋಗಿದ್ದರು. ಸೋಮವಾರ ಬೆಳಗ್ಗೆ ನಮ್ಮ ಮನೆಗೆ ಬಂದು ರಿಹರ್ಸಲ್ ಮುಂದುವರಿಸಬೇಕಿತ್ತು. ಇಷ್ಟೊತ್ತಾದರೂ ಬರಲಿಲ್ಲವಲ್ಲ ಎಂದು ಅವರ ಮೊಬೈಲ್ಗೆ ಕರೆ ಮಾಡಿದಾಗ ಸುದ್ದಿ ತಿಳಿಯಿತು. ತೀವ್ರ ದುಃಖ ಆಗುತ್ತಿದೆ. ಈ ನಾಟಕದಲ್ಲಿ ಅವರ ಪಾತ್ರ ನಿರ್ವಹಿಸುವವರು ಯಾರಿದ್ದಾರೆ ಎಂಬುದೇ ತಿಳಿದಿಲ್ಲ. ಸದ್ಯಕ್ಕೆ ನಾಟಕ ನಡೆಯುವುದಿಲ್ಲ. ಆದರೆ ಮುಂದೊಂದು ದಿನ ಈ ನಾಟಕವನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.