ನ್ಯೂಸ್

ತ್ಯಾಗ ಜೀವನದ ಬುನಾದಿ ಮನಃಶಕ್ತಿ

ಗವಾನ್ ಶ್ರೀ ರಾಮಕೃಷ್ಣರು ತ್ಯಾಗದ ವಿಚಾರವನ್ನು ಮಾತನಾಡುವಾಗ, ‘ಮನಃಶಕ್ತಿ’ ಅತ್ಯಂತ ಮುಖ್ಯವಾದುದು ಎಂದು ಸ್ಪಷ್ಟಪಡಿಸುತ್ತಾರೆ. ಸುಮ್ಮನೆ ತ್ಯಾಗ ಮಾಡಿದೆ, ಸರ್ವಸ್ವವನ್ನೂ ತ್ಯಜಿಸಿದೆ ಎಂದು ಹೇಳಿದರೇನು ಫಲ? ಪರಮಹಂಸರೇ ನುಡಿದಂತೆ ‘ತ್ಯಾಗ ಮಾಡಬೇಕಾಗಿದ್ದರೆ ಭಗವಂತನನ್ನು ಮನಃಶಕ್ತಿಗಾಗಿ ಪ್ರಾರ್ಥನೆ ಮಾಡಬೇಕು. ಯಾವುದು ಮಿಥ್ಯೆಯೆಂದು ತೋರುವುದೋ ಅದನ್ನು ಕೂಡಲೇ ತ್ಯಜಿಸಿಬಿಡಬೇಕು. ಹಿಂದಿನ ಋಷಿಗಳಿಗೆ ಈ ವಿಧದ ಮನೋಬಲವಿತ್ತು. ಈ ಮನೋಬಲದಿಂದ ಇಂದ್ರಿಯಗಳನ್ನು ಜಯಿಸಿದ್ದರು. ಆಮೆಯೇನಾದರೂ ಒಮ್ಮೆ ತನ್ನ ಕೈಕಾಲುಗಳನ್ನು ಒಳಕ್ಕೆ ಎಳೆದುಕೊಂಡಿತು ಎಂದರೆ, ನಾಲ್ಕು ಹೋಳಾಗಿ ಕತ್ತರಿಸಿದರೂ ಅದು ಅವನ್ನು ಹೊರಕ್ಕೆ ಬಿಡದು. ಈ ಅಂಶವನ್ನು ನಾವು ಶ್ರೀಮದ್ಭಗವದ್ಗೀತೆಯಲ್ಲಿಯೂ ಕಾಣುತ್ತೇವೆ. ನಿಜವಾದ ಸಾಧಕನು ಈ ತೆರನಾಗಿ ‘ಮನಃಶಕ್ತಿ’ಯನ್ನು ಬೆಳೆಸಿಕೊಳ್ಳಬೇಕು ಎಂದು ಪರಮಹಂಸರು ತಿಳಿಸುತ್ತಾರೆ. ಕೇವಲ, ‘ನಾನು ತ್ಯಾಗ ಮಾಡಿದ್ದೇನೆ, ತ್ಯಾಗ ಮಾಡಿದ್ದೇನೆ’ ಎಂದು ಹೇಳಿದರೇನು ಫಲ? ನಾವು ಈ ಪ್ರಪಂಚದಲ್ಲಿ ನಾನಾ ರೀತಿಯ ‘ತ್ಯಾಗಿ? ಎಂದೆನಿಸಿಕೊಳ್ಳುವವರನ್ನು ಕಾಣುತ್ತೇವೆ. ಆದರೆ ನಿಜವಾದ ‘ತ್ಯಾಗಿ’ ಯಾರು? ಎಂಬುದರ ಬಗ್ಗೆ ಗೊಂದಲವನ್ನು ಕಾಣುತ್ತೇವೆ.

ಈ ಬಹುಮುಖ್ಯ ಅಂಶವನ್ನು ಪರಮಹಂಸರು ಬಹು ಸ್ಪಷ್ಟವಾಗಿ ತಿಳಿಸುತ್ತಾರೆ. ಪ್ರಾಪಂಚಿಕ ಮನುಷ್ಯ ಕಪಟಿಯಾಗುತ್ತಾನೆ, ಸರಳನಾಗುವುದಿಲ್ಲ. ಭಗವಂತನನ್ನು ಪ್ರೀತಿಸುತ್ತೇನೆ ಎಂದು ಬಾಯಲ್ಲಿ ಹೇಳುತ್ತಾನೆ. ಆದರೆ ವಿಷಯಸುಖಗಳ ಕಡೆ ಅಷ್ಟೊಂದು ಪ್ರೀತಿ. ಆ ಪ್ರೀತಿಯ ಅತ್ಯಲ್ಪ ಅಂಶವನ್ನೂ ಆತ ಭಗವಂತನ ಕಡೆಗೆ ತಿರುಗಿಸುವುದಿಲ್ಲ. ಆದರೂ ಭಗವಂತನನ್ನು ಪ್ರೀತಿಸುತ್ತೇನೆ ಎಂದು ಬಾಯಲ್ಲಿ ಮಾತ್ರ ಹೇಳುತ್ತಾನೆ. ಈ ಕಪಟಾಚರಣೆಯನ್ನು ಬಿಡು ಎಂದು (ಮಣಿಮಲ್ಲಿಕನಿಗೆ) ಹೇಳುತ್ತಾರೆ. ನಿಜ! ಈ ಪ್ರಪಂಚದಲ್ಲಿ ನಾವು ಕಾಣುವುದು ಈ ತೆರನಾದ ಕಪಟಿಗಳನ್ನೇ ಹೊರತು ನಿಜಾರ್ಥದಲ್ಲಿ ಭಗವತ್ಪ್ರೇಮ ಹೊಂದಿರುವವರನ್ನು ಕಾಣುವುದು ವಿರಳ. ಶ್ರೀ ರಾಮಕೃಷ್ಣರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಅವರ ಬಳಿ ಸೇರುವ ಭಕ್ತರನ್ನೂ ಅಂತಹ ಸ್ಥಿತಿಯನ್ನು ಪಡೆಯುವಂತೆ ಪ್ರೇರೇಪಿಸುತ್ತಿದ್ದರು. ಈ ಪ್ರಪಂಚದಲ್ಲಿ ಇಂತಹ ಮಹತ್ವದ ವಿಚಾರಕ್ಕೆ ಯಾರೂ ಮನಸ್ಸು ಕೊಡಲಾರರು. ಶುದ್ಧ, ಸತ್ಯ, ಸರಳ, ಜೀವನವನ್ನು ಅಳವಡಿಸಿಕೊಂಡಿರುವ ಸಾಧಕರನ್ನು ಕಾಣುವುದೇ ಅತಿ ವಿರಳ.

ನರೇಂದ್ರಾದಿ ಯುವ ಶಿಷ್ಯರು ದಕ್ಷಿಣೇಶ್ವರದಲ್ಲಿ ರಾತ್ರಿಯ ವೇಳೆ ತಂಗುತ್ತಿದ್ದಾಗ ಬೆಳಗಿನ ಜಾವ ಮೂರುಗಂಟೆಗೆಲ್ಲ ಅವರೆಲ್ಲರನ್ನೂ ಪರಮಹಂಸರೇ ಎಚ್ಚರಿಸಿ, ಧ್ಯಾನ-ಜಪಾದಿ ಸಾಧನೆಗಳಲ್ಲಿ ತೊಡಗಿಸುತ್ತಿದ್ದರು. ಅಂತಹ ಕಠೋರ ಸಾಧನೆಯನ್ನು ತಾವೇ ಸ್ವತಃ ಮಾಡುವುದಲ್ಲದೆ ತಮ್ಮೊಂದಿಗಿರುವ ಸಾಧಕರನ್ನೆಲ್ಲ ಆ ಮಾರ್ಗಕ್ಕೆ ಪ್ರೋತ್ಸಾಹಿಸುತ್ತಿದ್ದರು. ಅವರು ಸಾಧನೆಗೆ ಇಷ್ಟು ಒತ್ತು ನೀಡುತ್ತಿದ್ದರು. ಸಾಧನೆ, ಸಾಧನೆ, ಜಪ, ತಪಸ್ಸು ಇವುಗಳೇ ಪರಮಹಂಸರ ಉಸಿರಾಗಿದ್ದವು. ಶ್ರೀ ರಾಮಕೃಷ್ಣರೇ ತಿಳಿಸುತ್ತಾರೆ, ‘ಯಾವ ಸಾಧನೆ ಮಾಡಿದರೆ ಮನಸ್ಸಿಗೆ ಊರ್ಧ್ವದೃಷ್ಟಿಯುಂಟಾಗುತ್ತದೆಂದು ಸರ್ವದಾ ಸಾಧುಸಂಗ, ಸತ್ಸಂಗ ಮಾಡಿದಾಗ ಅರಿವಾಗುತ್ತದೆ. ಋಷಿಗಳು ಯಾವಾಗಲೂ ನಿರ್ಜನ ಪ್ರದೇಶದಲ್ಲಿ, ಇಲ್ಲದಿದ್ದರೆ ಸಾಧುಗಳ ಸಂಗ, ಸಾಧಕರ ಸಂಗ ಮಾಡುತ್ತಿದ್ದರು. ಆದ್ದರಿಂದ ಅವರು ಅನಾಯಾಸವಾಗಿ ಕಾಮಕಾಂಚನ ತ್ಯಜಿಸಿ ಭಗವಂತನ

ಕಡೆ ಮನಸ್ಸನ್ನು ತಿರುಗಿಸಿಬಿಡುತ್ತಿದ್ದರು. ಅವರಿಗೆ ಭಯ ಎಂಬುದೇ ಇರಲಿಲ್ಲ; ನಿಂದನೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಲೇ ಇರಲಿಲ್ಲ.’ (ಗೃಹಸ್ಥರಿಗೆ, ಸಂನ್ಯಾಸಿಗಳಿಗೆ 6ನೇ ಮಾರ್ಚ್ 1884, ಭಾನುವಾರ).

ಸಾಧಕನ ಜೀವನ ನಿಷ್ಕಪಟವಾದ, ಸತ್ಯವಂತನಾಗಿ, ಸುಹೃದಯವಂತನಾಗಿ ಸದಾ ಭಗವನ್ನಾಮ ಸ್ಮರಣೆಯಲ್ಲಿ ಮಗ್ನನಾಗಿರುವುದೇ ನಿಜವಾದ ಸಾಧನೆ. ಬೇರೆಲ್ಲ ಕೇವಲ ಡಾಂಬಿಕತನದ, ತೋರ್ಪಡಿಕೆಯ ಜೀವನ. ಪರಮಹಂಸರು ಮುಂದುವರಿಸುತ್ತ ತಿಳಿಸುತ್ತಾರೆ, ‘ಆಧ್ಯಾತ್ಮಿಕ ಜೀವನದ ಮೊದಲ ಅವಸ್ಥೆಯಲ್ಲಿ ಬಹಳವಾಗಿ ಸುತ್ತಿ ಸುತ್ತಿ ಮುಂದುವರೆಯಬೇಕಾಗುತ್ತದೆ. ಬಹಳವಾಗಿ ಕಷ್ಟಪಡಬೇಕಾಗುತ್ತದೆ. ಹೃದಯದಲ್ಲಿ ರಾಗಭಕ್ತಿಯುಂಟಾಯಿತು ಎಂದರೆ ಆಗ ಎಲ್ಲವೂ ಸುಲಭವಾಗಿಬಿಡುತ್ತದೆ. ವಿವೇಕ, ವೈರಾಗ್ಯ, ಗುರುವಾಕ್ಯದಲ್ಲಿ ಶ್ರದ್ಧೆ ಇವು ಇದ್ದವು ಎಂದರೆ ಸಾಧಕನಿಗೆ ಯಾವ ಕಷ್ಟವೂ ಉಂಟಾಗದು.’

ನಿಜವಾಗಿ ಸಾಧನೆ ಮಾಡಬೇಕು ಎನ್ನುವವರಿಗೆ ಈ ತೆರನಾದ ಉಪಾಯಗಳನ್ನು ಪರಮಹಂಸರು ತಿಳಿಸುತ್ತಾರೆ. ಯಾರು ತಮ್ಮ ಮನಃಶಕ್ತಿಯಿಂದ ಆಸೆಲಾಲಸೆಗಳಿಂದ ಮುಕ್ತರಾಗುತ್ತಾರೋ ಸಂಪೂರ್ಣ ವೈರಾಗ್ಯವನ್ನು ಪಡೆಯುತ್ತಾರೋ ಅವರನ್ನು ಕುರಿತು ಪರಮಹಂಸರು ಹೀಗೆ ತಿಳಿಸುತ್ತಾರೆ; ‘ಭಗವಂತನ ಕೃಪೆಯಿಂದ ಆತನಲ್ಲಿ ತೀವ್ರ ವೈರಾಗ್ಯ ಉಂಟಾದದ್ದೇ ಆದರೆ ಆಗ ಆತ ಕಾಮಕಾಂಚನಾಸಕ್ತಿಗಳಿಂದ ಮುಕ್ತನಾಗಬಲ್ಲ. ಯಾವುದಕ್ಕೆ ತೀವ್ರ ವೈರಾಗ್ಯ ಅಂತ ಹೆಸರು? ಮಂದ ವೈರಾಗ್ಯವಿರುವವನು ಹೇಳುತ್ತಾನೆ: ‘‘ಎಲ್ಲ ಸಕಾಲಕ್ಕೆ ನಿಧಾನವಾಗಿ ಬರಲಿ; ಈಗ ಸದ್ಯ ನಾನು ಸುಮ್ಮನೆ ಭಗವಂತನ ನಾಮಜಪ ಮಾಡುತ್ತಿರುತ್ತೇನೆ.’’ ಆದರೆ ಯಾರಲ್ಲಿ ತೀವ್ರ ವೈರಾಗ್ಯ ಉಂಟಾಗಿದೆಯೋ, ಆತ ಹೇಗೆ ತಾಯಿ ತನ್ನ

ಮಗುವಿಗಾಗಿ ವ್ಯಾಕುಲಳಾಗಿರುತ್ತಾಳೊ ಹಾಗೆಯೇ ಭಗವಂತನಿಗಾಗಿ ಬಹಳವಾಗಿ ವ್ಯಾಕುಲಪಡುತ್ತಿರುತ್ತಾನೆ. ತೀವ್ರ ವೈರಾಗ್ಯವುಳ್ಳವನಿಗೆ ಭಗವಂತನ ಹೊರತು ಇನ್ನೇನೂ ಬೇಕೆನಿಸುವುದಿಲ್ಲ.’’ ಇದೇ ನಿಜವಾದ ಸಾಧಕನ ಮನಃಸ್ಥಿತಿ.