ನ್ಯೂಸ್

ಸೇನಾ ವಸ್ತು ಸಂಗ್ರಹಾಲಯಕ್ಕೆ ಮೊದಲ ಪರಮವೀರ ಚಕ್ರ

ಕಾರವಾರ: ಸೇವೆಯಲ್ಲಿರುವಾಗಲೇ ಭಾರತೀಯ ಸೇನೆಯ ಅತ್ಯುನ್ನತ ಗೌರವ ಪರಮವೀರ ಚಕ್ರ ಪಡೆದ ಮೊದಲ ಸೇನಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೇಜರ್ ರಾಮಾ ರಾಘೊಬಾ ರಾಣೆ ಅವರ ಪರಮವೀರ ಚಕ್ರ ಸೇವಾ ಪದಕ ಸೇನಾ ವಸ್ತು ಸಂಗ್ರಹಾಲಯ ಸೇರಿದೆ.

ಪುಣೆಯಲ್ಲಿ ನಡೆದ ಪರೇಡ್​ನಲ್ಲಿ ರಾಘೊಬಾ ಪತ್ನಿ ರಾಜೇಶ್ವರಿ ರಾಣೆ (84) ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಅವರಿಗೆ ಪದಕವನ್ನು ಹಸ್ತಾಂತರಿಸಿದರು. ಭಾರತೀಯ ಸೇನೆಯ ಬಾಂಬೆ ಇಂಜಿನಿಯರ್ ಗ್ರೂಪ್ (ಬಾಂಬೆ ಸ್ಯಾಪರ್ಸ್) ಪುಣೆಯಲ್ಲಿ ವಸ್ತು ಸಂಗ್ರಹಾಲಯ ನಿರ್ವಿುಸುತ್ತಿದೆ. ಅದರಲ್ಲಿ ಪರಮವೀರ ಚಕ್ರ ಸೇರಿ 200 ವರ್ಷಗಳ ಹಳೆಯ ಯುದ್ಧ ಸಂಬಂಧಿ ಅಪೂರ್ವ ವಸ್ತುಗಳನ್ನು ಸಂಗ್ರಹಿಸಲಾಗುತ್ತಿದೆ.

ಯಾರಿವರು ರಾಮಾ ರಾಘೊಬಾ ರಾಣೆ..? ರಾಮಾ ರಾಘೊಬಾ ರಾಣೆ ಕಾರವಾರದ ಚೆಂಡಿಯಾ ಗ್ರಾಮದವರು. 1918ರಲ್ಲಿ ಹುಟ್ಟಿದ ಅವರು 22ನೇ ವಯಸ್ಸಿನಲ್ಲಿ ಬ್ರಿಟಿಷ್ ಭಾರತೀಯ ಸೇನೆಗೆ ಜವಾನ ರಾಗಿ ಸೇರಿದ್ದರು. ಆಗ ನಡೆದಿದ್ದ ಮಹಾ ಯುದ್ಧದಲ್ಲಿ ಅವರು ತೋರಿದ ಪರಾಕ್ರಮ ನೋಡಿ ಅವರಿಗೆ ಅಧಿಕಾರಿಯಾಗಿ ಬಡ್ತಿ ಸಿಕ್ಕಿತು. 1947ರಲ್ಲಿ ಭಾರತ ಸ್ವಾತಂತ್ರ್ಯ ಬಳಿಕ ನಡೆದ ಭಾರತ -ಪಾಕಿಸ್ತಾನ ಯುದ್ಧದಲ್ಲಿ ರಾಘೊಬಾ ತಂಡದ ನೇತೃತ್ವ ವಹಿಸಿದ್ದರು. ಬಾಂಬೆ ಇಂಜಿನಿಯರ್ಸ್ ಗ್ರೂಪ್​ನ 2ನೇ ಲೆಫ್ಟಿನೆಂಟ್ ಆಗಿದ್ದ ಅವರು, 1948ರ ಏಪ್ರಿಲ್​ನಲ್ಲಿ ರಾಜೌರಿ ಪ್ರಾಂತ್ಯವನ್ನು ವಶಕ್ಕೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಯುದ್ಧ ಕೌಶಲ ಹಾಗೂ ವೀರತ್ವದಿಂದ ಭಾರತೀಯ ಸೇನೆಯ ಟ್ಯಾಂಕರ್​ಗಳು ಪಾಕಿಸ್ತಾನಿ ಸೇನೆಯನ್ನು ಛಿದ್ರ ಮಾಡಲು ಕಾರಣವಾದವು. ಇದರಿಂದ ಅವರಿಗೆ 1948ರ ಏಪ್ರಿಲ್​ನಲ್ಲೇ ಪರಮವೀರ ಚಕ್ರ ಪದಕ ನೀಡಿ ಗೌರವಿಸಲಾಗಿತ್ತು. ಮುಂದೆ ಅವರು ಮೇಜರ್ ಆಗಿ ಬಡ್ತಿ ಹೊಂದಿ ಭಾರತೀಯ ಸೇನೆಯಲ್ಲಿ 28ವರ್ಷ ಸೇವೆ ಸಲ್ಲಿಸಿ 1968ರಲ್ಲಿ ನಿವೃತ್ತಿ ಹೊಂದಿದ್ದರು.

ಸ್ಮಾರಕ ನಿರ್ಮಾಣ: ರಾಮಾ ರಾಘೊಬಾ ರಾಣೆ 1994ರಲ್ಲಿ ಪುಣೆಯಲ್ಲಿ 76ನೇ ವಯಸ್ಸಿನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಬಾಂಬೆ ಇಂಜಿನಿಯರ್ಸ್ ಗ್ರೂಪ್ ಆವರಣದಲ್ಲೇ ನೆರವೇರಿಸಲಾಗಿದೆ. ಅವರ ಶೂರತ್ವ ಇತರರಿಗೆ ಮಾದರಿಯಾಗಲಿ ಎಂಬ ಕಾರಣಕ್ಕೆ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ, ಕಾರವಾರದ ಟ್ಯಾಗೋರ್ ತೀರದಲ್ಲಿ ರುವ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಆವರಣದಲ್ಲಿ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ರಾಣೆ ಅವರ ಕುಟುಂಬ ಪುಣೆಯಲ್ಲೇ ನೆಲೆಸಿದೆ.

ಬಾಂಬೆ ಇಂಜಿನಿಯರ್ ಗ್ರೂಪ್​ನ ಸದಸ್ಯರು ನಮ್ಮ ಮನೆಯ ಸದಸ್ಯರಿದ್ದಂತೆ. ಈ ಗ್ರೂಪ್​ನ ಯುವ ಸದಸ್ಯರಿಗೆ ಪರಮವೀರ ಚಕ್ರ ಮಾದರಿಯಾಗಲಿ ಎಂಬ ಕಾರಣಕ್ಕೆ ಅದನ್ನು ಹಸ್ತಾಂತರಿಸಲಾಗಿದೆ. | ರಾಜೇಶ್ವರಿ ರಾಮಾ ರಾಘೊಬಾ ರಾಣೆ ಪತ್ನಿ

| ಸುಭಾಸ ಧೂಪದಹೊಂಡ