ನ್ಯೂಸ್

ಚೀನಾದೊಂದಿಗೆ ಮೊದಲ ಒಪ್ಪಂದ ಆಗಿದ್ದು ಎಚ್​ಡಿಡಿ ಪ್ರಧಾನಿಯಾಗಿದ್ದಾಗ...: ಎಚ್​. ಡಿ.ಕುಮಾರಸ್ವಾಮಿ

ದೇವನಹಳ್ಳಿ: 45 ವರ್ಷಗಳ ನಂತರ ಭಾರತ ಮತ್ತು ಚೀನಾ ನಡುವೆ ಈಗ ಯುದ್ಧದ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರಹಳ್ಳಿ ಗ್ರಾಮ ಪಂಚಾಯತಿ ಉದ್ಘಾಟನೆಗೆ ಆಗಮಿಸಿದ್ದ ಅವರು ಮಾತನಾಡಿ, 1967ರ ಯುದ್ಧದ ನಂತರ ಎರಡೂ ದೇಶಗಳ ನಡುವೆ ಸಾಮರಸ್ಯ ಇರಲಿಲ್ಲ. ಅದಾದ 25 ವರ್ಷಗಳ ನಂತರ ಚೀನಾದ ಅಧ್ಯಕ್ಷರು ಭಾರತಕ್ಕೆ ಬಂದಿದ್ದರು. ಆಗ ಎಚ್​.ಡಿ. ದೇವೇಗೌಡರು ಪ್ರಧಾನಿಯಾಗಿದ್ದರು. ಎಚ್​ಡಿಡಿ ಪ್ರಧಾನಿಯಾಗಿದ್ದಾಗ ಮೊದಲ ಬಾರಿಗೆ ಒಪ್ಪಂದ ಆಗಿದೆ. ಆದರೆ ಅಂದು ದೊಡ್ಡ ಮಟ್ಟದ ಪ್ರಚಾರ ಸಿಗಲಿಲ್ಲ ಎಂದು ಹೇಳಿದರು. ಇದನ್ನೂ ಓದಿ:‘ಗಾಲ್ವಾನ್ ಕಣಿವೆ ನಮ್ಮದು…ಭಾರತೀಯ ಯೋಧರು ಪ್ರಚೋದಿಸುವುದನ್ನು ನಿಲ್ಲಿಸಲಿ’- ಚೀನಾ ಸರ್ಕಾರ

ಕನ್ನಡಿಗ ಪ್ರಧಾನಿ ಪ್ರಚಾರ ಪಡೆಯದೆ ದೇಶವನ್ನು ರಕ್ಷಣೆ ಮಾಡಲು ಅನೇಕ ಕೆಲಸಗಳನ್ನು ಮಾಡಿದ್ದಾರೆ. ಅಂದು ಅವರು ಮಾಡಿದ ಕೆಲಸವನ್ನು ನೆನಪಿಸಿಕೊಳ್ಳುವ ಕೆಲಸವನ್ನೂ ಯಾರೂ ಮಾಡಲಿಲ್ಲ. ಆಗ ನಾನು ಎಂಪಿ ಆಗಿದ್ದೆ. ಅದೆಲ್ಲವೂ ಈಗ ಇತಿಹಾಸ ಎಂದು ಕುಮಾರಸ್ವಾಮಿಯವರು ತಿಳಿಸಿದರು.

ಈಗಿನ ನಮ್ಮ ಪ್ರಧಾನಮಂತ್ರಿಯವರು ಇಡೀ ವಿಶ್ವದಲ್ಲೇ ಬಲಾಢ್ಯ ಪ್ರಧಾನಿ ಎನ್ನಲಾಗುತ್ತಿದೆ. ಬಲಾಡ್ಯತೆ ಹೊಂದುವುದು ಬೇರೆ. ಅಕ್ಕಪಕ್ಕದ ದೇಶಗಳ ಜತೆ ಶಾಂತಿಯುತವಾಗಿ, ವಿಶ್ವಾಸದಿಂದ ಇದ್ದು, ಕೆಲಸ ಮಾಡಬೇಕು ಎಂದರು. ಇದನ್ನೂ ಓದಿ: ಮೋದಿ ನಾಯಕತ್ವದಲ್ಲಿ ಚೀನಾ ವಿರುದ್ಧ ಪ್ರತೀಕಾರ ನಿಶ್ಚಿತ ಎಂದ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್​

ಚೀನಾದವರು ದಬ್ಬಾಳಿಕೆಯಿಂದ ನಮ್ಮ ದೇಶವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ನಮ್ಮ ಯೋಧರು ಎಲ್ಲ ರೀತಿಯಿಂದಲೂ ಸಮರ್ಥರಿದ್ದಾರೆ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಯನ್ನು ಚೀನಾ ಹುಡುಗಾಟಿಕೆ ಎಂದು ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈಗಾಗಲೇ ಜಗತ್ತಿನಾದ್ಯಂತ ಕರೊನಾದಿಂದ ಸಾವು ಉಂಟಾಗುತ್ತಿದೆ. ಹೀಗಾಗಿ ಪರಸ್ಪರ ಶಾಂತಿ ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳೋಣ. ಚರ್ಚೆಯ ಹಂತದಲ್ಲೇ ರೀತಿಯ ಯೋಧರ ಹತ್ಯೆಯಾಗಿರೋದು ಖಂಡನೀಯ. ಚೀನಾ ದೇಶದ ನಡುವಳಿಕೆ ಸರಿ ಇಲ್ಲ.ಆದಷ್ಟು ಹೊಂದಾಣಿಕೆ, ಮಾತುಕತೆಗಳ ಮೂಲಕ ಈ ಬಿಕ್ಕಟ್ಟು ಶಮನ ಮಾಡಿಕೊಳ್ಳಬೇಕು. ಜವಾಬ್ದಾರಿಯುತ ಸ್ಥಾನಮಾನದಲ್ಲಿರುವವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)