ಶಿವಮೊಗ್ಗ: ಹಿಂದು ರಾಷ್ಟ್ರದ ಸ್ಥಾಪನೆ ಒಂದು ದಿನಕ್ಕೆ ಅಥವಾ ಒಂದೇ ವರ್ಷದಲ್ಲೇ ಆಗುವ ಕೆಲಸವಲ್ಲ. ನಿರಂತರವಾಗಿ ಆಗಬೇಕಿದೆ. ಆಗ ಮಾತ್ರ ಹಿಂದು ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಕೂಡಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಬೆಕ್ಕಿನಕಲ್ಮಠದ ಸಭಾಂಗಣದಲ್ಲಿ ಭಾನುವಾರ ಹಿಂದು ರಾಷ್ಟ್ರ ಸ್ಥಾಪನೆಗಾಗಿ ಹಿಂದು ಜನ ಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದು ರಾಷ್ಟ್ರ ಜಿಲ್ಲಾ ಅಧಿವೇಶನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹಿಂದು ರಾಷ್ಟ್ರದ ಕಲ್ಪನೆ ಒಬ್ಬರಿಂದ, ಇಬ್ಬರಿಂದ ಆಗುವ ಕೆಲಸವಲ್ಲ. ಈ ನಾಡಿನ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರ ನಮ್ಮದು ಪೂರ್ಣಪ್ರಮಾಣದಲ್ಲಿ ಹಿಂದು ರಾಷ್ಟ್ರವಾಗಲಿದೆ ಎಂದರು.
ನಮ್ಮಲ್ಲಿರುವ ಜಾತಿ ಜಾತಿಗಳ ನಡುವಿನ ಅವಿಶ್ವಾಸವನ್ನು ತೊಡೆದು ಹಾಕಬೇಕೇ ಹೊರತು ಜಾತಿಯನ್ನಲ್ಲ. ದೇಶದಲ್ಲಿ ಅನಾದಿಕಾಲದಿಂದ ಇದುವರೆಗೂ ಪೋಷಿಸಿಕೊಂಡು ಬಂದಿರುವ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದರು.
ಯಾವುದೋ ಒಂದು ಜಾತಿಯವರು ಪ್ರಧಾನಿ ಅಥವಾ ಮುಖ್ಯಮಂತ್ರಿ ಆದರೆ ಆತನ ಜಾತಿಯವರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತಾರೆಂಬ ಅವಿಶ್ವಾಸ ಎಲ್ಲರಲ್ಲಿಯೂ ಮೂಡುತ್ತಿದೆೆ. ಅಂತಹ ಮನಸ್ಥಿತಿಯಿಂದ ಮೊದಲು ಹೊರಬರಬೇಕು. ಅಧಿಕಾರಸ್ಥರು ಕೂಡ ಎಲ್ಲ ಜಾತಿಯವರನ್ನು ಸಮಾನವಾಗಿ ಕಾಣಬೇಕಾಗುತ್ತದೆ. ಅವಿಶ್ವಾಸಕ್ಕೆ ಕಾರಣ ಏನೆಂಬುದನ್ನು ಕಂಡು ಹಿಡಿದು ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕೆ ಅಕಾಡೆಮಿಕ್ ಅಧ್ಯಯನಗಳನ್ನು ನಡೆಸಬೇಕಿದೆ ಎಂದರು.
ಹಿಂದು ಸಂಘಟನೆಯ ಪ್ರಮುಖ ಗುರುಪ್ರಸಾದ್ ಗೌಡ, ಹಿಂದು ರಾಷ್ಟ್ರ ಸೇನೆ ರಾಜ್ಯಾಧ್ಯಕ್ಷ ಜಿ.ಸಂದೀಪ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀನದಯಾಳ್ ಉಪಸ್ಥಿತರಿದ್ದರು.