ನ್ಯೂಸ್

ಪರಿಸರ ಹಿತವೇ ಮುಖ್ಯವಾಗಬೇಕು; ಜಾಗತಿಕ ತಾಪಮಾನ ಏರಿಕೆಯಿಂದ ಹಲವು ಸಮಸ್ಯೆ

Webdesk - Ravikanth

ಇತ್ತೀಚಿನ ವರ್ಷಗಳಲ್ಲಿ ಅಕಾಲಿಕ ಮಳೆ, ಪ್ರವಾಹ, ಮತ್ತೊಂದೆಡೆ ತೀವ್ರ ಬರಗಾಲದಂಥ ಸ್ಥಿತಿ ಮತ್ತೆ ಮತ್ತೆ ಉದ್ಭವವಾಗುತ್ತಿರುವುದನ್ನು ಜಾಗತಿಕ ವಲಯ ಗಂಭೀರವಾಗಿ ಪರಿಗಣಿಸಬೇಕಿದೆ. ಮೇಲ್ನೋಟಕ್ಕೆ ಇವು ‘ಪ್ರಾಕೃತಿಕ ವಿಕೋಪ’ ಎನಿಸಿದರೂ, ಮಾನವ ಹಸ್ತಕ್ಷೇಪವೇ ಇಂಥ ಅಪಸವ್ಯಗಳಿಗೆ ಕಾರಣ ಎಂಬುದು ರಹಸ್ಯವಾಗಿ ಉಳಿದಿಲ್ಲ. ಆಧುನಿಕತೆ ಹೆಸರಿನಲ್ಲಿ ಮಾನವ ಚಟುವಟಿಕೆಗಳು ವಾಯು, ಜಲ, ಭೂಮಿಯನ್ನು ತೀವ್ರ ಪ್ರಮಾಣದಲ್ಲಿ ಕಲುಷಿತಗೊಳಿಸುತ್ತಿವೆ. ಜತೆಗೆ ಸರ್ಕಾರಗಳ ನೀತಿಗಳು ಕೂಡ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡದೆ ಪರಿಸರವನ್ನು ಶೋಷಿಸುತ್ತಿವೆ. ನಿಸರ್ಗಸ್ನೇಹಿಯಾಗಿ ಬದುಕುವುದೇ ಸಾರ್ಥಕವಾದ ಜೀವನಶೈಲಿ. ಇದೇ ಬಗೆಯ ಸಂಸ್ಕೃತಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿತ್ತು. ಆದರೆ, ನಿಸರ್ಗದೊಂದಿಗೆ ಸ್ಪರ್ಧೆ, ಸಂಘರ್ಷಕ್ಕೆ ಇಳಿದರೆ ಅದರಿಂದ ಮನುಕುಲಕ್ಕೆ ಆಪತ್ತು ಎಂಬ ಕಠೋರ ಸತ್ಯವನ್ನು ಅಂತಾರಾಷ್ಟ್ರೀಯ ವಲಯ ಅರ್ಥಮಾಡಿಕೊಳ್ಳಬೇಕಿದೆ.

ಜಾಗತಿಕ ತಾಪಮಾನ ಏರಿಕೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಧಿಕ ಮಳೆ ಸುರಿಯುವುದು ನಿಶ್ಚಿತ ಎಂದು ವಿಜ್ಞಾನಿಗಳ ತಂಡ ಎಚ್ಚರಿಸಿದೆ. ಕಳೆದ ತಿಂಗಳು ಯುರೋಪ್​ನಲ್ಲಿ ಸುರಿದ ಭಾರಿ ಮಳೆ, ಅದರಿಂದ ಉಂಟಾದ ಪ್ರವಾಹಕ್ಕೆ ಜಾಗತಿಕ ತಾಪಮಾನದ ಏರಿಕೆಯೇ ಕಾರಣವಾಗಿರಬಹುದು, ಈ ನಿಟ್ಟಿನಲ್ಲಿ ಇನ್ನಷ್ಟು ನಿಖರ ಅಧ್ಯಯನ ನಡೆಸಲಾಗುತ್ತಿದೆ. ಹವಾಮಾನದಲ್ಲಿ 1 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನ ಏರಿಕೆಯಾದರೆ ಗಾಳಿಯು ನೀರನ್ನು ಹೀರಿಕೊಳ್ಳುವ ಪ್ರಮಾಣ ಶೇಕಡ 7ರಷ್ಟು ಹೆಚ್ಚುತ್ತದೆ, ಇದರಿಂದ ಮಳೆಯ ಪ್ರಮಾಣ ಅಧಿಕವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಜುಲೈ 14 ಮತ್ತು 15ರಂದು ಸುರಿದ ಭಾರಿ ಮಳೆ, ಪ್ರವಾಹದಿಂದ 220 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ವಿಶ್ವಸಂಸ್ಥೆಯ ಅಂತರ್-ಸರ್ಕಾರಿ ತಾಪಮಾನ ಬದಲಾವಣೆ ಸಮಿತಿಯ ಇತ್ತೀಚಿನ ವರದಿ ಕೂಡ ಜಾಗತಿಕ ತಾಪಮಾನ ಏರಿಕೆ ಕುರಿತಂತೆ ಎಚ್ಚರಿಸಿತ್ತು. ಭೂಮಿಯ ತಾಪಮಾನ 2023ರ ಹೊತ್ತಿಗೆ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಲಿದೆ. ಇದು ಈ ಮುಂಚೆ ಅಂದಾಜಿಸಿದ್ದಕ್ಕಿಂತ ಒಂದು ದಶಕ ಮುಂಚಿತವೇ ಸಂಭವಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಸಮುದ್ರ ಮಟ್ಟವೂ ವೇಗವಾಗಿ ಹೆಚ್ಚುತ್ತಿದೆ. ಭೂಮಿಯ ತಾಪಮಾನದ ತೀವ್ರ ಏರಿಕೆಯಿಂದಾಗಿ ಮುಂದಿನ ಕೆಲವು ದಶಕಗಳಲ್ಲಿ ಭಾರತದಲ್ಲಿ ಉಷ್ಣ ಮಾರುತಗಳು ಹೆಚ್ಚಲಿದ್ದು ಚಂಡಮಾರುತದ ಪ್ರಕೋಪವೂ ಅಧಿಕವಾಗಲಿದೆ ಎಂದು ವರದಿ ಬೊಟ್ಟು ಮಾಡಿದೆ.

ನಾವು ಸಾಗಬೇಕಿರುವ ಹಾದಿಯನ್ನು, ಜೀವನಶೈಲಿಯನ್ನು ಬದಲಿಸಬೇಕಿರುವುದು ಅನಿವಾರ್ಯ. ಅಲ್ಲದೆ, ‘ಪರಿಸರ ಸಂರಕ್ಷಣೆ’ ಎಂಬುದು ಕೇವಲ ಸರ್ಕಾರಗಳ ಹೊಣೆಯಲ್ಲ. ಇದರಲ್ಲಿ, ಜನರ ಸಹಭಾಗಿತ್ವವೂ ಅಗತ್ಯ. ಪ್ರಕೃತಿಯನ್ನು ಶೋಷಿಸದೆ ಬದುಕುತ್ತೇನೆ ಎಂಬ ಜನರ ವೈಯಕ್ತಿಕ ಸಂಕಲ್ಪ ದೊಡ್ಡ ಬದಲಾವಣೆಗೆ ಕಾರಣವಾಗಬಲ್ಲದು. ಈಗ ನಮ್ಮನ್ನು ರಕ್ಷಿಸಿಕೊಳ್ಳಲು, ವಿಕೋಪಗಳಿಂದ ಪಾರಾಗಲಾದರೂ ಪರಿಸರ ರಕ್ಷಣೆ ಎಂಬುದು ಜೀವನಮಂತ್ರವಾಗಬೇಕಿದೆ. ಇನ್ನು ನಿರ್ಲಕ್ಷ್ಯ ವಹಿಸಿದರೆ ಅಪಾಯ ತಪ್ಪಿದ್ದಲ್ಲ ಎಂಬ ವಾಸ್ತವ ಮನಗಾಣಲು ಇದು ಸಕಾಲ.