ಬೆಂಗಳೂರು: ಕೆ.ಆರ್.ಪುರದ ಬಳಿಯ ಕಸ್ತೂರಿನಗರದಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಕಾರ್ತಿಕೇಯನ್ (೫೪) ಎಂಬ ಆರ್ಕಿಟೆಕ್ಟ್ ಇಂಜಿನಿಯರ್ ಶನಿವಾರ ಮೃತಪಟ್ಟಿದ್ದಾರೆ.
ಕಸ್ತೂರಿನಗರ ನಿವಾಸಿಯಾದ ಕಾರ್ತಿಕೇಯನ್, ಸೆ.೨೧ರಂದು ಮನೆಗೆ ನಡೆದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ನಿರ್ಲಕ್ಷ್ಯದಿಂದ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡ ಬಂದ ಸವಾರ ರಸ್ತೆ ದಾಟುತ್ತಿದ್ದ ಕಾರ್ತಿಕೇಯನ್ ಅವರಿಗೆ ವಾಹನ ಗುದ್ದಿಸಿದ್ದ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಾರ್ತಿಕೇಯನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಂತರ ಬೈಕ್ ಸವಾರ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ಬೈಕ್ ಸವಾರನ ಪತ್ತೆ ಕಾರ್ಯ ಮುಂದುವರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.