ಬೆಂಗಳೂರು: ಜನರ ಆಶೀರ್ವಾದ ಹಾಗೂ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಗೆದ್ದಿದ್ದೇವೆಯೇ ಹೊರತು, ಶತ್ರು ಭೈರವಿ ಯಾಗ ಮಾಡಿ ಅಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ.ಕುಮಾರಸ್ವಾಮಿ ಹೇಳಿದರು.
ಮಂಡ್ಯ ಲೋಕಸಭೆ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ನಾವು ಯಾವುದೇ ಕುರಿ, ಮೇಕೆ, ಎಮ್ಮೆ ಕಡಿದು ಗೆದ್ದಿಲ್ಲ. ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ ಎಂದು ಕುಮಾರಸ್ವಾಮಿ ತಿರುಗೇಟು ಕೊಟ್ಟರು.
ಸೂರ್ಯ,ಚಂದ್ರ ಇರುವುದು ಎಷ್ಟು ಸತ್ಯವೋ ಕುಮಾರಸ್ವಾಮಿ ಸೋಲುವುದೂ ಅಷ್ಟೇ ಸತ್ಯ ಎಂದು ಮಂಡ್ಯದಲ್ಲಿ ಮುಖ್ಯಮಂತ್ರಿಗಳು ಹೇಳಿದ್ದರು. ಈಗ ಅವರ ಪ್ರಕಾರ ಸೂರ್ಯ ಹುಟ್ಟುತ್ತಾನೋ ಇಲ್ಲವೋ ನೋಡೋಣ ಎಂದು ಕುಟುಕಿದರು.
ಮಂಡ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಮಂಡ್ಯ ಯಾವತ್ತೂ ನನ್ನ ಕೈ ಬಿಡಲ್ಲ, ಬಿಡುವುದೂ ಇಲ್ಲ ಎಂದು ಕುಮಾರಸ್ವಾಮಿ ಅವರು ಭಾವುಕರಾಗಿ ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಂಘಟಿತ ಶ್ರಮದಿಂದ ಅಲ್ಲಿಯೂ ನಮ್ಮ ಅಭ್ಯರ್ಥಿ ಮಲ್ಲೇಶ್ ಬಾಬು ಜಯ ಗಳಿಸಿದ್ದಾರೆ ಎಂದು ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೈತ್ರಿಕೂಟಕ್ಕೆ ಜನರು ಮನ್ನಣೆ ನೀಡಿದ್ದಾರೆ. ಮೋದಿಯವರು ಎರಡೂವರೆ ತಿಂಗಳು ಶ್ರಮವಹಿಸಿ ಗೆಲುವಿಗೆ ಶ್ರಮಿಸಿದ್ದಾರೆ. ಇಡೀ ದೇಶವನ್ನು ಸುತ್ತಿದ್ದಾರೆ. ಎನ್‌ಡಿಎ ಸಾಧನೆಯಲ್ಲಿ ಅವರ ಪಾತ್ರ ದೊಡ್ಡದು ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ನಾನು ನೂರಾ ಮೂವತ್ತಾರು ಸ್ಥಾನ ಗೆದ್ದಿದ್ದೀನಿ. ಜೆಡಿಎಸ್ ಕೇವಲ ಹತ್ತೊಂಬತ್ತು ಸ್ಥಾನ ಮಾತ್ರ ಗೆದ್ದಿದೆ ಎಂಬ ದುರಂಹಕಾರದ ಮಾತುಗಳನ್ನು ಆಡಿದ್ದರು ಒಬ್ಬರು. ಅದಕ್ಕೆ ಉತ್ತರವಾಗಿ ಈ ಫಲಿತಾಂಶ ಬಂದಿದೆ. ಎಲ್ಲ ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಹಣದ ಹೊಳೆ ಹರಿಸಿದರು. ಅದರಿಂದ ಕೆಲ ಕ್ಷೇತ್ರಗಳಲ್ಲಿ ನಮಗೆ ಹಿನ್ನೆಡೆ ಆಗಿದೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ಸಿಗೆ ಇಷ್ಟು ಸ್ಥಾನ ಬಂದಿದೆ ಎಂದು ನಾನಂತೂ ಹೇಳಲ್ಲ. ನಮ್ಮ ಮೈತ್ರಿಯನ್ನು ಜನ ಒಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ಜೆಡಿಎಸ್ ಮಹಿಳಾ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಮೊದಲಾದವರು ಉಪಸ್ಥಿತರಿದ್ದರು.