ನ್ಯೂಸ್

VIDEO | ಪಡಿತರಿಗೆ ವಿತರಿಸಲು ಇಟ್ಟಿದ್ದ ಅಕ್ಕಿ ಗೋದಾಮಿಗೆ ಕನ್ನ ಹಾಕಿದ ಆನೆ!

ಹಾಸನ: ಪಡಿತರಿಗೆ ವಿತರಿಸಲು ಇಟ್ಟಿದ್ದ ಅಕ್ಕಿ ಗೋದಾಮಿಗೆ ಆನೆಯೊಂದು ಕನ್ನ ಹಾಕಿದೆ! ಹೌದು, ಆನೆಯೊಂದು ಬೇಲೂರು ತಾಲೂಕಿನ ಅನುಘಟ್ಟ ಸಹಕಾರ ಸಂಘದ ಗೋದಾಮಿನ ಬಾಗಿಲು ಮುರಿದು ಮೂಟೆಯಲ್ಲಿದ್ದ ಅಕ್ಕಿ ತಿಂದಿದೆ. ಆನೆ ಬಾಗಿಲು ಮುರಿದು ನುಸುಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕಳೆದ ವರ್ಷ ಏಪ್ರಿಲ್​ನಲ್ಲಿ ಇದೇ ಆನೆ ದಾಳಿ ಮಾಡಿದ್ದ ಗೋದಾಮಿಗೆ ಪುನ ದಾಳಿ‌ ಮಾಡಿದೆ. ಅನ್ನ ಭಾಗ್ಯ ಯೋಜನೆಯಡಿ ಗೋದಾಮಿನಲ್ಲಿ 50 ಕ್ವಿಂಟಾಲ್ ಅಕ್ಕಿ ಹಾಗೂ ಗೋಧಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಗಂಟೆಗೂ ಹೆಚ್ಚು ಕಾಲ ಗೋದಾಮಿನ ಬಾಗಿಲು ಮರಿಯಲು ಯತ್ನಿಸಿದ ಆನೆ, ಕೊನೆಗೆ ಅಕ್ಕಿ ಗೋಣಿಯನ್ನು ಹೊರಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಆನೆ ಒಂದು ಗೋಣಿ ಅಕ್ಕಿಯನ್ನು ತಿಂದಿದೆ. 2 ಗೋಣಿ ಅಕ್ಕಿ ಚೀಲವನ್ನು ಸೊಸೈಟಿಯ ಹೊರಭಾಗದಲ್ಲಿ ಎಳೆದಾಡಿದೆ. ಇದರಿಂದ ಗೋಣಿಯಲ್ಲಿದ್ದ ಅಕ್ಕಿಯೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.

ಕಳೆದ ವರ್ಷವೂ ಇದೇ ಕೃತ್ಯ ಎಸಗಿದ್ದ ಈ ಆನೆಯನ್ನು ಸೆರೆ ಹಿಡಿದು ಚಾಮರಾಜನಗರದ ಅರಣ್ಯ ಬಿಡಲಾಗಿತ್ತು. ಈ ವೇಳೆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಸದ್ಯ ಆನೆಯ ಕೃತ್ಯದಿಂದ ಸೊಸೈಟಿಯ ಪೀಠೋಪಕರಣಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.