ಶಿವಮೊಗ್ಗ: ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತಿರುವುದರಿಂದ ವ್ಯಸನ ವ್ಯಾಪಿಸುತ್ತಿದೆ. ನಮ್ಮ ಸುತ್ತಮುತ್ತ ಪರಿಸರದಲ್ಲೇ ದೊರಕುತ್ತಿರುವುದು ಆತಂಕಕಾರಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ಷಣಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಮಾದಕ ವ್ಯಸನಮುಕ್ತ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಿನಸಿ ವಸ್ತುಗಳಿಗಿಂತ ವೇಗವಾಗಿ ಮಾದಕ ವಸ್ತುಗಳು ಸಿಗುತ್ತಿವೆ. ಶಾಲಾ ಕಾಲೇಜು ಸುತ್ತ 100 ಅಡಿ ಅಂತರದಲ್ಲಿ ಮಾದಕ ವಸ್ತುಗಳು ಸಿಗುವ ಅಂಗಡಿಗಳು ಇರುವಂತಿಲ್ಲ ಎಂಬ ನಿಯಮವಿದೆ. ಆದರೆ ಮಾದಕ ವಸ್ತು ಇಷ್ಟಪಡುವ ವ್ಯಕ್ತಿ 100 ಅಡಿ ಅಷ್ಟೇ ಅಲ್ಲ, ಹತ್ತಾರು ಕಿ.ಮೀ.ವರೆಗೂ ಹೋಗಬಲ್ಲ. ಆದ್ದರಿಂದ ಮಾದಕ ವಸ್ತುಗಳೇ ಸಿಗದಂತಾಗಬೇಕು ಎಂದು ತಿಳಿಸಿದರು.
ನಮ್ಮ ಯೋಚನಾ ಶಕ್ತಿ ಬದಲಾಗಬೇಕು. ನಮಗೆ ಹಾಗೂ ನಮ್ಮ ಆರೋಗ್ಯಕ್ಕೆ ಕೆಡುಕು ಉಂಟು ಮಾಡುವುದನ್ನು ತ್ಯಜಿಸಬೇಕು. ಮಾದಕ ವಸ್ತುಗಳಿಂದ ದೂರವಿರಬೇಕೆಂಬ ಮನೋನಿರ್ಧಾರ ಹೊಂದಬೇಕು. ಅಂತಹ ಗಟ್ಟಿತನ ಪ್ರದರ್ಶಿಸಿದರೆ ಸಾಮಾಜಿಕ ಹಾಗೂ ವೈಯಕ್ತಿಕ ಬದುಕು ಗಟ್ಟಿಯಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರಡ್ಡಿ ಮಾತನಾಡಿ, ಜನ ಸಾಮಾನ್ಯರು ಮಾದಕ ವಸ್ತುಗಳಿಂದ ದೂರವಿರಬೇಕು. ನಮ್ಮ ಆರೋಗ್ಯಕ್ಕೆ ಮಾರಕ ಆಗುವುದನ್ನು ಸೇವಿಸಬಾರದು ಎಂಬ ಮನಸ್ಸು ಹೊಂದಬೇಕು ಎಂದರು.
ಶಿವಮೊಗ್ಗ ತಹಸೀಲ್ದಾರ್ ಬಿ.ಎನ್.ಗಿರೀಶ್ ಮಾತನಾಡಿ, ಮನೆಯಲ್ಲಿರುವ ಸದಸ್ಯರನ್ನು ಮಾದಕ ವಸ್ತುಗಳಿಂದ ದೂರವಿರಿಸಬೇಕು ಎಂಬುದು ಶ್ರೀಗಳ ಸಂದೇಶವಾಗಿತ್ತು. ತಪ್ಪುಗಳನ್ನು ತಿದ್ದಿಕೊಂಡು ಸರಿದಾರಿಗೆ ಬರುವುದೇ ಮಾನವನ ಗುಣ. ಒಮ್ಮೆ ನೀವು ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳಿ. ನಿಮ್ಮ ಇಚ್ಛಾಶಕ್ತಿಗೆ ಅನುಗುಣವಾಗಿ ಹಾಗೂ ಮನಸ್ಸಿನ ಗುರಿಗೆ ತಕ್ಕಂತೆ ಸ್ನೇಹ ಬೆಳೆಸಿ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ಡಿಎಚ್‌ಒ ಡಾ. ನಟರಾಜ್, ಡಿಡಿಪಿಐ ಸಿ.ಆರ್.ಪರಮೇಶ್ವರ್, ತಹಸೀಲ್ದಾರ್ ಬಿ.ಎನ್.ಗಿರೀಶ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಮಾರುತಿ, ಡಾ. ಪ್ರಮೋದ್, ಡಾ. ಕಿರಣ್, ಉಮೇಶ್, ಸತೀಶ್, ವಾರ್ತಾ ಇಲಾಖೆಯ ಭಾಗ್ಯಾ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಡಾ. ಮಹಾಂತ ಶಿವಯೋಗಿಗಳು ಜನಿಸಿದ ಆ. 1ರಂದು ಮಾದಕ ವ್ಯಸನಮುಕ್ತ ದಿನ ಆಚರಿಸುತ್ತಿದ್ದೇವೆ. ಆ ಮಹನೀಯರು ಪ್ರಾತಕಾಲ ಸ್ಮರಣೀಯರು. ಅವರು ತಮ್ಮ ಜೋಳಿಗೆ ಮೂಲಕ ಪ್ರತಿ ಮನೆ ಮನೆ, ಗಲ್ಲಿ ಗಲ್ಲಿ ಓಣಿಗಳನ್ನು ತಿರುಗಿ ಅವರುಗಳಲ್ಲಿದ್ದ ಮಾದಕ ವಸ್ತುಗಳನ್ನು ಜೋಳಿಗೆಗೆ ಹಾಕಿಸಿಕೊಂಡು ಜನರನ್ನು ಮಾದಕ ವಸ್ತುಗಳಿಂದ ಮುಕ್ತರನ್ನಾಗಿ ಮಾಡಿದವರು.- ಅನಿಲ್‌ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ